Advertisement

ಗೊಂದಲಗಳ ನಡುವೆಯೇ ಮುಂದುವರಿದ ಆರ್‌ಟಿಇ

12:21 PM Mar 04, 2017 | |

ಬೆಂಗಳೂರು: ಆರ್‌ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ನಾಲ್ಕುದಿನಗಳಾದರೂ ಕೆಲ ಗೊಂದಲಗಳು ಮುಂದುವರೆದಿವೆ. ಇದರ ನಡುವೆಯೇ ಶಿಕ್ಷಣ ಇಲಾಖೆ ಶುಕ್ರವಾರದವರೆಗೆ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಹೇಳಿದೆ. ಶುಕ್ರವಾರ 3,162 ಅರ್ಜಿಗಳು ಬಂದಿದ್ದು, ಈ ಹಿಂದಿನ ದಿನಗಳಲ್ಲಿ ಉಳಿದ ಅರ್ಜಿಗಳು ಸಲ್ಲಿಕೆಯಾಗಿವೆ. ಶುಕ್ರವಾರ ರಾತ್ರಿ 8ರವರೆಗೆ ಒಟ್ಟಾರೆ 6,127 ಅರ್ಜಿಗಳು ಬಂದಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Advertisement

ಈ ಮಧ್ಯೆ ಅರ್ಜಿ ಸಲ್ಲಿಕೆಯಲ್ಲಿ ಗೊಂದಲಗಳು ಮುಂದುವರೆದಿದ್ದು, ಕೆಲವೆಡೆ ಮಗು ಮತ್ತು ಪೋಷಕರ ವಿಳಾಸ ಒಂದೇ ಇದ್ದರೂ ವೆಬ್‌ಸೈಟ್‌ ಅರ್ಜಿ ಸ್ವೀಕರಿಸುತ್ತಿಲ್ಲ. ವಿಳಾಸ ಸರಿಹೊಂದುತ್ತಿಲ್ಲ ಎಂಬ ಮಾಹಿತಿ ಬರುತ್ತಿದೆ ಎಂದು ರಾಜಾಜಿನಗರ 5ನೇ ಬ್ಲಾಕ್‌, 6ನೇ ಕ್ರಾಸ್‌ನ ಕೆಲ ನಿವಾಸಿಗಳು ದೂರಿದ್ದಾರೆ. ಆಧಾರ್‌ ಕಾರ್ಡ್‌ನಲ್ಲಿ ಮೊದಲು ಬ್ಲಾಕ್‌, ನಂತರ ಕ್ರಾಸ್‌ ನಮೂದಾಗಿದ್ದರೆ, ವೆಬ್‌ಸೈಟ್‌ನಲ್ಲಿ ಮೊದಲು ಕ್ರಾಸ್‌, ನಂತರ ಬ್ಲಾಕ್‌ ನಮೂದಾಗಿದೆ. 

ಇದರಿಂದ ಈ ಸಮಸ್ಯೆ ಆಗುತ್ತಿರಬಹುದು. ಆದರೆ, ಸಮಸ್ಯೆ ಬಗ್ಗೆ ಇಲಾಖೆ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದರೆ ಯಾವುದೇ ಪರಿಹಾರಾತ್ಮಕ ಪ್ರತಿಕ್ರಿಯೆ ಬರುತ್ತಿಲ್ಲ. ಇಲಾಖೆ 
ಕನಿಷ್ಠ ಸಹಾಯವಾಣಿಯನ್ನಾದರೂ ಆರಂಭಿಸಿದ್ದರೆ ಅರ್ಜಿ ಸಲ್ಲಿಸುವಾಗ ಸ್ಥಳದಲ್ಲೇ ಕರೆ ಮಾಡಿ ಸಮಸ್ಯೆ ತಿಳಿಸಿ ಪರಿಹಾರ ಪಡೆಯುವ ಪ್ರಯತ್ನ ಮಾಡಬಹುದಿತ್ತು. ಈಗಲಾದರೂ ಇಲಾಖೆ ಸಹಾಯವಾಣಿ ಆರಂಭಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ.  

ಶಾಲೆಗಳ ಹೆಸರು ಮಾಯ
ಇಲಾಖೆ ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಸಲು ನೀಡಿದ ಅವಕಾಶದ ವೇಳೆ ಇದ್ದ ಶಾಲೆಗಳ ಪಟ್ಟಿ, ಕೆಲ ವಾರ್ಡುಗಳಲ್ಲಿ ಈಗ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಉದಾಹರಣೆಗೆ ಬಾಗಲಗುಂಟೆ ವಾರ್ಡ್‌ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಅರ್ಜಿ ಸಲ್ಲಿಕೆ ವೇಳೆ ಸುಮಾರು 15 ಶಾಲೆಗಳ ಪಟ್ಟಿ ಸಿಗುತ್ತಿತ್ತು. ಆದರೆ, ನೈಜ ಅರ್ಜಿ ಸಲ್ಲಿಕೆ ಆರಂಭವಾದ ಮೇಲೆ ಶಾಲೆಗಳ ಸಂಖ್ಯೆ 5ಕ್ಕೆ ಕುಸಿದಿದೆ ಎಂದು ಆ ಭಾಗದ ಪೋಷಕರಿಂದ ದೂರುಗಳು ಕೇಳಿಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next