Advertisement
ಮುಂಬಯಿ ಮೂಲದ ಸೌರಭ್ಅಮೆರಿಕ ತಂಡದ ನಾಯಕ ಸೌರಭ್ ನೇತ್ರಾವಲ್ಕರ್, ಮುಂಬಯಿಯವರು. 27 ವರ್ಷ. 2010ರಲ್ಲಿ ಭಾರತದ ಪರ ಅಂಡರ್-19 ವಿಶ್ವಕಪ್ ಆಡಿದ್ದಾರೆ! 2013-14ರ ಅವಧಿಯಲ್ಲಿ ಮುಂಬಯಿ ಪರ ರಣಜಿಯನ್ನೂ ಆಡಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಅವರು ಪ್ರಾರಂಭದಲ್ಲಿ ಯಶಸ್ಸು ಕಂಡರೂ, ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ಎಂದು ಭಾಸವಾಯಿತು. ಆದ್ದರಿಂದ 2015ರಲ್ಲಿ ಕ್ರಿಕೆಟನ್ನು ಬಿಟ್ಟು ಅಮೆರಿಕಕ್ಕೆ ಓದಲು ತೆರಳಿದರು. ಅಲ್ಲಿನ ಕಾರ್ನೆಲ್ ವಿವಿಯಲ್ಲಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈ ಹಂತದಲ್ಲಿ ಕ್ರಿಕೆಟ್ ಬಗೆಗಿನ ಅವರ ಸೆಳೆತ ಕಡಿಮೆಯಾಗಿರಲಿಲ್ಲ. ಪರಿಣಾಮ 2018ರಲ್ಲಿ ಅವರು ಅಮೆರಿಕ ತಂಡದ ನಾಯಕರಾದರು.
ಕರ್ನಾಟಕದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಹವರ್ತಿ ಪ್ರದೀಪ್ ಕೆಂಜಿಗೆ ಅವರ ಪುತ್ರ ನಾಸ್ತುಷ್ ಕೆಂಜಿಗೆ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ ಪ್ರದೀಪ್ ಅಮೆರಿಕದ ಟಸ್ಕೆಗೀ ವಿಶ್ವವಿದ್ಯಾಲಯದಲ್ಲಿ ಕೃಷಿ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದ್ದರು. ನಾಸ್ತುಷ್, ಅಲಬಾಮಾದಲ್ಲಿ ಜನಿಸಿದ ಒಂದೇ ವರ್ಷಕ್ಕೆ ಪ್ರದೀಪ್ ಕುಟುಂಬ ಸಮೇತ ಭಾರತಕ್ಕೆ ಹಿಂತಿರುಗಿದರು. ಆರಂಭಿಕ ಹಂತದಲ್ಲಿ ನಾಸ್ತುಷ್ ಬೆಂಗಳೂರು ವಿವಿ ಮಟ್ಟದಲ್ಲಿ ಕ್ರಿಕೆಟ್ ಆಡಿದರು. ಮುಂದೆ 2015ರಲ್ಲಿ ಮತ್ತೆ ಅಮೆರಿಕಕ್ಕೆ ತೆರಳಿದರು. ಎಂಟೆಕ್ ಬಳಿಕ ಅವರು ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಎಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಕೆಲ ತಿಂಗಳ ಹಿಂದೆ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಜತೆಗೆ ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.