ಬೈರುತ್: ಗಾಜಾದಲ್ಲಿ ಸಮರ ಮುಂದುವರಿದಿರುವ ವೇಳೆ ದೊಡ್ಡ ಪ್ರಮಾಣದ ಯುದ್ಧವನ್ನು ತಪ್ಪಿಸಲು ಹಮಾಸ್ ಉಗ್ರ ಸಂಘಟನೆಯ ಮಿತ್ರ ಹೆಜ್ಬುಲ್ಲಾಗೆ ಎಚ್ಚರಿಕೆ ನೀಡಿರುವ ಇಸ್ರೇಲ್, ನೆರೆಯ ದೇಶ ಲೆಬನಾನ್‌ನನ್ನು ಶಿಲಾಯುಗಕ್ಕೆ ಮರಳಿಸುವ ಎಚ್ಚರಿಕೆ ನೀಡಿದೆ.
ಇಸ್ರೇಲ್ ಜೂನ್ 27 ರಂದು ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ರಕ್ಷಣ ಸಚಿವ ಯೋವ್ ಗ್ಯಾಲಂಟ್ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದು, ಗಾಜಾ ಯುದ್ಧ, ಕದನ ವಿರಾಮದ ಕಡೆಗೆ ದೀರ್ಘಾವಧಿಯ ಪ್ರಯತ್ನಗಳು ಮತ್ತು ವಿಶಾಲವಾದ ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವೆ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚಾದಂತೆ ‘ನಮಗೆ ಯುದ್ಧ ಬೇಡ. ಆದರೆ ನಾವು ಎಲ್ಲದಕ್ಕೂ ಸಿದ್ಧತೆ ನಡೆಸಿಕೊಂಡಿದ್ದೇವೆ. ಯುದ್ಧದ ಸ್ಥಿತಿ ನಿರ್ಮಾಣ ಮಾಡಿ ಲೆಬನಾನ್ ಗೆ ಆಗುವ ಭಾರೀ ಹಾನಿಯ ಕುರಿತು ಹೆಜ್ಬುಲ್ಲಾ ಚೆನ್ನಾಗಿ ಅರ್ಥಮಾಡಿಕೊಂಡಿದೆ’ ಎಂದು ಯೋವ್ ಗ್ಯಾಲಂಟ್ ಗುಡುಗಿದ್ದಾರೆ.
ಅಮೆರಿಕ ಕೂಡ ಲೆಬನಾನ್ ವಿಚಾರದಲ್ಲಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದೆ. ಈಗಾಗಲೇ ಜರ್ಮನಿ ತನ್ನ ಪ್ರಜೆಗಳು ಲೆಬನಾನ್ ತೊರೆಯುವಂತೆ ಸೂಚನೆ ನೀಡಿದೆ. ಭಾರತದ ವಿದೇಶಾಂಗ ಇಲಾಖೆ ಕೂಡ ಭಾರತೀಯರು ಸುರಕ್ಷಿತವಾಗಿರಲು ಸಲಹೆ ನೀಡಿದೆ.
“2000-3000 ಭಾರತೀಯರು ಲೆಬನಾನ್ ನಲ್ಲಿ ವಾಸಿಸುತ್ತಿದ್ದಾರೆ. ನಮ್ಮ ರಾಯಭಾರ ಕಚೇರಿ ಅವರೊಂದಿಗೆ ಸಂಪರ್ಕದಲ್ಲಿದೆ. ನಾವು ಪ್ರಯಾಣದ ಸಲಹೆಯನ್ನು ನೀಡಿಲ್ಲ ಆದರೆ ನಮ್ಮ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ನಮ್ಮವರಿಗೆ ಸಲಹೆ ನೀಡಿದ್ದೇವೆ” ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಉತ್ತರ ಇಸ್ರೇಲ್‌ನ ಸೇನಾ ನೆಲೆಯ ಮೇಲೆ ಗುರುವಾರ “ಡಜನ್‌ಗಟ್ಟಲೆ” ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹೆಜ್ಬುಲ್ಲಾ ಹೇಳಿದೆ. ಸುಮಾರು 35 ಲಾಂಚರ್ಸ್ ಗಳು ಲೆಬನಾನ್‌ನಿಂದ ದಾಟುತ್ತಿರುವುದನ್ನು ಗುರುತಿಸಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಸಂಘರ್ಷ ಆರಂಭವಾಗಿದ್ದು ಕೆಲವು ಸಾವು ನೋವು ಸಂಭವಿಸಿರುವುದಾಗಿ ವರದಿಯಾಗಿದೆ.