ಉಡುಪಿ: ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದೆ. ಕೃಷ್ಣಾಪುರ ಮಠದಲ್ಲಿ ಪರ್ಯಾಯೋತ್ಸವ ಸಡಗರ ಮೇಳೈಸಿದೆ. ವಿಶೇಷವಾಗಿ ಕೃಷ್ಣಾಪುರ ಮಠ ಹಲವು ಸೋಜಿಗಗಳಿಂದ ಕೂಡಿದೆ. ಮಠದ ಹಿಂದಿರುವ ಶೆಡ್‌ನಲ್ಲಿ 1973ರ ಮಾಡೆಲ್‌ನ ಅಂಬಾಸಿಡರ್ ಕಾರು ಎಲ್ಲರ ಗಮನ ಸೆಳೆಯುತ್ತಿದೆ. ಶ್ರೀಗಳು ಇಂದಿಗೂ ತಮ್ಮ ಸಂಚಾರ- ಪ್ರವಾಸಕ್ಕೆ ಅದೇ ಕಾರು ಬಳಸುತ್ತಿದ್ದಾರೆ.
ಕಡುನೀಲಿ ಬಣ್ಣದ ಈ ಕಾರು ಆಧುನಿಕ ಭರಾಟೆಯಲ್ಲಿ ಸರಳತೆ ನೆಲೆಯಲ್ಲಿ ಸವಾಲೊಡ್ಡಿ ನಿಂತಂತಿದೆ. ಶ್ರೀ ಮಠದ ವಿಶೇಷ ಆಕರ್ಷಣೆಗಳಲ್ಲಿ ಈ ಕಾರು ಕೂಡ ಒಂದಾಗಿದೆ. ಶ್ರೀ ಹೊರಗಡೆ ಸಭೆ, ಸಮಾರಂಭಗಳಿಗೆ ತೆರಳಿದಾಗ ಸಾರ್ವಜನಿಕರು ಕಾರನ್ನು ವಿಶೇಷ ಕುತೂಹಲದಿಂದ ವೀಕ್ಷಿಸುತ್ತಾರೆ.
ಶ್ರೀಕೃಷ್ಣಾಪುರ ಶ್ರೀಗಳು ಸರಳತೆ ಮತ್ತು ಸಂಪ್ರದಾಯಕ್ಕೆ ಹೆಚ್ಚು ಒತ್ತು ಕೊಡುವರು. ಆಧ್ಯಾತ್ಮದ ಕೇಂದ್ರ ಬಿಂದುವಿನಲ್ಲಿ ಆಧುನಿಕತೆಗೆ ಒಗ್ಗಿಕೊಳ್ಳದೆ ದ್ಯೋತಕವೆಂಬಂತೆ ಈ ಕಾರನ್ನು ಕಾಣಬಹುದು. ಅಷ್ಟೇ ಅಲ್ಲದೆ ಮಠದ ವಿಷಯಕ್ಕೆ ಸಂಬಂಧಿಸಿ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ತೀರ ಕನಿಷ್ಠ ಸೌಲಭ್ಯಕ್ಕೆ ಆದ್ಯತೆ ನೀಡುತ್ತಾರೆ. ದೂರವಾಣಿ ಕ್ರಾಂತಿ ಸಂದರ್ಭದಲ್ಲಿ ಎಲ್ಲೆಡೆಯೂ ಲ್ಯಾಂಡ್‌ಲೈನ್ ಸಂಪರ್ಕವಿದ್ದ ಕಾಲಘಟ್ಟದಲ್ಲಿಯೂ ಕೃಷ್ಣಾಪುರ ಮಠ ಟೆಲಿಫೋನ್ ಸಂಪರ್ಕವನ್ನು ಹೊಂದಿರಲಿಲ್ಲ. ಶ್ರೀಪಾದರು ಪತ್ರ ವ್ಯವಹಾರ, ಮುಖತಃ ಭೇಟಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇವತ್ತಿಗೂ ಪತ್ರ ಮತ್ತು ದಾಖಲೆಗಳ ಸಂರಕ್ಷಣೆಗೆ ಶ್ರೀಗಳು ಹೆಚ್ಚಿನ ಅಸ್ಥೆಯನ್ನು ಶ್ರೀಗಳು ವಹಿಸುತ್ತಾರೆ. ಕಾರಿ ನಿಂದಾಗಿ ಅಂತಸ್ತು ಹೆಚ್ಚಾ ಗ ಬೇ ಕೆಂದೇ ನಿಲ್ಲ ಎಂಬು ವುದು ಅವರ ಅಂಬೋಣ.
ಅರ್ಧ ಶತಮಾನ ಚಾಲಕರಾಗಿದ್ದ ಬಾರಿತ್ತಾಯರು :
ಕೃಷ್ಣಾಪುರ ಶ್ರೀಪಾದರ ಕಾರಿಗೆ ಕರಂಬಳ್ಳಿ ಶ್ರೀನಿವಾಸ ಬಾರಿತ್ತಾಯರು 1955ರಿಂದ 2006ರ ವರೆಗೆ ಸುಮಾರು 51 ವರ್ಷ ಖಾಯಂ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀನಿವಾಸ ಬಾರಿತ್ತಾಯರು ಶಾಸಕ ಕೆ. ರಘುಪತಿ ಭಟ್ ಅವರ ತಂದೆ. 2006ರ ಅನಂತರ ಅವರು ನಿವೃತ್ತರಾದರು. ಶ್ರೀಗಳಿಗೆ ಹಳೆ ಕಾರಿನ ಮೇಲೆ ತುಂಬ ಒಲವು, ಎಲ್ಲಿಯೇ ಓಡಾಟವಿದ್ದರೂ ಅದೇ ಕಾರನ್ನು ಬಳಸುತ್ತಾರೆ.
ಪೆಟ್ರೋಲ್‌ನಿಂದ ಡೀಸೆಲ್ ಎಂಜಿನ್‌ಗೆ :
1973ರಲ್ಲಿ ಶ್ರೀಗಳ ಓಡಾಟಕ್ಕೆ ಈ ಅಂಬಾಸಿಡರ್ ಕಾರನ್ನು ಖರೀದಿಸಲಾಯಿತು. ಈ ಕಾರು ಎಂಇಜಿ 653 ನೋಂದಣಿ ಸಂಖ್ಯೆಯನ್ನು ಹೊಂದಿದೆ. 49 ವರ್ಷಗಳಿಂದ ಶ್ರೀಗಳು ಇದನ್ನು ಓಡಾಟಕ್ಕೆ ಬಳಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು, ಶಾಖಾ ಮಠಗಳಿಗೆ ಭೇಟಿ ಸೇರಿದಂತೆ ಉಡುಪಿ-ದ.ಕ. ಜಿಲ್ಲೆ ಒಳಗೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಕಾಲಕಾಲಕ್ಕೆ ಸರ್ವಿಸ್ ಮಾಡಿಸುವ ಮೂಲಕ ಈಗಲು 49 ವರ್ಷದ ಹಳೆ ಕಾರು ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವುದು ವಿಶೇಷ. ಸದ್ಯ ಪೆಟ್ರೋಲ್ ಎಂಜಿನ್‌ನಿಂದ ಡೀಸೆಲ್ ಎಂಜಿನ್‌ಗೆ ಬದಲಾವಣೆಗೊಂಡಿದೆ.