ನವದೆಹಲಿ: ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಾಕ್ ನಲ್ಲಿ ಬೈಸಾಕಿ ಸಂಭ್ರಮದಲ್ಲಿ ತೊಡಗಿರುವ ಭಾರತೀಯ ಸಿಖ್ ಯಾತ್ರಾರ್ಥಿಗಳ ರಕ್ಷಣೆ ಕುರಿತು ಭಾರತ ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಜೀ ನ್ಯೂಸ್ ಗೆ ಉನ್ನತ ಮೂಲಗಳು ತಿಳಿಸಿರುವಂತೆ, ಭಾರತ ಸರ್ಕಾರ ಅಲ್ಲಿನ ಸನ್ನಿವೇಶದ ಬಗ್ಗೆ ನಿರಂತರವಾಗಿ ಪರಿಶೀಲಿಸುತ್ತಿದೆ. ಭಾರತದ ಪ್ರಜೆಗಳ ಸುರಕ್ಷತೆಗಾಗಿ ಪಾಕಿಸ್ತಾನದ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವುದಾಗಿಯೂ ವಿವರಿಸಿದೆ.
ಇತ್ತೀಚೆಗಷ್ಟೇ ತೆಹ್ರೀಕ್ ಇ ಲಬ್ಬಾಯಿಕ್ ಪಾಕಿಸ್ತಾನ್(ಟಿಎಲ್ ಪಿ) ಮುಖ್ಯಸ್ಥ ಸಾದ್ ಹುಸೈನ್ ರಿಜ್ವಿಯನ್ನು ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು ಬಂಧಿಸಿದ ಬಳಿಕ ನಡೆದ ಭಾರೀ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಫ್ರಾನ್ಸ್ ರಾಯಭಾರಿಯನ್ನು ವಜಾಗೊಳಿಸಬೇಕು ಮತ್ತು ಫ್ರಾನ್ಸ್ ಜತೆಗಿನ ಸಂಬಂಧವನ್ನು ಪಾಕ್ ಕಡಿದುಕೊಳ್ಳಬೇಕು ಎಂದು ಟಿಎಲ್ ಪಿ ವರಿಷ್ಠ ರಿಜ್ವಿ ಆಗ್ರಹಿಸಿದ್ದು, ಏಪ್ರಿಲ್ 20ರೊಳಗೆ ತನ್ನ ಬೇಡಿಕೆಯನ್ನು ಈಡೇರಿಸುವಂತೆ ಪಾಕ್ ಸರ್ಕಾರಕ್ಕೆ ಗಡುವು ನೀಡಿದ್ದು, ಇದಕ್ಕೂ ಮುನ್ನ ರಿಜ್ವಿಯನ್ನು ಬಂಧಿಸಿರುವುದು ಹಿಂಸಾಚಾರ ನಡೆಯಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಬೈಸಾಕಿ ಆಚರಣೆಗಾಗಿ ಭಾರತದಿಂದ ಸುಮಾರು 900 ಮಂದಿ ಸಿಖ್ಖ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿರುವ ಪಂಜಾ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳನ್ನು ಲಾಹೋರ್ ಗುರುದ್ವಾರದಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.