ಮುಂಬಯಿ: ಮರಾಠಿ ಭೂಮಿ ನಮ್ಮ ಕರ್ಮಭೂಮಿಯಾಗಿದ್ದರೂ ಇಲ್ಲಿನ ಮೂಲ ನಿವಾಸಿಗಳಾದ ಮರಾಠಿಗರು ನಮಗೆ ಬೇಕಾದ್ದನ್ನು ಬೇಕಾದಷ್ಟು ನೀಡಿ ಪ್ರೋತ್ಸಾಹಿಸಿದ್ದಾರೆ. ನಾನೊಬ್ಬಳು ತುಳು, ಕನ್ನಡತಿ ಆಗಿದ್ದರೂ ನನ್ನನ್ನೇ ಇಲ್ಲಿನ ಮಹಾಪೌರೆ ಮಾಡಿದ್ದು ನಿದರ್ಶನವಾಗಿದೆ. ಆದ್ದರಿಂದ ತುಳು-ಕನ್ನಡಿಗರಿಗೆ ಮರಾಠಿ, ಮಹಾರಾಷ್ಟ್ರದ ಪ್ರೋತ್ಸಾಹದ ಕೊಡುಗೆ ಅನನ್ಯವಾದುದು. ಅಂತೆಯೇ ಸೌರಭ್ ನಟನೆಯ ಈ ಚಿತ್ರಕ್ಕೆ ಮರಾಠಿಗರ ಸಹಯೋಗ ಸಿಗಲಿದೆ. ತುಳುವರೂ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಅವಾಗಲೇ ತುಳು ಭಾಷೆಯ ಬೆಳವಣಿಗೆ ಸುಲಭವಾಗುವುದು ಎಂದು ಥಾಣೆ ಮಹಾನಗರ ಪಾಲಿಕಾ ಮೇಯರ್ ಮೀನಾಕ್ಷಿ ರಾಜೇಂದ್ರ ಶಿಂಧೆ ಅವರು ನುಡಿದರು.
ಕಡಂದಲೆ ಸುರೇಶ್ ಎಸ್. ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿದ್ಧಗೊಂಡು ಭಾರೀ ಜನಮನ್ನಣೆ ಪಡೆದ “ಅಂಬರ್ ಕ್ಯಾಟರರ್ಸ್’ ಸಿನೆಮಾ ಫೆ. 4 ರಂದು ಬೆಳಗ್ಗೆ ಉಪನಗರ ಥಾಣೆ ಪೂರ್ವದ ಆನಂದ್ ಟಾಕೀಸ್‌ನಲ್ಲಿ ತೆರೆಕಂಡಿದ್ದು, ಈ ತುಳು ಚಲನಚಿತ್ರದ ಮುಂಬಯಿನಲ್ಲಿನ ಪ್ರಥಮ ಪ್ರದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಶುಭಹಾರೈಸಿದರು.
ವಿಶೇಷ ಆಮಂತ್ರಿತ ಅತಿಥಿಗಳಾಗಿ ನಗರ ಸೇವಕಿ ಪರೀಷಾ ಪ್ರತಾಪ್ ಸರ್ ನಾಯ್ಕ, ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಸುನೀಲ್ ಆಳ್ವ, ಉದ್ಯಮಿಗಳಾದ ಸುರೇಶ್ ಎನ್. ಶೆಟ್ಟಿ, ಶ್ಯಾಮ ಖೆಡಿಯಾ, ಸುರೇಶ್ ಶೆಟ್ಟಿ ಮರಾಠ, ಸುರೇಶ್ ಶೆಟ್ಟಿ ಕಡಂದಲೆ, ಸುರೇಶ್ ಶೆಟ್ಟಿ ಯೆಯ್ಯಡಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಮೇಘಾ ಸೌರಭ್ ಭಂಡಾರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸೌರಭ್ ಅಪ್ರತಿಮ ಪ್ರತಿಭೆ
ನಾನೂ ಕೂಡಾ ಒಂದೆರಡು ಸಿನೆಮಾಗಳನ್ನು ನಿರ್ಮಿಸಿರುವೆ. ಸೌರಭ್‌ನನ್ನು ನೋಡುವಾಗಲೇ ಆತನಲ್ಲಿ ಅಪ್ರತಿಮ ಪ್ರತಿಭೆ ಇರುವುದು ಗೊತ್ತಾಗುತ್ತದೆ. ಇಂತಹ ಯುವ ನಟ, ಕಲಾಕಾರನಿಗೆ ಸಿನೆಮಾ ರಂಗದಲ್ಲಿ ಉಜ್ವಲ ಭವಿಷ್ಯವಿದೆ ಪರೀಷಾ ಸರ್‌ನಾಯ್ಕ ಅವರು ಆಶಯ ವ್ಯಕ್ತಪಡಿಸಿದರು.
ಥಾಣೆಯ ಧೀರಾಜ್ ಹೊಟೇಲ್‌ನ ಕೆ. ಪಿ. ಶೇಖರ್ ಎಲ್. ಶೆಟ್ಟಿ, ಆನಂದ್ ಟಾಕೀಸ್‌ನ ಬಲರಾಜ್ ಅಸ್ರಾಣಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದು ಸೌರಭ್ ಭಂಡಾರಿಗೆ ಶುಭಹಾರೈಸಿದರು. ಅಂಬರ್ ಕ್ಯಾಟರರ್ಸ್ ಸಿನೆಮಾದ ನಾಯಕ ನಟ, ತೌಳವ ಸೂಪರ್‌ಸ್ಟಾರ್ ಬಿರುದಾಂಕಿತ ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಫೆ. 11 ಬೆಳಗ್ಗೆ 9.15 ರಿಂದ ಆನಂದ್ ಟಾಕೀಸ್‌ನಲ್ಲಿ ಬೆಳಗ್ಗೆ 9.15 ರಿಂದ ತಿಲಕ್ ಟಾಕೀಸ್ ಡೊಂಬಿವಲಿ ಪೂರ್ವ ಮತ್ತು ಬೆಳಗ್ಗೆ 9.15 ಗಂಟೆಗೆ ಮೆಹುಲ್ ಟಾಕೀಸ್ ಮುಲುಂಡ್ ಪಶ್ಚಿಮ ಇಲ್ಲಿ “ಅಂಬರ್ ಕ್ಯಾಟರರ್ಸ್’ ಸಿನೆಮಾ ಪ್ರದರ್ಶಿಸಲ್ಪಡಲಿದೆ ಎಂದು ನಟ ಸೌರಭ್ ಭಂಡಾರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್