Advertisement

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

01:04 AM Jul 02, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳಿಗೆ ರಾಜ್ಯ ಸರಕಾರ ತಾತ್ವಿಕವಾಗಿ ವಿರೋಧ ವ್ಯಕ್ತಪಡಿಸಿದ್ದು, ಸಂವಿಧಾನಬದ್ಧವಾಗಿ ಲಭ್ಯವಾಗಿರುವ ಅಧಿಕಾರದ ಪ್ರಕಾರ ರಾಜ್ಯದ ವ್ಯಾಪ್ತಿಯಲ್ಲಿ ಈ ಕಾಯ್ದೆ ಗಳಿಗೆ ಕೆಲವು ತಿದ್ದುಪಡಿ ಮಾಡಲು ತೀರ್ಮಾನಿಸಿದೆ.

Advertisement

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕಾನೂನು ಮತ್ತು ಸಂಸದೀಯ ವ್ಯವ ಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಒಂದು ಸರಕಾರ ಸಂಸತ್ತಿನಲ್ಲಿ ಒಪ್ಪಿಗೆ ಪಡೆದ ಕಾಯ್ದೆಯನ್ನು ಅದೇ ಅವಧಿಯಲ್ಲಿ ಜಾರಿ ಮಾಡಬೇಕು. ಆದರೆ ಮುಂದಿನ ಅವಧಿಯಲ್ಲಿ ಅನುಷ್ಠಾನ ಮಾಡುವುದು ಅನೈತಿಕ. ನೆಲದ ಕಾನೂನು ಎಂಬ ಕಾರಣಕ್ಕೆ ಅನು ಷ್ಠಾನ ಮಾಡಬೇಕಾಗುತ್ತದೆಯಾದರೂ ತಾತ್ವಿಕವಾಗಿ ನಮ್ಮ ವಿರೋಧ ಇದೆ ಎಂದು ಸ್ಪಷ್ಟಪಡಿಸಿದರು.

ಕಾಯ್ದೆಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ. ಸಂವಿಧಾನ ಅನುಚ್ಛೇದ 7, 3ನೇ ಪಟ್ಟಿಯ ಅಧಿಕಾರ ಬಳಸಿ ತಿದ್ದು ಪಡಿ ಮಾಡಲು ಅವಕಾಶ ಇದೆ. ಒಟ್ಟು 23 ಕಾಯ್ದೆಗಳಿಗೆ ನಮ್ಮ ವಿರೋಧವಿದೆ. ನಮ್ಮ ತಜ್ಞರ ಸಮಿತಿಯು ಕೇಂದ್ರಕ್ಕೆ ಕಳುಹಿಸಿದ ವರದಿಯಲ್ಲಿ ಈ ವಿಚಾರ ವನ್ನು ಸ್ಪಷ್ಟಪಡಿಸಲಾಗಿತ್ತು. ಆದರೆ ಈ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರು
ವುದು ದುರದೃಷ್ಟ. ಇದು ಆಡಳಿತ ಹಾಗೂ ನ್ಯಾಯ ದಾನ ವ್ಯವಸ್ಥೆಯಲ್ಲಿ ಗೊಂದಲ, ಗೋಜಲು ಮಾತ್ರ ಸೃಷ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

2023ರಲ್ಲಿ ಅಮಿತ್‌ ಶಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಕಾನೂನುಗಳ ಕುರಿತು ಸಲಹೆ ಸೂಚನೆ ಕೇಳಿದ್ದರು. ಈ ಕಾನೂನುಗಳ ಕುರಿತು ವರದಿ ನೀಡುವಂತೆ ಸಿಎಂ ನನಗೆ ಸೂಚಿಸಿದ್ದರು.

ತಜ್ಞರ ಸಮಿತಿ ವರದಿ ಹಾಗೂ ನನ್ನ ಅಭಿಪ್ರಾಯಗಳನ್ನು ಸಿಎಂಗೆ ಕಳುಹಿಸಿ¨ªೆ. ಇದನ್ನು ಉಲ್ಲೇಖಿಸಿ ಅಮಿತ್‌ ಶಾ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದು, ವರದಿ ನೀಡಿದ್ದರು. ನಾವು ಆ ಸುದೀರ್ಘ‌ ಪತ್ರದಲ್ಲಿ ಒಟ್ಟು 23 ಸಲಹೆಗಳನ್ನು ನೀಡಿದ್ದೆವು. ಆದರೆ ಕೇಂದ್ರ ಸರಕಾರ ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಯಾವುದೇ ಅಭಿಪ್ರಾಯವನ್ನು ಅದರಲ್ಲಿ ಸೇರಿಸಿಲ್ಲ. ಈಗ ಮಸೂದೆಯನ್ನು ಯಥಾವತ್ತಾಗಿ ಜಾರಿ ಮಾಡಿದ್ದಾರೆ ಎಂದರು.

Advertisement

ಇಂದಿನಿಂದಲೇ ಕಾನೂನು ಜಾರಿ ಮಾಡಲಾಗುವುದು ಎಂದು ಪೊಲೀಸ್‌ ಮಹಾ ನಿರ್ದೇಶಕರು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಅವರು ಜಾರಿ ಮಾಡುತ್ತೇವೆಂದು ಹೇಳಿದ್ದಾರೆ. ಆದರೆ ಕಾನೂನು-ಸಂಸದೀಯ ವ್ಯವಹಾರಗಳ ಸಚಿವನಾಗಿ ನಾನು ಕಾನೂನು ತಿದ್ದುಪಡಿ ಮಾಡುವ ಅವಕಾಶ ಇದೆ, ಮಾಡುತ್ತೇವೆ ಎನ್ನುತ್ತೇನೆ. ಸದ್ಯ ಈಗ ಹೊಸ ಕಾನೂನಿನ ಪ್ರಕಾರ ಎಫ್ಐಆರ್‌ ಆಗುತ್ತಿವೆ. ತಿದ್ದುಪಡಿ ಆದ ಬಳಿಕ ಅದನ್ನು ಪಾಲಿಸಬೇಕಾಗುತ್ತದೆ ಎಂದರು.

