Advertisement
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಈಗಾಗಲೇ ನಿಗದಿಯಾಗಿರುವಂತೆ ಏ.4ರಂದು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಹಲವಾರು ದಿಗ್ಗಜರು ಸಾಥ್ ನೀಡುವ ಸಾಧ್ಯತೆ ಇದೆ.
Related Articles
Advertisement
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಪರವಾಗಿ ಪ್ರಧಾನ ಮಂತ್ರಿ ಮೋದಿ ಅವರು ಭಾಷಣ ಮಾಡಿದ್ದ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ- ಶೆಟ್ಟಿಹಳ್ಳಿ ರೈಲ್ವೆ ಹಳಿ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಏಪ್ರಿಲ್ 2ರಂದು ಸಂಜೆ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯಲಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣ ನಗರಸಭೆ ಒಂದನೇ ವಾರ್ಡ್ ಚಿಕ್ಕ ಮಳೂರಿನಿಂದ ಬಸ್ ನಿಲ್ದಾಣದ ವರೆಗೆ ಏ.2 ಮಂಗಳವಾರ ಸಂಜೆ 6.30 ಇಂದ 7.30ರವರೆಗೆ ಮೂರು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಐವತ್ತು ಸಾವಿರ ಮಂದಿಯನ್ನು ತಲುಪುವ ನಿರೀಕ್ಷೆ ಇದೆ ಎನ್ನುತ್ತಾರೆ ಚನ್ನಪಟ್ಟಣದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು.
ಭಾರತೀಯ ಜನತಾ ಪಾರ್ಟಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಡಾ.ಸಿ.ಎನ್. ಮಂಜುನಾಥ್ ಅವರ ಕಾರಣ ಹಾಗೂ ಎದುರಾಳಿ ಅಭ್ಯರ್ಥಿ ಕಾಂಗ್ರೆಸ್‌ನ .ಡಿ.ಕೆ.ಸುರೇಶ್ ಅವರನ್ನು ಹೇಗಾದರೂ ಮಾಡಿ ಈ ಬಾರಿ ಬಗ್ಗು ಬಡಿಯಲೇಬೇಕು ಎಂಬ ಹಠ, ಛಲ ಹೊಂದಿದ್ದು, ಈ ನಿಟ್ಟಿ ನಲ್ಲಿ ಸ್ವತಃ ಅಮಿತ್ ಶಾ ಅವರೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮಹತ್ವವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರ ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಹೆಲಿಪ್ಯಾಡ್ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮ:ಏಪ್ರಿಲ್ 2 ರಂದು ಕೇಂದ್ರ ಸಚಿವ ಅಮಿತ್ ಶಾ ಚನ್ನಪಟ್ಟಣಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ತಂಡವು ಈಗಾಗಲೇ ಹೆಲಿಪ್ಯಾಡ್ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮಗಳು ಹಾಗೂ ಸಿದ್ಧತೆಯನ್ನು ಪರಿಶೀಲನೆ ನಡೆಸಿದೆ ಎನ್ನಲಾಗಿದೆ.
ಶಾ ಹಲವು ತಂತ್ರಗಾರಿಕೆ: ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರೇ ಕರ್ನಾಟಕ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಂತ್ರಗಾರಿಕೆ ಶುರು ಮಾಡಿದ್ದಾರೆ. ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಕಚೇರಿಗಳು ಓಪನ್ ಆಗಲಿದೆ. ಎಲ್ಲಾ ಜಿಲ್ಲಾಧ್ಯಕ್ಷರುಗಳಿಂದ ಚುನಾವಣಾ ಕಚೇರಿಗಳು ಓಪನ್ ಆಗಲಿವೆ.
ರಾಜ್ಯ ಮಟ್ಟದಲ್ಲಿ ಯಾವ ರೀತಿ ತಂತ್ರ ಮಾಡಲಾಗ್ತಿದೆ ಎಂಬುದರ ಬಗ್ಗೆ ಹಲವು ಮಾಹಿತಿ ಲಭ್ಯ ವಾಗಿದ್ದು, ಕಚೇರಿ ನಿರ್ವಹಣೆ ಸ್ಥಳೀಯ ಜಿಲ್ಲಾಧ್ಯಕ್ಷರುಗಳಿಗೇ ಜವಾಬ್ದಾರಿ ನೀಡಲಾಗಿದೆ. ಕ್ಷೇತ್ರಗಳ ಚುನಾವಣಾ ಕಚೇರಿಗಳಿಗೆ ರಾಜ್ಯ ಮಟ್ಟದಿಂದ ರಾಧಾ ಮೋಹನ್ ದಾಸ್ ಅಗರವಾಲ್ ನೇಮಕ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಯಾವ ರೀತಿ ತಂತ್ರ ಮಾಡಲಾಗ್ತಿದೆ ಅನ್ನೋ ಬಗ್ಗೆ ಅಮಿತ್ ಶಾಗೆ ರಾಧಾ ಮೋಹನ್‌ದಾಸ್ ಖುದ್ದು ಮಾಹಿತಿ ನೀಡಲಿದ್ದಾರೆ. ಜೆಪಿ ನಡ್ಡಾ ಹಾಗೂ ಅಮಿತ್ ಶಾ ಸೂಚನೆಯಂತೆ ರಾಧಾಮೋಹನ್ ದಾಸ್ ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಚುನಾವಣಾ ಚಾಣಕ್ಯ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಿಕೊಳ್ಳಲೇ ಬೇಕು ಎಂಬ ಹೆಬ್ಬಯಕೆ ಇದ್ದು, ಎದುರಾಳಿ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಈ ಬಾರಿ ಬಗ್ಗು ಬಡಿಯಲೇಬೇಕು ಎಂಬ ಹಠ, ಛಲ ಹೊಂದಿದ್ದು, ಈ ನಿಟ್ಟಿನಲ್ಲಿ ಸ್ವತಃ ಅಮಿತ್ ಶಾ ಅವರೇ ರೋಡ್ ಶೋ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. -ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ನಾಯಕರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್. ಮಂಜು ನಾಥ್ ಅವರು ಚನ್ನಪಟ್ಟಣ ತಾಲೂಕಿನಲ್ಲಿ ಅತ್ಯಧಿಕ ಮತಗಳನ್ನು ಪಡೆಯಲಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್-ಬಿಜೆಪಿ ಮುಖಂಡರು ಕಾರ್ಯಕರ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡುವುದು ಡಾ.ಮಂಜುನಾಥ್ ಅವರ ಗೆಲುವಿಗೆ ಮುನ್ನುಡಿ ಆಗಲಿದೆ. -ಹಾಪ್ ಕಾಮ್ಸ್ ಸಿ.ದೇವರಾಜು, ಜೆಡಿಎಸ್ ಹಿರಿಯ ಮುಖಂಡರು
– ಎಂ.ಶಿವಮಾದು