ಲಕ್ನೋ : ಭಾರತ ಕ್ರಿಕೆಟ್ ಆಟಗಾರ ಅಮಿತ್ ಮಿಶ್ರಾ ಅವರು ರಾಜಕೀಯ ರಂಗಕ್ಕೆ ಕಾಲಿಡುವ ಸಾಧ್ಯತೆಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಉತ್ತರಪ್ರದೇಶದಲ್ಲಿ ಚುನಾವಣಾ ಕಾವು ತೀವ್ರ ಆಗಿರುವ ವೇಳೆಯಲ್ಲೇ ಮಿಶ್ರಾ ಅವರು ಯೋಗಿ ಅವರನ್ನು ಭೇಟಿಯಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿಯೊಂದಿಗಿನ ಭೇಟಿಯು ಸಂಪೂರ್ಣ ಸಂತೋಷದ ಸಂಗತಿಯಾಗಿದೆ. ಅವರು ತುಂಬಾ ವಿನಯವಂತರು . ನಿಮ್ಮ ಸಮಯಕ್ಕೆ ತುಂಬಾ ಧನ್ಯವಾದಗಳು ಸರ್.ಎಂದು ಬರೆದಿದ್ದಾರೆ.
ಉತ್ತರ ಪ್ರದೇಶ ಮೂಲದ ಅನುಭವಿ ಬಲಗೈ ಲೆಗ್ ಬ್ರೇಕ್ ಸ್ಪಿನ್ನರ್ ಆಗಿದ್ದ ಅಮಿತ್ ಮಿಶ್ರಾ ಅವರು ಇತ್ತೀಚೆಗೆ ಮುಕ್ತಾಯಗೊಂಡ 2022 ರ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ನಿರಾಶೆಗೊಂಡಿದ್ದರು. ಭಾರತದ ಮಾಜಿ ಸ್ಪಿನ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು.
ಮಿಶ್ರಾ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡದ ಪರ 22 ಟೆಸ್ಟ್ ಪಂದ್ಯಗಳನ್ನು ಆಡಿ 76 ವಿಕೆಟ್,36 ಏಕದಿನ ಪಂದ್ಯಗಳನ್ನು ಆಡಿ 64 ವಿಕೆಟ್ ಗಳನ್ನು , 8 ಟಿ 20 ಆಡಿ 14 ವಿಕೆಟ್ ಗಳನ್ನು ಪಡೆದು ಗಮನ ಸೆಳೆದಿದ್ದಾರೆ.