Advertisement

ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮಾವೇಶ

11:11 AM Jul 21, 2017 | |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ 126 ನೇ ವರ್ಷಾಚರಣೆ ಅಂಗವಾಗಿ ಶುಕ್ರವಾರ ಅಂತಾರಾಷ್ಟ್ರೀಯ ಸಮಾವೇಶ ನಡೆಯಲಿದೆ.  ಬೆಂಗಳೂರು ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ನಡೆಯುವ ಸಮಾವೇಶದ ಪೂರ್ವ ಸಿದ್ಧತೆ ಪರಿಶೀಲನೆ ಹಾಗೂ ಅಂಬೇಡ್ಕರ ವ್ಯಕ್ತಿ ಚಿತ್ರ ಪ್ರದರ್ಶನವನ್ನು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಉದ್ಘಾಟಿಸಿದರು.

Advertisement

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಸುಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್‌-3 ಉದ್ಘಾಟನೆ ಮಾಡಲಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮೂರು ದಿನ ನಡೆಯುವ ಸಮಾವೇಶದಲ್ಲಿ ಸುಮಾರು 150ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ವಾಂಸರು ವಿಷಯ ಮಂಡನೆ ಮಾಡಲಿದ್ದಾರೆ. ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ.  ಈ ಸಮಾವೇಶದಲ್ಲಿ ಅಂಬೇಡ್ಕರ್‌ ಅವರ ಆಶಯ, ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸ, ಸಮಾನತೆ, ಮಾನವ ಹಕ್ಕುಗಳ ರಕ್ಷಣೆ, ಸಮ ಸಮಾಜದ ನಿರ್ಮಾಣದ ಉದ್ದೇಶ ಹೊಂದಿರುವ ಸಂವಿಧಾನದ ಪರಿಚಯ ಮತ್ತು ಅದರ ಉದ್ದೇಶಗಳನ್ನು ಜಗತ್ತಿನ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಪ್ರಜಾಪ್ರಭುತ್ವಕ್ಕೆ ಆತಂಕ ಉಂಟು ಮಾಡಿರುವ ಕೋಮುವಾದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ದೇಶದಲ್ಲಿ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಲಿದೆ. ಕೊನೆಯ ದಿನ ಅಂಬೇಡ್ಕರ್‌ ತತ್ವಗಳನ್ನು ಜಗತ್ತಿಗೆ ಸಾರುವ ಮಹತ್ವದ “ಬೆಂಗಳೂರು ನಿರ್ಣಯ’ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮ ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು. 

ಕಾರ್ಯಕ್ರಮದ ಮುಖ್ಯ ವೇದಿಕೆ ಸಮಾರಂಭದಲ್ಲಿ ಕುಳಿತುಕೊಳ್ಳಲು ಆಗದಿರುವ ಜನರಿಗೆ ಎಲ್‌ಇಡಿ ವ್ಯವಸ್ಥೆ ಹಾಗೂ ಕಾರ್ಯಕ್ರಮವನ್ನು ವೆಬ್‌ ಲೈವ್‌ ಟೆಲಿಕಾಸ್ಟ್‌ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಅಂಬೇಡ್ಕರ್‌ ಅವರನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಅವರು ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದವರು.

Advertisement

ಅಲ್ಲದೇ, ಅಂಬೇಡ್ಕರ್‌ ಒಬ್ಬ ಆರ್ಥಿಕ ತಜ್ಞರಾಗಿದ್ದರು, ಉತ್ತಮ ವಕೀಲರಾಗಿದ್ದರು, ಅಣೆಕಟ್ಟುಗಳ ನಿರ್ಮಾಣ ನೀಲ ನಕ್ಷೆ ಸಿದ್ಧಪಡಿಸಿದ್ದರು. ಮಹಿಳೆಯರ ಸಬಲೀಕರಣಕ್ಕೆ ಹೋರಾಟ ನಡೆಸಿದ್ದರು. ಒಟ್ಟಾರೆ ಅಂಬೇಡ್ಕರ್‌ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಸಮಾಜಕ್ಕೆ ಈ ಸಮಾವೇಶದ ಮೂಲಕ ಪರಿಚಯಿಸಲಾಗುತ್ತದೆ ಎಂದು ಹೇಳಿದರು. 

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ, ಅಂಬೇಡ್ಕರ್‌ ಅವರ ಆದರ್ಶಗಳನ್ನು ಇಂದಿನ ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಇದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಕೂಡ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು. 

ವಸ್ತು ಪ್ರದರ್ಶನ ಉದ್ಘಾಟನೆ: ಅಂಬೇಡ್ಕರ್‌ ಅವರ ಜೀವನ ಸಾಧನೆಯನ್ನು ಬಿಂಬಿಸುವ ವಸ್ತುಪ್ರದರ್ಶನವನ್ನು ಸಚಿವ ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಿದರು. ವಾರ್ತಾ ಇಲಾಖೆ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ಅಂಬೇಡ್ಕರ್‌ ಅವರ ಜೀವನ ಸಾಧನೆ, ಹೋರಾಟ, ವಿದೇಶಿ ವಿವಿಗಳಲ್ಲಿ ಅಧ್ಯಯನ ನಡೆಸಿರುವ ಮಾಹಿತಿ, ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅಧಿಕಾರ ಸ್ವೀಕಾರ, ಬೌದ್ಧ ಧರ್ಮ ಸ್ವೀಕಾರ ಹಾಗೂ ಅವರ ಸಾವಿನ ಅಂತಿಮ ಯಾತ್ರೆಯ ಕುರಿತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 

ಬೊಂಬೈಕಿ ರಾಣಿ ನೋಡಿದ ಮಂತ್ರಿಗಳು: ಗ್ರಾಮೀಣ ಪ್ರದೇಶದಲ್ಲಿ ಸಿನಿಮಾ ನಟ, ನಟಿಯರ ಛಾಯಾಚಿತ್ರಗಳನ್ನು ತೋರಿಸುವ ಬೊಂಬೈಕಿ ರಾಣಿ ಡಬ್ಬಿಯಲ್ಲಿ ಅಂಬೇಡ್ಕರ್‌ ಜೀವನ ಸಾಧನೆ ಬಿಂಬಿಸುವ ಛಾಯಾ ಚಿತ್ರಗಳ ಪ್ರದರ್ಶನವನ್ನು ಮೂವರೂ ಮಂತ್ರಿಗಳು ನೋಡಿ ಖುಷಿ ಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next