ಶುಭಾ ಪೂಂಜಾ ಮುಖ್ಯಭೂಮಿಕೆಯಲ್ಲಿರುವ “ಅಂಬುಜಾ’ ಚಿತ್ರ ತೆರೆಗೆ ಸಿದ್ಧವಾಗಿದೆ. ಚಿತ್ರವನ್ನು ಮೇನಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರ ತಂಡಕ್ಕಿದೆ. ಶ್ರೀನಿ ಹನುಮಂತ ರಾಜು ನಿರ್ದೇಶನದ ಚಿತ್ರಕ್ಕೆ ಕಥೆ-ಸಾಹಿತ್ಯದ ಜೊತೆಗೆ ನಿರ್ಮಾಣದ ಜವಾವಾರಿಯನ್ನು ಕಾಶೀನಾಥ್ ಡಿ.ಮಡಿವಾಳ್ ಅವರು ಹೊತ್ತಿದ್ದು, ಲೋಕೇಶ್ ಭೈರವ ಹಾಗೂ ಶಿವಪ್ರಕಾಶ್ ಅವರು ಸಹ-ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.
“ಅಂಬುಜಾ’ ಚಿತ್ರದ ಹೈಲೈಟ್ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಒಂದು ಹೊಸ ವಿಚಾರ ಎಂಬುದು ಚಿತ್ರತಂಡದ ಮಾತು. ಚಿತ್ರದ ಬಗ್ಗೆ ಮಾತ ನಾಡುವ ನಿರ್ದೇಶಕ ಶ್ರೀನಿ, “ಚಿತ್ರದಲ್ಲಿ ಒಂದು ಹೊಸ ವಿಚಾರವನ್ನು ಹೇಳಿದ್ದೇವೆ. ಚಿತ್ರದ ಕಂಟೆಂಟ್ ತುಂಬಾ ಹೊಸದಾಗಿದೆ. ತುಂಬಾ ಫ್ರೆಶ್ ಆಗಿರುವ ಕಂಟೆಂಟ್ ಇದೆ. ಈವರೆಗೆ ಎಲ್ಲೂ ಬಾರದಿರುವ ವಿಚಾರವನ್ನು ಹೇಳಿದ್ದೇವೆ. ಈ ಘಟನೆ ಬೆಳಕಿಗೆ ಬಂದಿದ್ದೇ 2020ರಲ್ಲಿ. ಆ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇಷ್ಟು ದಿನ ಮಾಡಿದ ಚಿತ್ರೀಕರಣ ನನಗೆ ತುಂಬಾ ಖುಷಿಕೊಟ್ಟಿದೆ’ ಎನ್ನುವುದು ನಿರ್ದೇಶಕ ಶ್ರೀನಿ ಮಾತು.
ನಿರ್ಮಾಪಕರ ಸಿನಿಮಾ ಪ್ರೀತಿ ಬಗ್ಗೆ ಮಾತನಾಡುವ ಶ್ರೀನಿ, “ಇವತ್ತು ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿಬರುತ್ತಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ಬಜೆಟ್‌ನಲ್ಲಿ ಸ್ವಲ್ಪ ಆಚೀಚೆ ಆದರೂ ಯಾವುದೇ ಬೇಸರ ಮಾಡಿಕೊಳ್ಳದೇ, ಸಿನಿಮಾ ಚೆನ್ನಾಗಿ ಬರಲು ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ.
ಈ ಚಿತ್ರವನ್ನು ಕಾಶೀನಾಥ್ ಮಡಿವಾಳ್ ನಿರ್ಮಿಸುತ್ತಿದ್ದಾರೆ. ಉದ್ಯಮಿಯಾಗಿರುವ ಕಾಶೀನಾಥ್ ಅವರಿಗೆ ಸಾಹಿತ್ಯದ ಮೇಲೂ ಆಸಕ್ತಿ. ಬಿಡುವಿನ ವೇಳೆಯಲ್ಲಿ ಕಥೆ, ಕವನ ಎನ್ನುತ್ತಾ ಸಾಹಿತ್ಯಾಸಕ್ತಿಯನ್ನು ಪೋಷಿಸುತ್ತಲೇ ಬಂದ ಕಾಶೀನಾಥ್ ಅವರು ಬರೆದ ಕಥೆ “ಅಂಬುಜಾ’ ಈಗ ಸಿನಿಮಾವಾಗುತ್ತಿದೆ. ಚಿತ್ರಕ್ಕೆ ಅವರೇ ಸಾಹಿತ್ಯ
ಬರೆದಿದ್ದಾರೆ. ಒಂದೇ ಸಿನಿಮಾದಲ್ಲಿ ವಿಭಿನ್ನ ಜಾನರ್‌ನ ಹಾಡು ಬರೆದ ಖ್ಯಾತಿ ಅವರದು. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ಅನನ್ಯಭಟ್, ಅನುರಾಧ ಭಟ್, ಎಂ.ಡಿ.ಪಲ್ಲವಿ ಹಾಗೂ ಬೇಬಿ ಆಕಾಂಕ್ಷ ಹಾಡಿದ್ದಾರೆ. ಈ ಎಲ್ಲಾ ಹಾಡುಗಳಿಗೆ ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಹಾಡು ಕೇಳಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.