Advertisement

BJP ಕಾರ್ಯಕಾರಿಣಿಯಲ್ಲಿ ಈಶ್ವರಪ್ಪ ಏಕಾಂಗಿ; ಕಾಂಗ್ರೆಸ್ ಗೆಲ್ಲಬೇಕಂತೆ!

03:11 PM May 06, 2017 | Team Udayavani |

ಮೈಸೂರು: ಯಡಿಯೂರಪ್ಪ ಎಂದಿಗೂ ಕುರ್ಚಿಗೆ ಅಂಟಿಕೊಂಡವನಲ್ಲ. ಅಧಿಕಾರದ ದಾಹ ಇದ್ದಿದ್ದರೆ ಕುಮಾರಸ್ವಾಮಿ ಜೊತೆಗಿನ 20, 20 ತಿಂಗಳ ಸಮ್ಮಿಶ್ರ ಸರ್ಕಾರದ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಹೋಗುತ್ತಿರಲಿಲ್ಲ…ಇದು ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷೀಯ ಭಾಷಣದಲ್ಲಿ ಬಿಎಸ್ ಯಡಿಯೂರಪ್ಪ ಪರೋಕ್ಷವಾಗಿ ಕೆಎಸ್ ಈಶ್ವರಪ್ಪಗೆ ನೀಡಿದ ಟಾಂಗ್.

Advertisement

ಶನಿವಾರದಿಂದ 2 ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಸಭೆಗೆ ತೀವ್ರ ಮುನಿಸಿನ ನಡುವೆಯೂ ವರಿಷ್ಠರ ಹುಕುಂ ಮೇರೆಗೆ ಕೆಎಸ್ ಈಶ್ವರಪ್ಪ ಭಾಗವಹಿಸಿದ್ದು, ಆರ್ ಎಸ್ಎಸ್ ಮುಖಂಡ ಸಂತೋಷ್ ಗೈರು ಹಾಜರಾಗಿದ್ದಾರೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಎಸ್ ವೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬರಗಾಲವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬೈ ಪ್ರವಾಸಕ್ಕೆ ತೆರಳಿದ್ದರು ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದರು.

ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸುವುದು ನಮ್ಮ ಗುರಿಯಾಗಿದೆ. ಕಾರ್ಯಕರ್ತರು ಇದಕ್ಕಾಗಿ ಹೆಚ್ಚು ಶ್ರಮಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

ಈಶ್ವರಪ್ಪ ಕೈ ಮುಗಿದ್ರೂ ತಲೆ ಎತ್ತದ ಬಿಎಸ್ ವೈ:
ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ವೇದಿಕೆಗೆ ಆಗಮಿಸಿದ ಕೆಎಸ್ ಈಶ್ವರಪ್ಪ ಕೈಮುಗಿಯುತ್ತಾ, ಕೈಕುಲುಕುತ್ತಾ ಬಂದಿದ್ದರು. ಆದರೆ ಬಿಎಸ್ ವೈ ಮಾತ್ರ ತಲೆ ಎತ್ತದೆ ಪೇಪರ್ ಓದುತ್ತ ಕುಳಿತಿದ್ದರು. ಅಷ್ಟೇ ಅಲ್ಲ ಅಧ್ಯಕ್ಷೀಯ ಭಾಷಣದಲ್ಲಿಯೂ ಎಲ್ಲ ಮುಖಂಡರ ಹೆಸರನ್ನು ಯಡಿಯೂರಪ್ಪ ಹೇಳಿದ್ದು, ಉಭಯ ಸದನಗಳ ವಿಪಕ್ಷ ನಾಯಕರುಗಳೇ ಎಂದು ಹೇಳುವ ಮೂಲಕ ಕೆಸ್ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಹೆಸರನ್ನು ಪ್ರಸ್ತಾಪಿಸದೇ ಮಾತು ಮುಂದುವರಿಸಿದ್ದರು.

Advertisement

ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲಬೇಕು! ಮುರಳೀಧರ ರಾವ್
ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರು ಮಾತನಾಡುತ್ತ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದರು. ಆಗ ವೇದಿಕೆಯಲ್ಲಿದ್ದವರಿಗೆ ಶಾಕ್ ಆಗಿತ್ತು…ಕೂಡಲೇ ಸಂಸದೆ ಶೋಭಾ ಕರಂದ್ಲಾಜೆ ಅವರು, ಕಾಂಗ್ರೆಸ್ ಅಲ್ಲ, ಬಿಜೆಪಿ 150 ಸ್ಥಾನ ಗೆಲ್ಲಬೇಕು ಎಂದು ಹೇಳಿ ಎಂದು ನೆನಪಿಸಿದರು!

ಕಾರ್ಯಕಾರಿಣಿಯಲ್ಲಿ ನಿದ್ದೆ, ನಿರುತ್ಸಾಹ!
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿಎಸ್ ಯಡಿಯೂರಪ್ಪನವರು ಮಾತನಾಡುವಾಗ ಪಕ್ಷದ ಪದಾಧಿಕಾರಿಗಳಾಗಲಿ, ಕಾರ್ಯಕರ್ತರಲ್ಲಿ ಯಾವುದೇ ಉತ್ಸಾಹ ಕಂಡು ಬಂದಿಲ್ಲವಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಯಡಿಯೂರಪ್ಪನವರು ಮಾತನಾಡುವಾಗ ಯಾರೂ ಚಪ್ಪಾಳೆ ಕೂಡಾ ಹೊಡೆಯಲಿಲ್ಲ. ಕೊನೆಗೆ ಯಡಿಯೂರಪ್ಪನವರೇ ನನ್ನ ಮಾತು ಮುಗಿದ ನಂತರವಾದರೂ ಚಪ್ಪಾಳೆ ಹೊಡೆಯಿರಿ ಎಂದರು. ಮಾತು ಮುಗಿಸಿದ ಮೇಲೆ ಈಗಲಾದ್ರೂ ಚಪ್ಪಾಳೆ ಹೊಡಿರಪ್ಪಾ ಎಂದರು! ಅಲ್ಲದೇ ಸಭೆಯಲ್ಲಿ ಕೆಲವರು ನಿದ್ದೆಗೆ ಶರಣಾಗಿದ್ದರು, ಕೆಲವರು ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ಒಟ್ಟಾರೆ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ನಿರುತ್ಸಾಹವೇ ಕಂಡು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next