Advertisement
ಹಚ್ಚ ಹಸುರಿನ ಮಡಿಲು…ಗಡಿ ದಾಟಿ ಸ್ವಲ್ಪ ದಾರಿ ಕ್ರಮಿಸಿದೆವು. ಪ್ರಕೃತಿಯ ಆ ಸೌಂದರ್ಯ ಸವಿಯುವುದೇ ಒಂದು ರೀತಿಯ ಆನಂದ. ಹಚ್ಚ ಹಸುರಿನ ಕಂಗೊಳಿಸುವ ಆ ರಮಣೀಯ ದೃಶ್ಯ ಕಣ್ಮನಗಳಿಗೆ ಹಿತ. ಪಶ್ಚಿಮ ಘಟ್ಟಗಳ ಸಾಲಿನಂತೆ ಭಾಸವಾಗುವ ಆ ನಿಸರ್ಗ ಸೌಂದರ್ಯ ನೋಡುತ್ತಿದ್ದರೆ, ಎಲ್ಲೋ ಕಳೆದುಹೋದಂಥ ಅನುಭವ. ನಳ ನಳಿಸುವ ಆ ಬೆಟ್ಟದ ನಿಸರ್ಗದ ಮಡಿಲಲ್ಲಿ ಸಾಗುವಾಗ ಹಕ್ಕಿಗಳ ಇಂಪಾದ ಸ್ವರ ಎದೆಗೂಡಿನಲ್ಲಿ ಪುಟ್ಟ ನಾದ ಜಲಪಾತವನ್ನೇ ಸೃಷ್ಟಿಸಿತ್ತು. ಹಕ್ಕಿಗಳಂತೆ ನಾವೂ ಹಾರಾಡಬೇಕೆನಿಸಿತು.
ಅಂಬೋಲಿಯ ಆ ಹಾದಿ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವೃತವಾಗಿತ್ತು. ಆ ಮಂಜಿನ ಪರದೆಯೊಳಗೆ ನುಸಳಿಕೊಂಡು ಸಾಗುವುದೇ ಒಂದು ಸಾಹಸ. ಬೈಕಿನ ಹೆಡ್‌ಲೈ ಟ್ ಮುಂದೆ ದಾರಿ ತೋರಲು ಹರಸಾಹಸಪಡುತ್ತಿತ್ತು. ಮುಂದೆ ಬರುತ್ತಿದ್ದ ಗಾಡಿಗಳು ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ನಿಧಾನವಾಗಿ ಚಲಿಸುವುದು ಅನಿವಾರ್ಯವೇ ಆಯಿತು. ರೈಡಿಂಗ್ ಅಂತ ಹುಚ್ಚು ಸಾಹಸ ಮಾಡಲು ಹೋದರೆ ಅಷ್ಟೇ ಗತಿ.
Related Articles
ಸ್ವಲ್ಪ ದೂರದಿಂದಲೇ ನೀರಿನ ಜುಳು ಜುಳು ನಾದ ನಮ್ಮ ಕಿವಿಗೆ ಅಂಬೋಲಿಗೆ ಆಹ್ವಾನ ನೀಡಿತು. ಬಹುದಿನಗಳ ಮಹದಾಸೆ ಈಡೇರುವ ಕ್ಷಣ ಬಂದೇಬಿಟ್ಟಿತ್ತು. ಈ ಎರಡು ಕಣ್ಣಿನಲ್ಲಿ ಆ ಅಗಾಧ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಕಷ್ಟದ ಮಾತೇ ಆಯಿತು. ವರುಣದೇವ ನಿಜಕ್ಕೂ ಜಲವರ್ಣದಲ್ಲಿ ಚಿತ್ತಾರ ಬಿಡಿಸಿದ್ದ. ಮೈಮನದಲ್ಲಿ ರೋಮಾಂಚನದ ಪುಳಕ. ಮಿಟುಕಿಸುವ ಕ್ರಿಯೆಯನ್ನೇ ಕಣ್ರೆಪ್ಪೆ ಮರೆತುಬಿಟ್ಟಿತು. ಮನಸ್ಸಂತೂ ಸಂತನಂತೆ ಧ್ಯಾನಸ್ಥ. ಧುಮ್ಮಿಕ್ಕುವ ನೀರು ಕೆಳಗೆ ಮೆಟ್ಟಿಲುಗಳ ಮೂಲಕ ರಸ್ತೆಯತ್ತ ಹರಿಯುತ್ತಿತ್ತು. ಜಲಪಾತವನ್ನು ಕಣ್ತುಂಬಾ ಸವಿಯಲು, ಮೆಟ್ಟಿಲುಗಳಿಗೆ ಗ್ಯಾಲರಿ ಮಾಡಿದ್ದಾರೆ. ಅಲ್ಲಿ ನಿಂತು ಸ್ನಾನ ಮಾಡುತ್ತಾ, ಹಿಗ್ಗಿದೆವು.
Advertisement
ಅದು ಸಾವಿರಾರು ಸೆಲ್ಫಿಗಳ ಜನ್ಮಸ್ಥಳ!ಅಂಬೋಲಿ ಜಲಪಾತವು ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಧ್ಯೆ ಇರುವ ಕಾರಣ, ಎರಡೂ ರಾಜ್ಯಗಳ ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಅಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಈ ಬಾರಿ ಮಳೆಯೂ ಹೆಚ್ಚು ಬಂದಿದ್ದರಿಂದ, ಅಂಬೋಲಿ ಮೈತುಂಬಿ, ದಿನದಲ್ಲಿ ಸಾವಿರಾರು ಫೋಟೋಗಳಿಗೆ ಪೋಸು ಕೊಡುತ್ತಿತ್ತು. ಸೂರ್ಯಾಸ್ತದ ವರೆಗೂ ಎಂಜಾಯ್ ಮಾಡುತ್ತಾ, ಕತ್ತಲು ಆವರಿಸುತ್ತಾ ಬಂದಹಾಗೆ, ಸೆಲ್ಫಿಗಳನ್ನು ತೆಗೆಯುತ್ತಾ, ವಿದಾಯ ಹೇಳಿದೆವು. ಮರಳಿ, ಅದೇ ಮಳೆಯನ್ನೇ ಸೀಳಿಕೊಂಡು ನಮ್ಮ ಗೂಡನ್ನು ತಲುಪಿದೆವು. ರೂಟ್ ಮ್ಯಾಪ್
· ಮಂಗಳೂರಿನಿಂದ 460 ಕಿ.ಮೀ. ದೂರದಲ್ಲಿದೆ. · 30 ಕಿ.ಮೀ. ದೂರದಲ್ಲಿದೆ ಸಾವಂತ್ ವಾಡಿ ರೈಲು ನಿಲ್ದಾಣ. · ಖಾಸಗಿ ವಾಹನ ಮಾಡಿಕೊಂಡು ಹೋದರೆ ಉತ್ತ ಮ. · ಹತ್ತಿರದಲ್ಲಿದೆ ಸನ್ ಸೆಟ್ ಪಾಯಿಂಟ್, ಮಾಧವ ಗಡ್ ಪೋರ್ಟ್. · ಊಟ, ವಸತಿಗೆ ಸಮಸ್ಯೆಯಿಲ್ಲ. ಲೋಕನಗೌಡ ಎಸ್.ಡಿ.