ಮುಂಬಯಿ: ಬಲಗೈ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಅವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
33 ರ ಹರೆಯದ ಆಂಧ್ರದ ಗುಂಟೂರು ಮೂಲದ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ.
ಪ್ರಸಕ್ತ ವಿಶ್ವಕಪ್ನಲ್ಲಿ ಶಿಖರ್ ಧವನ್ ಮತ್ತು ಶಂಕರ್ ಅವರು ಗಾಯಾಳಾದ ಬಳಿಕ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆಗಾರರು ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಅವರನ್ನು ತಂಡಕ್ಕೆ ಕರೆಸಿಕೊಂಡಿದ್ದರು.
2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.