Advertisement

ಅಡಿಕೆ, ಮಾವಿಗೆ ಅಮೆರಿಕ ತೆರಿಗೆ ಬರೆ

04:00 AM Nov 02, 2018 | Team Udayavani |

ವಾಷಿಂಗ್ಟನ್‌: ಭಾರತದಿಂದ ತೆರಿಗೆಯ ಹಂಗಿಲ್ಲದೆ ಅಮೆರಿಕ ಪ್ರವೇಶಿಸುತ್ತಿದ್ದ ಸುಮಾರು 50 ಸಾಮಗ್ರಿಗಳ ಮೇಲೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ತೆರಿಗೆ ವಿಧಿಸಲು ನಿರ್ಧರಿಸಿದ್ದು, ನ. 1ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ.

Advertisement

ಯಾವ ಸರಕುಗಳಿಗೆ ತೆರಿಗೆ ಬಿಸಿ?
ಅಡಿಕೆ (ತಾಜಾ, ಒಣಗಿದ, ಸಿಪ್ಪೆ ಸುಲಿಯದ), ಮಾವಿನ ಹಣ್ಣು  , ಮರಳುಗಲ್ಲು, ಲವಣಗಳು, ಎಮ್ಮೆ ಚರ್ಮ, ಶೇ. 85ಕ್ಕೂ ಹೆಚ್ಚು ಭಾಗ ಹತ್ತಿಯ ಅಂಶ ಅಥವಾ ತೂಕವಿರುವ ನೇಯ್ದ ಬಟ್ಟೆಗಳು, ಕೈಮಗ್ಗದ ನೆಲಹಾಸು, ನೆಲದ ಮೇಲೆ ಹಾಕಲಾಗುವ ಯಾವುದೇ ಕೈಮಗ್ಗದ ನೇಯ್ಗೆ, ಕಸೂತಿ ಕಲಾ ವಸ್ತುಗಳು, ಹಾರ್ಮೋನಿಯಂ ಮಾದರಿಯ ಎಲ್ಲ ಸಂಗೀತ ವಾದ್ಯಗಳು, ಚಿನ್ನದ ಲೇಪನವಿರುವ ಆಲಂಕಾರಿಕ ವಸ್ತುಗಳು ಸಹಿತ ಸುಮಾರು 50 ಸಾಮಗ್ರಿಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.

ಪರಿಣಾಮವೇನು?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಸ್ಥಿತಿ ಬಲಗೊಳಿಸಲು ಅಮೆರಿಕ ನೀಡುವ ಸಹಾಯ ಹಸ್ತಗಳಲ್ಲಿ ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ (ಜಿಎಸ್‌ಪಿ)ಯೂ ಒಂದು. ಇದು ಅಮೆರಿಕದ ಅತೀ ಹಳೆಯ, ಅತೀ ದೊಡ್ಡ “ವಾಣಿಜ್ಯ ಸಹಕಾರ’. ಈ ಯೋಜನೆ ವ್ಯಾಪ್ತಿಯಲ್ಲಿರುವ ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಇದರ ಲಾಭ ಹೆಚ್ಚು ಪಡೆದಿರುವುದು ಭಾರತ. ಜಿಎಸ್‌ಪಿ ಅಡಿ 2017ರಲ್ಲಿ ಭಾರತ ಅಂದಾಜು 41,000 ಕೋಟಿ ರೂ.ಗಳಷ್ಟು ತೆರಿಗೆ ರಹಿತ ವ್ಯವಹಾರ ನಡೆಸಿತ್ತು. ಆದರೆ ಈಗ 50 ವಸ್ತುಗಳಿಗೆ ವಿಧಿಸಲಾಗುವ ತೆರಿಗೆಯಿಂದಾಗಿ ಭಾರತದ ಮಧ್ಯಮ, ಸಣ್ಣ ಉದ್ದಿಮೆಗಳ ಮೇಲೆ, ಕೈಮಗ್ಗ ಹಾಗೂ ಕೃಷಿ ಉತ್ಪನ್ನಗಳ ತಯಾರಕರು, ರಫ್ತುದಾರರ ಮೇಲೆ ಬರೆ ಎಳೆದಂತಾಗುತ್ತದೆ.

ಅಮೆರಿಕ ಸಮರ್ಥನೆ
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ, “ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ ಯಡಿ (ಜಿಎಸ್‌ಪಿ) ಅಮೆರಿಕಕ್ಕೆ ವಿವಿಧ ದೇಶಗಳಿಂದ ಆಮದಾಗುತ್ತಿದ್ದ ಕೆಲವು ವಸ್ತುಗಳನ್ನು ತೆರಿಗೆ ರಹಿತ ವ್ಯಾಪ್ತಿಯಿಂದ ಹೊರಗಿಡಲಾಗಿದೆಯಷ್ಟೇ. ಯಾವುದೇ ದೇಶವನ್ನು ಗುರಿಯಾಗಿಸುವ ನಿರ್ಧಾರವಿಲ್ಲ’ ಎಂದಿದೆ. ಅಂತೆಯೇ, ಅರ್ಜೆಂಟೀನ, ಥಾಯ್ಲೆಂಡ್‌, ಸುರಿನಾಮ್‌, ಪಾಕಿಸ್ಥಾನ, ಟರ್ಕಿ, ಫಿಲಿಪ್ಪೆ„ನ್ಸ್‌, ಈಕ್ವೆಡಾರ್‌, ಇಂಡೋನೇಷ್ಯಾ ದೇಶಗಳಿಂದ ಆಮದಾಗುತ್ತಿದ್ದ ಕೆಲ ಸಾಮಗ್ರಿಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಇಂತಹ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ಅಮೆರಿಕ ನೀಡಿಲ್ಲ. ಭಾರತ ಸಹಿತ ಕೆಲವು ದೇಶಗಳೊಂದಿಗಿನ ಅಮೆರಿಕ ಸಂಬಂಧ ಈಗ ಹಿಂದಿನಿಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next