ಬೆಂಗಳೂರು: ಚೀನ ಅಂತಾರಾಷ್ಟ್ರೀಯ ವಿದ್ಯಮಾನಗಳಲ್ಲಿ ಅಮೆರಿಕಾ ಹಸ್ತಕ್ಷೇಪ ಎಂಬ ವಿಚಾರ ಸಂಕಿರಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರು ಇರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಇಂಡೋ- ಚೀನ ಫ್ರೆಂಡ್ ಶಿಫ್ ಅಸೋಸಿಯೇಷನ್ ಸಂಸ್ಥೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಈ ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಪಕ್ಷ ನಾಯಕರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದ್ದು, ಪಕ್ಷದ ಸಿದ್ಧಾಂತ ಹಾಗೂ ತಮ್ಮ ಸ್ಥಾನಗೌರವಕ್ಕೆ ವಿರುದ್ಧವಾದ ಕಾರಣಕ್ಕೆ ಈ ಆಹ್ವಾನವನ್ನು ನಾನು ಮೊದಲೇ ನಿರಾಕರಿಸಿದ್ದೇನೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಈ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಕೋಲಾರದ ಶ್ರೀನಿವಾಸ ಗೌಡ ಈ ಸಂಸ್ಥೆಯ ಪ್ರತಿನಿಧಿಯಾಗಿದ್ದಾರೆ. ಅವರ ಮೂಲಕ ಭಾಸ್ಕರ್ ಎಂಬುವರನ್ನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಚಾರ ಸಂಕಿರಣಕ್ಕೆ ಆಹ್ವಾನ ನೀಡಿದ್ದರು. ಆದರೆ ಅಂದೇ ಸಿದ್ದರಾಮಯ್ಯ ಆಹ್ವಾನ ನಿರಾಕರಿಸಿದ್ದರು. ಆದಾಗಿಯೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.ಸೋದರ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ.