ಜಂಗಾಲ(ಛತ್ತೀಸ್‌ಗಡ): ಹಿಂದುಳಿದ ವರ್ಗಗಳ ರಕ್ಷಣೆಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿರುವಾಗ, ನೀವು ನಿಮ್ಮ ಹಕ್ಕು ಸ್ಥಾಪನೆಗಾಗಿ ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋಗಬೇಡಿ ಎಂದು ಪ್ರಧಾನಿ ಮೋದಿ ಅವರು ಹಿಂದುಳಿದವರಿಗೆ ಕರೆ ನೀಡಿದ್ದಾರೆ.
ಛತ್ತೀಸ್‌ಗಡದ ಜಂಗಾಲದಲ್ಲಿ ಕೇಂದ್ರ ಸರಕಾರದ ಮಹತ್ವಾ ಕಾಂಕ್ಷೆಯ “ಆಯುಷ್ಮಾನ್ ಭಾರತ’ ಆರೋಗ್ಯ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿ ಅವರು ಮಾತನಾಡಿದರು. “”ಯಾರೂ ತಮ್ಮ ಮಕ್ಕಳನ್ನು ನಕ್ಸಲ್ ನಾಯಕರಿಗೆ ಒಪ್ಪಿಸಬಾರದು” ಎಂದು ಮನವಿ ಮಾಡಿದ ಮೋದಿ, “”ನಕ್ಸಲ್ ನಾಯಕರು ತಾವು ತೆರೆಮರೆಯ ಲ್ಲಿದ್ದು, ಇತರರ ಮಕ್ಕಳು ಸಾಯುವಂತೆ ನೋಡಿಕೊಳ್ಳುತ್ತಾರೆ” ಎಂದು ಆರೋಪಿಸಿದರು.
“”ಬಾಬಾ ಸಾಹೇಬರು ಸಂವಿಧಾನದ ಮೂಲಕ, ಬಡವರಿಗೆ, ದಲಿತರಿಗೆ ಅವರ ಹಕ್ಕುಗಳನ್ನು ನೀಡಿದ್ದಾರೆ. ಆ ಹಕ್ಕುಗಳನ್ನು ಕಾಪಾಡುವುದೇ ಸರಕಾರದ ಧ್ಯೇಯವಾಗಿದೆ. ದಲಿತರ ಹಕ್ಕುಗಳ ಸಂರಕ್ಷಣೆಗೆ ಸರಕಾರ ಕಟಿಬದ್ಧವಾಗಿ ರುವಾಗ, ನೀವು ಶಸ್ತ್ರಾಸ್ತ್ರ ಹಿಡಿಯುವ, ಆ ಮೂಲಕ ನಿಮ್ಮ ಜೀವನವನ್ನು ನಾಶ ಮಾಡಿಕೊಳ್ಳುವ ಅಗತ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದರು.
ದಲಿತರಲ್ಲಿ ಜಾಗೃತಿ ಮೂಡಲು ಅಂಬೇಡ್ಕರ್ ಅವರೇ ಕಾರಣ ಎಂದ ಅವರು, “”ಹಿಂದುಳಿದ ವರ್ಗದ ಬಡ ತಾಯಿಯೊಬ್ಬನ ಮಗ ಇಂದು ದೇಶದ ಪ್ರಧಾನಿಯಾಗಲು ಅಂಬೇಡ್ಕರ್ ಅವರೇ ಕಾರಣ” ಎನ್ನುವ ಮೂಲಕ ತಮ್ಮ ರಾಜಕೀಯ ಸಾಧನೆಯ ಶ್ರೇಯಸ್ಸನ್ನು ಅಂಬೇ ಡ್ಕರ್ ಅವರಿಗೆ ಸಮರ್ಪಿಸಿದರು.
ಮಹತ್ವಾಕಾಂಕ್ಷೆಯ “ಆಯುಷ್ಮಾನ್ ಭಾರತ’: ಆಯುಷ್ಮಾನ್ ಭಾರತ್ ಯೋಜ ನೆಯು 1.5 ಲಕ್ಷ ಹಳ್ಳಿಗಳಲ್ಲಿನ ಆರೋಗ್ಯ ಉಪ- ಕೇಂದ್ರಗಳು ಹಾಗೂ ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. 2022ರೊಳಗೆ ಈ ಕೇಂದ್ರಗಳು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳಾಗಿ ಮಾರ್ಪಾಡಾಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಇದೇ ವೇಳೆ, 115 ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ಸರಕಾರ ವಿಶಿಷ್ಟ ಯೋಜನೆ ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ, 100ರಷ್ಟು ಹಳ್ಳಿಗಳು ಹಿಂದುಳಿದಿವೆ. ಈ ಜಿಲ್ಲೆಗಳಿಗೆ ಉತ್ತೇಜನ ಕೊಟ್ಟರೆ ಇವು ಮುಂದೆ ಅಭಿವೃದ್ಧಿಯ ಮಾದರಿ ಜಿಲ್ಲೆಗಳಾಗಿ ರೂಪುಗೊಳ್ಳುತ್ತವೆ ಎಂದರು.
ಬುಡಕಟ್ಟು ಮಹಿಳೆಗೆ ಚಪ್ಪಲಿ ಹಾಕಿದ ಮೋದಿ
ಕಾರ್ಯಕ್ರಮದಲ್ಲಿ ಬುಡಕಟ್ಟು ಮಹಿಳೆಯೊಬ್ಬಳಿಗೆ ನೀಡಲಾದ ಹೊಸ ಚಪ್ಪಲಿಗಳನ್ನು ಪ್ರಧಾನಿ ಮೋದಿಯವರೇ ಖುದ್ದಾಗಿ ಆಕೆಯ ಕಾಲುಗಳಿಗೆ ತೊಡಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಚಪ್ಪಲಿಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗಿ, ವೇದಿಕೆ ಮೇಲೆ ಆಗಮಿಸಿದ್ದ ಮಹಿಳೆ ಮುಂದೆ ಬಾಗಿ ತಾವೇ ಕೈಯ್ನಾರೆ ಅವರ ಕಾಲಿಗೆ ಚಪ್ಪಲಿ ತೊಡಿಸಿದಾಗ ಸಾವಿರಾರು ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತು. ಈ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಬಿಜೆಪಿ, “”ಪ್ರಧಾನಿ ಮೋದಿ ತಾವೊಬ್ಬ ಪ್ರಧಾನ ಸೇವಕ ಎಂಬುದನ್ನು ಈ ಮೂಲಕ ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ” ಎಂದು ಬಣ್ಣಿಸಿದೆ.