Advertisement

ಅಂಬೇಡ್ಕರ್‌ ಭವನ: ಅನುದಾನವಿದ್ದರೂ ಜಾಗದ್ದೇ ಸಮಸ್ಯೆ!

12:15 PM Apr 19, 2022 | Team Udayavani |

ಕಾರ್ಕಳ: ಕಾರ್ಕಳ, ಹೆಬ್ರಿ ತಾ|ಗಳಲ್ಲಿ ಡಾ| ಅಂಬೇಡ್ಕರ್‌ ಸಮುದಾಯ ಭವನ ನಿರ್ಮಿಸಲು ಹಣಕಾಸಿನ ಕೊರತೆಯಿಲ್ಲ. ಕೆಲವೆಡೆ ಜಾಗದ ಸಮಸ್ಯೆ ಯಿದೆ. ಉಭಯ ತಾ|ನಲ್ಲಿ 13 ಭವನಗಳು ಪ್ರಗತಿ ಹಂತದಲ್ಲಿವೆ. ಏಳು ಕಡೆಗಳಲ್ಲಿ ಜಾಗ ಗುರುತಿಸುವಿಕೆ, ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿದೆ.

Advertisement

ಕಾರ್ಕಳ ತಾ|ನಲ್ಲಿ 25,277 ಹಾಗೂ ಹೆಬ್ರಿ ತಾ|ನಲ್ಲಿ 7,588 ಪರಿಶಿಷ್ಟ ಜಾತಿ, ಪಂಗಡ ಸೇರಿ 32,865 ಜನಸಂಖ್ಯೆಯಿದೆ. ಪ್ರತೀ ಗ್ರಾ.ಪಂ., ಹೋಬಳಿ, ತಾ| ಕೇಂದ್ರಗಳ ವ್ಯಾಪ್ತಿಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನ ಹೊಂದಬೇಕೆಂದು ಸರಕಾರದ ಆದೇಶವಿದೆ. ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಬೇಡಿಕೆಗೆ ತಕ್ಕಂತೆ ಭವನ ನಿರ್ಮಿಸಲಾಗುತ್ತಿದೆ.

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಂಬಂಧಿಸಿ ಬೇಡಿಕೆಗಳು ಗ್ರಾ.ಪಂ. ಮಟ್ಟದಲ್ಲಿ ಇದ್ದರೂ, ಅನುದಾನಗಳು ಲಭ್ಯವಾದರೂ ಅರಣ್ಯ ಇಲಾಖೆ, ಡೀಮ್ಡ್ ಫಾರೆಸ್ಟ್‌ ಇತ್ಯಾದಿ ಅಡ್ಡಿಯಿಂದ ಜಾಗದ ಸಮಸ್ಯೆಗಳಿವೆ. ಕುಕ್ಕುಂದೂರು ಗ್ರಾ.ಪಂ. ಮುಂಡ್ಕೂರು ಬಳಿ 20 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ರಸ್ತೆಗೆ ಸಂಬಂಧಿಸಿ ಸಮಸ್ಯೆಗಳಿವೆ.

ಮಂಜೂರಾತಿಗೆ ಕಾಯುತ್ತಿದೆ. ಬೆಳ್ಮಣ್‌ ಇಟ್ಟಮೇರಿ ಎಂಬಲ್ಲಿ 20 ಲ.ರೂ. ವೆಚ್ಚದಲ್ಲಿ ಭವನ ನಿರ್ಮಾಣ ಸಂಬಂಧ ಜಾಗ ಮಂಜೂರಾತಿ ಕಡತ ಎಸಿ ಕಚೇರಿಯಲ್ಲಿದೆ. ವರಂಗ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ಮಿಸಲು ಜಮೀನು ಗುರುತಿಸಿದ್ದು, ತಹಶೀಲ್ದಾರ್‌ ಕಚೇರಿಯಲ್ಲಿ ಮಂಜೂರಾತಿ ಹಂತದಲ್ಲಿದೆ. ದುರ್ಗಾ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಭವನ ಪೂರ್ಣಗೊಂಡು ಪಂಚಾಯತ್‌ಗೆ ಹಸ್ತಾಂತರವಾಗಿದೆ. ಮಾಳ ಗ್ರಾ.ಪಂ, ವ್ಯಾಪ್ತಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ.

ಶಿವಪುರ ಗ್ರಾ.ಪಂ. ವತಿಯಿಂದ ಶಾಲಾ ಬಳಿ ಸ್ಥಳ ಗುರುತಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ಸಮುದಾಯ ಭವನಕ್ಕೆ ಸಂಬಂಧಿಸಿ ಇನ್ನು ಬೇಡಿಕೆಗಳಿವೆ. ಕಾರ್ಕಳ ತಾ| ಈದು ಹಾಗೂ ಹೆಬ್ರಿ ತಾ|ನ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂಬೇಡ್ಕರ್‌ ಭವನಕ್ಕೆ ಬೇಡಿಕೆಯಿದ್ದು ಕೆಲವು ಭವನಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ.

