ಬಳ್ಳಾರಿ: ನಗರದ ಬಿಡಿಎಎ ಸಭಾಂಗಣದಲ್ಲಿ ಏ. 25ರಂದು ಅಂತರಾಜ್ಯ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.
ತುಂಗಾಭದ್ರಾ ಜಲಾಶಯದ ಹೂಳನ್ನು ತೆಗೆಯದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತುಂಗಭದ್ರಾ ಜಲಾಶಯದ ಹೂಳನ್ನು ತೆಗೆಸಲು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಇತ್ತೀಚಿಗೆ ಚುನಾವಣೆ ಭಾಷಣದಲ್ಲಿ ಭರವಸೆ ನೀಡಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಮೂರು ಪಕ್ಷದ ರಾಜ್ಯಾಧ್ಯಕ್ಷರನ್ನು ಕರೆಸಿ ಅವರೊಂದಿಗೆ ಸಂವಾದ ಹಾಗೂ ಇತರೆ ವಿಷಯಗಳನ್ನು ಚರ್ಚಿಸಲಾಗುವುದು ಎಂದರು.
ತುಂಗಭದ್ರಾ ಜಲಾಶಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಕೊಟ್ಟೂರು ಸಂಗನಬಸವ ಮಹಾಸ್ವಾಮಿ, ಹಗರಿಬೊಮ್ಮನಹಳ್ಳಿ ನಂದಿಪುರದ ಮಹೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆ ವಹಿಸುವರು. ಎಸ್‌ಪಿ ಲಕ್ಷ್ಮ್ಮಣ ಬ ನಿಂಬರಗಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಇದೇ ವೇಳೆ ತುಂಗಭದ್ರಾ ಜಲಾಶಯದಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಅಧಿಕಾರಿಗಳಾದ ವಿ.ಪಿ.ಉದ್ದಿಹಾಳ್, ಕೆ. ಗೋವಿಂದರಾಜುಲು, ಡಾ| ಎಚ್.ಮಹಾಬಲೇಶ್ವರ, ಕೆ.ಚನ್ನಪ್ಪ, ವಿ.ವೀರೇಶಯ್ಯ, ಜಿ.ಚನ್ನಬಸಪ್ಪ, ರಾಮರಾವು ಅವರನ್ನು ಸನ್ಮನಿಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ವೀರನಗೌಡ, ಭೀಮನಗೌಡ, ವೀರೇಶ್, ಶ್ರೀಧರ್ ಜಾಲಿಹಾಳ್, ಶರಣಪ್ಪ, ಶಿವಯ್ಯ ಇನ್ನಿತರರಿದ್ದರು.
Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು 75 ವರ್ಷ ಪೂರ್ಣಗೊಂಡಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳು ಸೇರಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೆಲ ಜಿಲ್ಲೆಗಳ 12 ಲಕ್ಷ ಎಕರೆ ಕೃಷಿ ಜಮೀನುಗಳಿಗೆ ಮತ್ತು ಕುಡಿಯಲು ನೀರು ಪೂರೈಸಲಿದೆ. ಜಲಾಶಯದ ಈ ಸಂಭ್ರಮವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಆಚರಿಸಬೇಕಿತ್ತು. ಅದರೆ, ತುಂಗಭದ್ರಾ ಜಲಾಶಯವನ್ನು ಎರಡು ಸರ್ಕಾರಗಳು ನಿರ್ಲಕ್ಷ್ಯತಾಳಿರುವ ಹಿನ್ನೆಲೆಯಲ್ಲಿ ರೈತ ಸಂಘದಿಂದ ಆಚರಿಸಿ, ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬಿಸಿಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದರು.