Advertisement

14ರಂದು ಅಂಬೇಡ್ಕರ್‌-ಜಗಜೀವನ್‌ರಾಂ ಜಯಂತಿ ಆಚರಣೆ

02:56 PM Mar 29, 2022 | Team Udayavani |

ಬಳ್ಳಾರಿ: ಜಿಲ್ಲಾಡಳಿತದ ವತಿಯಿಂದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ಹಾಗೂ ಸಂವಿಧಾನಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿಯನ್ನು ಏ.14ರಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಮೆರವಣಿಗೆ, ಸ್ತಬ್ಧಚಿತ್ರ, ಆಹಾರ, ವೇದಿಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಮತ್ತು ಯಾವುದೇ ಲೋಪಗಳಿಗೆ ಅಸ್ಪದ ನೀಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಏ. 14ರಂದು ಬೆಳಗ್ಗೆ 9:30ಕ್ಕೆ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಮೆರವಣಿಗೆ ಆರಂಭವಾಗಲಿದ್ದು, ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಮಾರ್ಗವಾಗಿ ವಾಲ್ಮೀಕಿ ಭವನಕ್ಕೆ ತೆರಳಲಿದೆ. ಬೆಳಗ್ಗೆ 11ಕ್ಕೆ ವಾಲ್ಮೀಕಿ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಲಿದ್ದು, ಸಂಪನ್ಮೂಲ ವ್ಯಕ್ತಿಯೊಬ್ಬರು ಡಾ| ಬಿ.ಆರ್‌.ಅಂಬೇಡ್ಕರ್‌ ಮತ್ತು ಡಾ| ಬಾಬು ಜಗಜೀವನರಾಂ ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಾಸಕರು, ನಿಗಮಮಂಡಳಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು. ವಾಲ್ಮೀಕಿ ಭವನದಲ್ಲಿ ಸೌಂಡ್‌ ಎಕೋಸಿಸ್ಟಮ್‌ ಸರಿಯಾಗದಿದ್ದಲ್ಲಿ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿಯೇ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರ ಮನವಿಗೆ ಸ್ಪಷ್ಟನೆ ನೀಡಿದರು.

ಜಗಜೀವನರಾಂ ಭವನ ಕಾಮಗಾರಿ ಪೂರ್ಣ

ಬಳ್ಳಾರಿ ನಗರದಲ್ಲಿ ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ| ಬಾಬು ಜಗಜೀವನರಾಂ ಭವನದ ನಿರ್ಮಾಣ ಕಾಮಗಾರಿಯನ್ನು ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಸಮುದಾಯದ ಬಳಕೆಗೆ ನೀಡಲಾಗುವುದು ಎಂದ ಡಿಸಿ ಮಾಲಪಾಟಿ, ಭವನದ ಕುರಿತು ತಮ್ಮ ನೋವು ಅರ್ಥವಾಗುತ್ತದೆ. ನಾಳೆಯಿಂದಲೇ ಭವನದ ಕಂಪೌಂಡ್‌ ಕಾಮಗಾರಿ ಆರಂಭಿಸಲಾಗುವುದು. ಎಲ್ಲ ರೀತಿಯಿಂದಲೂ ಸುಸಜ್ಜಿತವಾದ ಭವನವನ್ನು ತಮಗೆ ಒದಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

Advertisement

ಅಂಬೇಡ್ಕರ್‌ ವೃತ್ತದ ಸೌಂದರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು. ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ವಿವರಿಸಿದ ಜಿಲ್ಲಾಧಿಕಾರಿಗಳು ಕೆಎಎಸ್‌/ಐಎಎಸ್‌ ತರಬೇತಿಗೆ ಜಿಲ್ಲಾಡಳಿತದಿಂದ ಸ್ಪರ್ಧಾತ್ಮಕ ತರಬೇತಿ ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಹಾಸ್ಟೆಲ್‌ಗ‌ಳ ಕಾಯಕಲ್ಪಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಎಎಸ್ಪಿ ಗುರುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿ ಕಾರಿಗಳು ಮತ್ತು ವಿವಿಧ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ಇತರರು ಇದ್ದರು. ವಿವಿಧ ದಲಿತ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next