ದೂರದ ಅಮೆರಿಕದಲ್ಲಿ ಹದಿಹರೆಯದ ಮಕ್ಕಳು ಪಸರಿಸುತ್ತಿರುವ ನಮ್ಮ ನಾಡಿನ ಸಾಂಸ್ಕೃತಿಕ ಸೌರಭ ದೂರದ ಅಮೆರಿಕದಲ್ಲಿ ಹುಟ್ಟಿ ಬೆಳೆದ ಭಾರತೀಯ ಬಾಲಕ ಬಾಲಕಿಯರು ಕಲೆಯಾದ ಭರತನಾಟ್ಯವನ್ನು “ನಾಟ್ಯ ಸೇವಾ’ ಎಂಬ ವಿನೂತನ ಮಾದರಿಯ ಸೇವಾ ಸಂಸ್ಥೆಯನ್ನು ಕಟ್ಟಿಕೊಂಡು “ಸೇವೆಗಾಗಿ ನೃತ್ಯ’ ನೃತ್ಯ ನಾಟಕವನ್ನು ಪ್ರದರ್ಶಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ಆನ್ಯ ಶೆಟ್ಟಿ ಹಾಗೂ ಗೆಳತಿಯರ ಜತೆ ಸೇರಿ ನಡೆಸುತ್ತಿರುವ ಈ ನಾಟ್ಯ ಸೇವೆಯ ಬೃಹತ್ ಪ್ರದರ್ಶನವು ಸೆ.22ರಂದು ಮಧ್ಯಾಹ್ನ 3 ಗಂಟೆಗೆ ನ್ಯೂಯಾರ್ಕ್ ನಗರದ ಬೈತಡೇಲ್ ಆಸ್ಪತ್ರೆಯ ಫೋಕ್ಸ್ ಲೇನ್ ಥಿಯೇಟರ್‌ನಲ್ಲಿ ನಡೆಯಲಿದೆ.
ಆನ್ಯ ಮಂಗಳೂರು ಸುರತ್ಕಲ್ ನಿವಾಸಿಗಳಾದ ಪ್ರೇಮಾ ಹಾಗೂ ನಾರಾಯಣ ದಂಪತಿಗಳ ಮೊಮ್ಮಗಳು. ಈ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಭರತನಾಟ್ಯ, ನೃತ್ಯ ನಾಟಕ, ಶಾಸ್ತ್ರೀಯ,ಅರೆಶಾಸ್ತ್ರೀಯ, ನವ್ಯ ಈ ರೀತಿಯ ವಿವಿಧ ಪ್ರಕಾರಗಳ ಪ್ರದರ್ಶನವಿರುವುದು. ಈ ಪ್ರದರ್ಶನದಲ್ಲಿ ಇರುವ ನೃತ್ಯ ಕೊರಿಯೋಗ್ರಾಫಿ ಹಾಗೂ ಮಾರ್ಗದರ್ಶನದ ಹಿಂದೆ ಗುರು ಲತಿಕಾ ಉನ್ನಿ ಮತ್ತು ವಿದೂಷಿ ಸುಮಂಗಲ ರತ್ನಾಕರ ರಾವ್ ಅವರ ತಂಡವಿದೆ.
“ತಡೇಲ್ ಮಕ್ಕಳ ಆಸ್ಪತ್ರೆ’ ಯು ಮಕ್ಕಳ ಶುಶ್ರೂಷೆ, ವಿದ್ಯಾಭ್ಯಾಸ ಮುಂತಾದ ಸೇವೆಗಳನ್ನು ಬಹಳ ಮುತುವರ್ಜಿಯಿಂದ ನೀಡುತ್ತಿದ್ದು ಈ ಆಸ್ಪತ್ರೆಯ ವಿವಿಧ ಸೇವೆಗಳನ್ನು ಹಾಗೂ ಈ ಆಸ್ಪತ್ರೆಯ ಒತ್ತಿನಲ್ಲಿರುವ ಕಾಲೇಜಿನ ಅಭಿವೃದ್ಧಿಪರ ಚಟುವಟಿಕೆಗಳನ್ನು ಗುರುತಿಸಿದ ಈ ಮಕ್ಕಳು ಈ ಆಸ್ಪತ್ರೆಗೆ ಆರ್ಥಿಕ ಸಹಾಯಾರ್ಥಕವಾಗಿ ನೀಡಲು “ಸೇವೆಗಾಗಿ ನೃತ್ಯ’ ಎನ್ನುವ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈಗಾಗಲೇ ಸುಮಾರು 25 ಸಾವಿರ ಡಾಲರ್ ನಷ್ಟು ನಿಧಿ ಸಂಗ್ರಹಿಸಿ ನೀಡಿರುವ ಈ ತಂಡವು ಪ್ರಸ್ತುತ ಕಾರ್ಯಕ್ರಮದ ಮುಖೇನ ಒಂದು ದೊಡ್ಡ ಮಟ್ಟದ ಮೊತ್ತವನ್ನು ಸಹಾಯಾರ್ಥವಾಗಿ, ಮಾನವೀಯ ನೆಲೆಯಲ್ಲಿ ಯಾವುದೇ ಲಾಭ ನಿರೀಕ್ಷಿಸದೆ ಮಕ್ಕಳಿಗೆ ಸೇವೆ ನೀಡುತ್ತಿರುವ ಈ ಆಸ್ಪತ್ರೆಗೆ ನೀಡಲು ನಿರ್ಧರಿಸಿದೆ.