ಮುಂಬಯಿ: ಬದುಕಿನಲ್ಲಿ ಮಾನವೀಯತೆ, ಪ್ರೀತಿ ಮಾತ್ರ ಉಳಿಯುತ್ತದೆ. ಉಳಿದುದೆಲ್ಲವೂ ಕ್ಷಣಿಕ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ವಿವಿಧ ಊರುಗಳಿಂದ ಆಗಮಿಸಿ ಬಂದು ಗೌರವಿಸಿದ ನಿಮ್ಮ ಪ್ರೀತಿಯನ್ನು ಊಹಿಸಲಿಕ್ಕೂ ನನಗೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಹೆಚ್ಚು ಸಮಯ ನೀಡಿ, ಅವರೊಂದಿಗೆ ಹೆಚ್ಚುಕಾಲ ಕಳೆಯಿರಿ. ನಿಮ್ಮೆಲ್ಲರ ಬದುಕಿ ಹಸನಾಗಲಿ ಎಂದು ಇತ್ತೀಚೆಗೆ ನಿವೃತ್ತ ರಾದ ಐಕಳ ಪಾಂಪೈ ಕಾಲೇಜಿನ ಪ್ರಾಧ್ಯಾಪಕ, ಪ್ರಾಂಶುಪಾಲ ಡಾ| ಜೆ. ಕ್ಲಾರೆನ್ಸ್ ಮಿರಾಂದ ಅವರು ಶುಭಹಾರೈಸಿದರು.
ಕಿನ್ನಿಗೋಳಿ ಪಾಂಪೈ ಕಾಲೇಜಿನ 1992-1993 ರ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳ ಅಮಿc ಗ್ರೂಪ್ ವಾಟ್ಸಪ್ ಬಳಗದ ಸದಸ್ಯರು ಮೇ 11 ರಂದು ನಡೆಸಿದ ರಜತ ಮಿಲನ‰ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, 25 ವರ್ಷಗಳ ಬಳಿಕ ಒಂದಾಗಿ ಬಂದು ತನ್ನನ್ನು ಗೌರವಿಸಿದ ತನ್ನ ಹಳೆ ಶಿಷ್ಯರ ಬಳಗ ಈ ಕಾರ್ಯ ಸದಾ ಮುಂದುವರಿಯಲಿ ಎಂದು ಹಾರೈಸಿದರು.
ಪುಸ್ತಕ ಪ್ರಕಟಣೆ, ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ನೆರವು ಇನ್ನಿತರ ಸಾಮಾಜಿಕ ಕಾರ್ಯವನ್ನೂ ಮಾಡುತ್ತಿರುವ ಬಳಗ ಈಗ ತಮ್ಮ ಇಡೀ ಗುರುವೃಂದಕ್ಕೆ ಸಂದಾಯವಾಗುವಂತೆ ಸಾಂಕೇತಿಕವಾಗಿ ಗುರುವಂದನೆಯನ್ನು ಈ ಮೂಲಕ ಸಲ್ಲಿಸಿತು. ಶಾಲು, ಹಾರ, ಪುಷ್ಪಗುಚ್ಚ, ನೆನಪಿನ ಕಾಣಿಕೆ, ಫಲಪುಷ್ಪ, ಬೆಳ್ಳಿಬಟ್ಟಲು ನೀಡಿ ಗುರುಗಳನ್ನು ಗೌರವಿಸಲಾಯಿತು.
ಬೆಂಗಳೂರು, ಪುಣೆ, ಮುಂಬಯಿ, ಮಂಗಳೂರು ಹಾಗೂ ಊರಿನಲ್ಲಿದ್ದ ಬಳಗದ ಸದಸ್ಯರು ಹಾಜರಿದ್ದರು. ಮುಂಬಯಿ ಯ ಪತ್ರಕರ್ತ ಏಳಿಂಜೆ ನಾಗೇಶ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಹೀರಾ ಶೆಟ್ಟಿ, ಬ್ಲೇಸಿಯಸ್ ಡಿಸೋಜ, ಲೊಲಿಟಾ, ಸಂತೋಷ್ ಆಚಾರ್ಯ, ಪುಷ್ಪನಾಥ್ ಸುವರ್ಣ, ಏಳಿಂಜೆ ನಾಗೇಶ್, ವಾಯ್ಲೆಟ್ ಡೇಸಾ, ಗಿರೀಶ್ ಕೊಂಚಾಡಿ, ವೇಣುಗೋಪಾಲ್ ಶೆಟ್ಟಿ, ವಿದ್ಯಾಲತಾ ಶೆಟ್ಟಿ, ಸುನೀತಾ ದೇವಾಡಿಗ, ಶಕುಂತಲಾ ಆಚಾರ್ಯ, ವಾಸುದೇವ ಭಟ್, ಶಾಲಿನಿ, ವಿಜಯಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾವುಕರಾದ ಗುರು‰ಗಳನ್ನು ನಗಿಸಿದ ಶಿಷ್ಯರು
25 ವರ್ಷಗಳ ಬಳಿಕವೂ ತಮ್ಮ ಗುರುವನ್ನು ಮರೆಯದೆ ಬಂದು ಗೌರವ ಸಲ್ಲಿಸಿದ ಶಿಷ್ಯ ವೃಂದದ ಪ್ರೀತಿಯನ್ನು ಕಂಡು ಭಾವುಕರಾದ ಡಾ| ಮಿರಾಂದ ಅವರು ಅಳು ತಡೆಯಲಾರದೆ ಕಣ್ಣೀರು ಹಾಕಿ ಗದ್ಗದಿತರಾಗಿ ಸಾವರಿಸಿಕೊಳ್ಳಲಾಗದೆ ತಡವರಿಸುವುದನ್ನು ಕಂಡ ಶಿಷ್ಯರು ಸಾರ್, ಪ್ರತಿ ಬಾರಿ ಊರಿಗೆ ಬಂದಾಗಲೂ ನಿಮ್ಮನ್ನು ಭೇಟಿಯಾಗಿ ಹೋಗುತ್ತೇವೆ. ಆದರೆ ಸಮ್ಮಾನ ಮಾಡಲಾಗದು ಎಂದು ಹಾಸ್ಯ ಚಟಾಕಿ ಹಾರಿಸಿದಾಗ ನಗು ತಡೆಯಲಾಗದೆ ದು:ಖವನ್ನು ಮರೆತರು.