ಯಾವುದಕ್ಕೆಲ್ಲ ತಿದ್ದುಪಡಿ?
-ಸರಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಕೇಂದ್ರದ ಹೊಸ ಕಾನೂನಿನ ಪ್ರಕಾರ ಅಪರಾಧ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಅಲ್ಲ. ಇದು ದುರ್ದೈವ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಬ್ರಿಟಿಷರ ವಿರುದ್ಧ ದೊಡ್ಡ ಅಸ್ತ್ರವಾಗಿತ್ತು. ಈ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಅಪಾರಾಧ ಎಂಬ ಪ್ರಸ್ತಾವಕ್ಕೆ ತಿದ್ದುಪಡಿ.
-ರಾಷ್ಟ್ರಪಿತ, ರಾಷ್ಟ್ರೀಯ ಲಾಂಛನ, ಬಾವುಟಕ್ಕೆ ಅಗೌರವ ತೋರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ತಿದ್ದುಪಡಿ.
-ಸಂಘಟಿತ ಅಪರಾಧ ಎಂದು ಆರೋಪಿಸಿ, ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷಿಯ ವಿವೇಚನಾಧಿಕಾರಕ್ಕೆ ತಿದ್ದುಪಡಿ.
-ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ 3 ವರ್ಷ ಜೈಲು ಹಾಗೂ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕರಣದಲ್ಲಿ ಕಠಿನ ಕ್ರಮ ಕೈಗೊಳ್ಳುವಂತೆ ತಿದ್ದುಪಡಿ.
-ಸೈಬರ್‌ ಅಪರಾಧ, ಹ್ಯಾಕಿಂಗ್‌, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ.
-ಮೃತ ದೇಹದ ಮೇಲೆ ಅತ್ಯಾಚಾರ ಎಸಗುವುದು, ಮೃತ ದೇಹಕ್ಕೆ ತೋರುವ ಅಗೌರವ ಅಕ್ಷಮ್ಯ ಅಪರಾಧ. ಇದನ್ನು ಅಪರಾಧ ಎಂದು ಪರಿಗಣಿಸುವ ನಿಟ್ಟಿನಲ್ಲಿ ತಿದ್ದುಪಡಿ.
-ಹೊಸ ಕಾಯ್ದೆ ಅಡಿಯಲ್ಲಿ ಪೊಲೀಸ್‌ ಕಸ್ಟಡಿಯ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸುವುದಕ್ಕೆ ಅವಕಾಶ ಇದೆ. ಇದು ದೀರ್ಘ‌ ಅವಧಿಯಾಗುತ್ತದೆ. ಮೊದಲು 15 ದಿನ ಇತ್ತು. ಅವಧಿ ಕಡತಗೊಳಿಸಲು ತಿದ್ದುಪಡಿ.
-ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಪಾಸ್ತಿ ಜಪ್ತಿಗೆ ಮೊದಲು ಕೋರ್ಟ್‌ ಅನುಮತಿ ಬೇಕಾಗಿತ್ತು. ಆದರೆ ಹೊಸ ಕಾನೂನಿನಲ್ಲಿ ಪೊಲೀಸರಿಗೆ ಅನುಮತಿ ನೀಡಲಾಗಿದೆ. ಇದನ್ನು ತಿದ್ದುಪಡಿ ಮಾಡಲಾಗುತ್ತದೆ.

ದೇಶದಲ್ಲೇ ಮೊದಲ ಪ್ರಕರಣ ಗ್ವಾಲಿಯರ್‌ನಲ್ಲಿ ದಾಖಲು
ಹೊಸದಿಲ್ಲಿ: ನೂತನ ನ್ಯಾಯಸಂಹಿತೆಯಡಿ ದೇಶದಲ್ಲೇ ಮೊದಲ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದಾಖಲಾಗಿದೆ. ರವಿವಾರ ತಡರಾತ್ರಿ 12.10ಕ್ಕೆ ಬೈಕ್‌ ಕಳವು ಪ್ರಕರಣ ಇದಾಗಿದೆ. ಮೊದಲ ಪ್ರಕರಣ ದಿಲ್ಲಿಯಲ್ಲಿ ದಾಖಲಾಗಿದೆ ಎನ್ನಲಾಗಿದ್ದರೂ ಗ್ವಾಲಿಯರ್‌ನದೇ ಪ್ರಥಮ ಪ್ರಕರಣ ಎಂದು ಗೃಹಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ರಾಜ್ಯ: ಹಾಸನದಲ್ಲಿ ಮೊದಲ ಪ್ರಕರಣ
ಹಾಸನ: ಹೊಸ ಕ್ರಿಮಿನಲ್‌ ಕಾಯ್ದೆಗಳಡಿ ರಾಜ್ಯದಲ್ಲಿ ಮೊದಲ ಪ್ರಕರಣ ಹಾಸನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ದಾಖಲಾಗಿದೆ. ಹಾಸನ-ಹಳೆಬೀಡು ರಸ್ತೆ ಸೀಗೆ ಗ್ರಾಮದ ಬಳಿ ಕಾರು ಹಳ್ಳಕ್ಕೆ ಕಾರು ಪಲ್ಟಿಯಾಗಿದೆ. ಮಹಿಳೆ ಮೃತಪಟ್ಟಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಇದು ಪ್ರಥಮ ಪ್ರಕರಣವಾಗಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next