Advertisement

ಅಮರನಾಥ ಯಾತ್ರೆ ಕೈಗೊಂಡ ಅಮೆರಿಕನ್ನರು -ಈ ಯಾತ್ರೆ ಪೂರೈಸಿದ ಮೊದಲ ವಿದೇಶೀಯರು

09:18 PM Jul 12, 2023 | Team Udayavani |

ಶ್ರೀನಗರ: ಇಬ್ಬರು ಅಮೆರಿಕನ್ನರು ಅಮರನಾಥ ಯಾತ್ರೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ದಕ್ಷಿಣ ಹಿಮಾಲಯ ಶ್ರೇಣಿಗಳಲ್ಲಿರುವ ಶಿವನ ಪವಿತ್ರ ತೀರ್ಥ ಕ್ಷೇತ್ರ ಅಮರನಾಥ ದೇಗುಲವನ್ನು ದರ್ಶಿಸಿದ ಮೊದಲ ವಿದೇಶೀಯರು ಎನಿಸಿದ್ದಾರೆ. ಕ್ಯಾಲಿಫೋರ್ನಿಯದ ಈ ಇಬ್ಬರು ಪುರುಷ ಯಾತ್ರಾರ್ಥಿಗಳ ಹೆಸರು ಬಹಿರಂಗವಾಗಿಲ್ಲ. ಆದರೆ ಇವರ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸಂಪರ್ಕ ಇಲಾಖೆಯು ವಿಡಿಯೊ ಬಿಡುಗಡೆಗೊಳಿಸಿದೆ. “ನಾವು ಸ್ವಾಮಿ ವಿವೇಕಾನಂದರ ಅನುಯಾಯಿಗಳು. ತಮ್ಮ ಜೀವಿತಾವಧಿಯಲ್ಲಿ ಸ್ವಾಮಿ ವಿವೇಕಾನಂದರು ಅಮರನಾಥ ದೇಗುಲಕ್ಕೆ ಬಂದಿದ್ದರು. ಅವರ ಪ್ರೇರಣೆಯಿಂದ ನಾವು ಅಮರನಾಥ ಯಾತ್ರೆ ಕೈಗೊಂಡಿದ್ದೇವೆ’ ಎಂದು ಅಮೆರಿಕನ್‌ ಯಾತ್ರಾರ್ಥಿ ಹೇಳಿದ್ದಾರೆ.

Advertisement

ಐದು ಮಂದಿ ಸಾವು: ಕಳೆದ 24 ಗಂಟೆಗಳಲ್ಲಿ ಐದು ಮಂದಿ ಅಮರನಾಥ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಪೆಹಲ್ಗಾಮ್‌ ಮಾರ್ಗದಲ್ಲಿ ಮೂವರು ಮತ್ತು ಬಾಲ್ತಾಲ್‌ ಮಾರ್ಗದಲ್ಲಿ ಇಬ್ಬರು ಅಸುನೀಗಿದ್ದಾರೆ. ಈ ಪೈಕಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ತಲಾ ಇಬ್ಬರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಇನ್ನೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೃದಯಾಘಾತದಿಂದ ಇವರು ಮೃತಪಟ್ಟಿದ್ದಾರೆ. ಅತಿ ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಕಾರಣ, ಹೆಚ್ಚಿನ ಸಂಖ್ಯೆಯ ಅಮರನಾಥ ಯಾತ್ರಿಕರು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾವು ಕ್ಯಾಲಿಫೋರ್ನಿಯದ ದೇಗುಲ ಆಶ್ರಮದಲ್ಲಿ ನೆಲೆಸಿದ್ದೇವೆ. ಅನೇಕ ವರ್ಷಗಳಿಂದ ಅಮರನಾಥ ಯಾತ್ರೆ ಕೈಗೊಳ್ಳಬೇಕೆಂಬ ಕನಸು ಕಂಡಿದ್ದೆವು. ಅದು ಈಗ ನನಸಾಗಿದೆ. ಈ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ವಿದೇಶೀಯರು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next