ಜೇವರ್ಗಿ: ಪಟ್ಟಣದ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪುರಸಭೆಯ ಕಾಂಪ್ಲೆಕ್ಸ್ ತೆರವುಗೊಳಿಸಿ ಬುಟ್ನಾಳ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಡಾ| ಅಜಯಸಿಂಗ್ ಸೂಚಿಸಿದರು. ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ ಬುಟ್ನಾಳ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ. ಹಳೆಯ ಬಸ್ ನಿಲ್ದಾಣ ಹತ್ತಿರದ ಪುರಸಭೆ ಮಳಿಗೆಯಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಕಟ್ಟಡವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಧಿಕಾರಿಗಳು ಪಟ್ಟಣದ ಜನತೆಗೆ ತಲುಪಿಸಬೇಕು. ಪಟ್ಟಣದ ಸೌಂದಯಿಕರಣಕ್ಕೂ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಭೀಮಾ ನದಿಗೆ ರಿಂಗ್ ಬಂಡ್ ನಿರ್ಮಿಸಿ ನೀರಿನ ಸಂಗ್ರಹ ಹೆಚ್ಚಿಸಬೇಕು ಎಂದು ಹೇಳಿದರು. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ದೀಪಗಳು, ಮಳೆ ನೀರು ಚರಂಡಿ, ಪಾದಚಾರಿ ಮಾರ್ಗ, ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಂಸ ಮಾರುಕಟ್ಟೆ ಸ್ಥಳಾಂತರ, ಅಂಬೇಡ್ಕರ್ ಭವನಕ್ಕೆ ಹೆಚ್ಚಿನ ಅನುದಾನ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ನಗರೊತ್ಥಾನ ಯೋಜನೆ ಹಂತ-3ರಲ್ಲಿ ಬಿಡುಗಡೆಯಾದ 5 ಕೋಟಿ ರೂ. ಹಾಗೂ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ 5 ಕೋಟಿ ರೂ. ಕ್ರಿಯಾ ಯೋಜನೆ ಹಂಚಿಕೆಯಾದ ಬಗ್ಗೆ ಶಾಸಕರು ಮಾಹಿತಿ ಪಡೆದರು.
14ನೇ ಹಣಕಾಸು ಯೋಜನೆಯ 1 ಕೋಟಿ 23 ಲಕ್ಷ, ಎಸ್‌ಎಫ್‌ಸಿ ಯೋಜನೆಯ 1 ಕೋಟಿ 52 ಲಕ್ಷ ರೂ. ಮತ್ತು ಕುಡಿಯುವ ನೀರಿಗಾಗಿ 4 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 1 ಕೋಟಿ 26 ಲಕ್ಷ, ಮಳೆ ನೀರು ಚರಂಡಿಗಾಗಿ 18 ಲಕ್ಷ, ಎಸ್‌ಸಿಪಿ/ಟಿಎಸ್‌ಪಿಯಲ್ಲಿ 57 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ ವಿವರಿಸಿದರು.
ಪುರಸಭೆ ಅಧ್ಯಕ್ಷೆ ರೇಣುಕಾ ಶರಣು ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹಾಂತಯ್ಯ ಹಿರೇಮಠ, ರವಿ ಕೋಳಕೂರ, ಮಾನಪ್ಪ ಗೋಗಿ, ಸುಭಾಷ ಚನ್ನೂರ, ಮರೆಪ್ಪ ಸರಡಗಿ, ಷಣ್ಮುಖಪ್ಪ ಹಿರೇಗೌಡ, ನೀಲಕಂಠ ಅವಂಟಿ ಹಾಗೂ ಇತರರು ಇದ್ದರು.