ಜಾರ್ಖಂಡ್ : ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರಿಗೆ ಇದೀಗ ಕಾನೂನು ಕಂಟಕ ಎದುರಾಗಿದೆ. 2.5 ಕೋಟಿ ರೂ. ವಂಚನೆ ಆರೋಪದ ಪ್ರಕರಣ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದೆ.
ಅಮೀಶಾ ಸಂಭಾವನೆಯಾಗಿ ಪಡೆದಿದ್ದ ಹಣ ಮರುಪಾವತಿಸಲು ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಗೆ ನೀಡಿದ್ದ ಚೆಕ್ ಬೌನ್ಸ್ ಪ್ರಕರಣ ಇದೀಗ ಜಾರ್ಖಂಡ್ ಹೈಕೋರ್ಟ್ ಅಂಗಳಕ್ಕೆ ಬಂದು ನಿಂತಿದೆ.
2013ರಲ್ಲಿ ಘೋಷಣೆಯಾಗಿದ್ದ ‘ದೇಸಿ ಮ್ಯಾಜಿಕ್’ ಸಿನಿಮಾದಲ್ಲಿ ಅಮಿಶಾ ಪಟೇಲ್ ನಾಯಕಿಯಾಗಿ ನಟಿಸಲು ಸಂಭಾವನೆ ಪಡೆದಿದ್ದರು. ಮೆಹುಲ್ ಅತ್ಹಾ ನಿರ್ದೇಶನದಲ್ಲಿ ಜಾಯೆದ್ ಖಾನ್,ರವಿ ಕೃಷ್ಣಾ, ಸಾಹಿಲ್ ಶ್ರಾಫ್ ಹಾಗೂ ರಣಧೀರ್ ಕಪೂರ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಏನಾಯಿತು ಎಂಬುದರ ಬಗ್ಗೆ ಇದುವರೆಗೂ ನಿಖರ ಮಾಹಿತಿ ಗೊತ್ತಿಲ್ಲ.
ಈ ಚಿತ್ರಕ್ಕೆ ಪಡೆದ ಸಂಭಾವನೆ ಹಿಂತಿರುಗಿಸಲು ಅಮಿಶಾ ಮೊದಲು ಒಪ್ಪಿಕೊಂಡಿರಲಿಲ್ಲ. ಗಣ್ಯರ ಜತೆ ತನ್ನ ಫೋಟೊಗಳನ್ನು ತೋರಿಸಿ ನಿರ್ಮಾಪಕರಿಗೆ ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದರಂತೆ. ನಂತರ ಬಡ್ಡಿ ಸಮೇತ ಹಣ ಹಿಂದಿರುಗಿಸಲು ಒಪ್ಪಿಕೊಂಡು 2.5 ಕೋಟಿ ಮೌಲ್ಯದ ಚೆಕ್ ನೀಡಿದ್ದರಂತೆ. ಆದರೆ, ಚೆಕ್ ಬೌನ್ಸ್ ಆಗಿದ್ದು, ನಟಿ ವಿರುದ್ಧ ಹಣ ವಂಚನೆ ಆರೋಪದಡಿ ನಿರ್ಮಾಪಕ ಸಿಂಗ್ ಜಿಲ್ಲಾಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಇದೀಗ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದೆ.
ಶುಕ್ರವಾರ (26) ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿತು. ಜತೆಗೆ ಈ ಕುರಿತು ಲಿಖಿತ ಪ್ರತಿಕ್ರಿಯೆ ನೀಡಲು ಎರಡು ವಾರಗಳ ಕಾಲಾವಕಾಶ ನೀಡಿದೆ.