ಅಮೀನಗಡ: ಪಕ್ಷಿಗಳಿಗೆ ಆಹಾರ, ನೀರು ಪೂರೈಸುವ ಮೂಲಕ ಗೆಳೆಯರ ಬಳಗ ಮಾನವೀಯತೆ ಮೆರೆದಿದೆ. ಹೌದು. ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಪಕ್ಷಿಗಳು ತತ್ತರಿಸುತ್ತಿವೆ. ಇದನ್ನು ಮನಗೊಂಡ ಪಟ್ಟಣದ ಗೆಳೆಯರ ಬಳಗ ಸ್ವಯಂ ಪ್ರೇರಣೆಯಿಂದ ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಾದಿ ಬಸವೇಶ್ವರ ದೇವಸ್ಥಾನದಿಂದ, ಸಾಯಿ ಶಾಲೆಯವರೆಗೆ 100ಕ್ಕೂ ಹೆಚ್ಚು ಗಿಡಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಸುವ ಕಾರ್ಯ ಮಾಡುತ್ತಿದೆ. ಗೆಳೆಯರ ಬಳಗದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಪಟ್ಟಣದ ಗೆಳೆಯರ ಬಳಗ ಸೇರಿಕೊಂಡು ಸ್ಥಳಿಯ ಅಂಗಡಿಗಳಿಗೆ ಭೇಟಿ ನೀಡಿ, ಬಳಕೆಗೆ ಬಾರದ ಬಾಟಲ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಎರಡು ತುಂಡುಗಳಾಗಿ ಮಾಡಿ, ತಮ್ಮ ತಮ್ಮ ಮನೆಗಳಿಂದ ಅಕ್ಕಿ ಮತ್ತು ಜೋಳವನ್ನು ತಂದು ಎರಡನ್ನು ಕೂಡಿಸಿ ಅವುಗಳನ್ನು ಸಂಗ್ರಹಿಸಿ, ಒಂದು ಭಾಗದಲ್ಲಿ ಅಕ್ಕಿ ಮತ್ತು ಜೋಳ, ಮತ್ತೊಂದು ಭಾಗದಲ್ಲಿ ನೀರನ್ನು ಹಾಕಿ, ತಂತಿಯ ಮೂಲಕ ಗಿಡಗಳಿಗೆ ಕಟ್ಟುತ್ತಿದ್ದಾರೆ.
ಶಿವಮೂರ್ತಿಮಠ, ಬಸು ಗೌಡರ ಅವರನ್ನು ಒಳಗೊಂಡ ಗೆಳೆಯರ ಬಳಗ, ಪಕ್ಷಿಗಳ ಆಕ್ರಂದನ ಹಾಗೂ ವನ್ಯ ಜೀವಿಗಳ ನೋವಿಗೆ
ಸ್ಪಂದಿಸುತ್ತಿದೆ. ಎರಡು ದಿನಕೊಮ್ಮೆ ಗಿಡಗಳಿಗೆ ಕಟ್ಟಿರುವ ಬಾಟಲ್‌ಗಳಿಗೆ ಅಕ್ಕಿ, ಜೋಳ ಹಾಗೂ ನೀರನ್ನು ಹಾಕುವ ಯೋಜನೆ ಮಾಡಿ, ಪಕ್ಷಿಗಳ ದಾಹ ಇಂಗಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಯುವಕರ ಕಾರ್ಯ ಮಾದರಿ: ಆಧುನಿಕ ತಂತ್ರಜ್ಞಾನದ ಕಾಲಮಾನದಲ್ಲಿ ಪಕ್ಷಿಗಳ ಸಂಕುಲ ಅಳಿವಿನಂಚಿನಲ್ಲಿದೆ. ಪಕ್ಷಿಗಳ
ಸಂಕುಲ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯುವಕರ ನಡೆ ಇತರರಿಗೆ ಮಾದರಿಯಾಗಿದೆ. ಇದೇ ರೀತಿಯ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಂಡರೆ ಪಕ್ಷಿ ಸಂಕುಲ ರಕ್ಷಿಸಬಹುದು ಎಂದು ಗೆಳೆಯರ ಬಳಗದ ಕಾರ್ಯಕ್ಕೆ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Articles
Advertisement