Advertisement

ಕಾರ್ಕಳ-5.ಕೋ.ರೂ., ಹೆಬ್ರಿ -1 ಕೋ.ರೂ. ವೆಚ್ಚದಲ್ಲಿ ಭವನ ನಿರ್ಮಾಣ

ಕಾರ್ಕಳ ತಾ| ಕೇಂದ್ರಕ್ಕೆ ಕಾಬೆಟ್ಟು ವಾರ್ಡ್‌ನಲ್ಲಿ 1 ಎಕರೆ ಜಾಗ ತಾ| ಅಂಬೇಡ್ಕರ್‌ ಭವನಕ್ಕೆ ಮೀಸಲಿಡಲಾಗಿದೆ. 2016ರಲ್ಲೇ ನೀಲ ನಕ್ಷೆ ತಯಾರಿಸಲಾಗಿತ್ತು. ಆರಂಭದಲ್ಲಿ 100 ಮಂದಿ, ಅನಂತರ 1ಸಾವಿರ ಸಾಮರ್ಥ್ಯದ ಭವನ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿತ್ತು. ಸುಮಾರು 750 ಮಂದಿ ಸಾಮರ್ಥ್ಯದ ಸುಸಜ್ಜಿತ ಭವನಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅಂದಾಜು ಪಟ್ಟಿ ಮತ್ತು ನಕ್ಷೆಯನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಒಪ್ಪಿಗೆಯನ್ನು ಪಡೆಯಲಾಗಿದೆ. ಲಭ್ಯ 1.5 ಕೋ.ರೂ.ಅನುದಾನದಲ್ಲಿ ಕಟ್ಟಡ ನಿರ್ಮಾಣ, ಸೌಕರ್ಯ ಹೊಂದಲು ಸಾಧ್ಯವಿದೆ. ಈತನ್ಮಧ್ಯೆ ತಾ| ಅಂಬೇಡ್ಕರ್‌ ಭವನದ ಸಾಮರ್ಥ್ಯ ಹೆಚ್ಚಿಸಿ, ಮತ್ತಷ್ಟೂ ಸುಸಜ್ಜಿತ, ಆಧುನಿಕವಾಗಿ ನಿರ್ಮಿಸುವ ಉದ್ದೇಶವನ್ನು ಸಚಿವ ಸುನಿಲ್‌ಕುಮಾರ್‌ ಹೊಂದಿದ್ದು, ಹೆಚ್ಚುವರಿ ಅನುದಾನ ತಂದು 5 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಇರಾದೆ ಹೊಂದಿದ್ದಾರೆ. ಹೆಬ್ರಿ ತಾ| ಕೇಂದ್ರದಲ್ಲಿ 1.20 ಎಕರೆ ಜಾಗ ಗುರುತಿಸಿ, 1.ಕೋ.ರೂ ವೆಚ್ಚದಲ್ಲಿ ನಿರ್ಮಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರವಾಗಿದೆ.

ಎಲ್ಲರಿಗೂ ಅನುಕೂಲ

ಸಮುದಾಯದ ಮಂದಿ ಹೆಚ್ಚಿರುವ ಕಡೆಗಳಲ್ಲಿ ಭವನ ನಿರ್ಮಿಸಲಾಗುತ್ತಿದೆ. ಬಹುತೇಕ ಪ್ರಗತಿಯಲ್ಲಿದೆ. ಸಮಾಜದ ಕೊನೆ ಸ್ತರದ ವ್ಯಕ್ತಿಗೂ ಇದರಿಂದ ಅನುಕೂಲವಾಗುತ್ತಿದೆ. -ರೋಶನ್‌ಕುಮಾರ್‌, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಾರ್ಕಳ

ಕೆಲವೆಡೆ ಜಾಗದ ಸಮಸ್ಯೆ

ಗ್ರಾ.ಪಂ ಮಟ್ಟದಲ್ಲಿ ಭವನ ನಿರ್ಮಾಣಕ್ಕೆ ಸರಕಾರದಿಂದ ಸುತ್ತೋಲೆಯಿದೆ. 10 ಲಕ್ಷ ರೂ. ಅನುದಾನವೂ ಲಭ್ಯವಿದೆ. ಕಲ್ಯಾ ಗ್ರಾಮ ಸಹಿತ ಕೆಲವೆಡೆ ಜಾಗದ ಸಮಸ್ಯೆಯಿದೆ. ಜಾಗವಿಲ್ಲದಿದ್ದರೆ ಅನುದಾನ ವಾಪಸ್‌ ಹೋಗುತ್ತದೆ. -ಅಣ್ಣಪ್ಪ ನಕ್ರೆ, ದಲಿತ ಮುಖಂಡ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next