Advertisement

ರಾಯಭಾರಿ ದ್ರಾವಿಡ್‍ಗೆ ಮತದಾನದ ಹಕ್ಕಿಲ್ಲ

11:28 PM Apr 14, 2019 | Lakshmi GovindaRaju |

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸಿ ಉತ್ತೇಜನ ನೀಡಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ಡ್ರಾವಿಡ್‌ ಅವರನ್ನು ಲೋಕಸಭಾ ಚುನಾವಣೆಗೆ ರಾಜ್ಯದ “ಚುನಾವಣಾ ಐಕಾನ್‌’ ( ರಾಯಭಾರಿ) ಆಗಿ ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ. ಆದರೆ, ವಿಪರ್ಯಾಸದ ಸಂಗತಿ ಏನೆಂದರೆ, ಅವರೇ ಈ ಬಾರಿ ಮತದಾನದಿಂದ ವಂಚಿತರಾಗಲಿದ್ದಾರೆ.

Advertisement

ಏಕೆಂದರೆ, 2019ರ ಲೋಕಸಭಾ ಚುನಾವಣೆಗೆ ಸಿದ್ಧಪಡಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ರಾಹುಲ್‌ ಡ್ರಾವಿಡ್‌ ಅವರ ಸ್ವಯಂಕೃತ ಪ್ರಮಾದದಿಂದಾಗಿ ಮತದಾರರ ಪಟ್ಟಿಯಿಂದ ಅವರ ಹೆಸರು ಡಿಲಿಟ್‌ ಆಗಿದೆ.

ರಾಹುಲ್‌ ಡ್ರಾವಿಡ್‌ ಅವರು ಇಂದಿರಾನಗರದಿಂದ ಆರ್‌ಎಂವಿ ಬಡಾವಣೆಗೆ ವಾಸಸ್ಥಳ ಬದಲಿಸಿದ್ದರು ಎನ್ನಲಾಗಿದ್ದು, ಅದರಂತೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಡ್ರಾವಿಡ್‌ ಸಹೋದರ ಫಾರಂ-7 (ಹೆಸರು ತೆಗೆದು ಹಾಕುವ) ಭರ್ತಿ ಮಾಡಿ ಕೊಟ್ಟಿದ್ದರು. ಅದರಂತೆ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡಲಾಗಿತ್ತು.

ಆದರೆ, ವಾಸಸ್ಥಳದ ವಿಳಾಸ ಬದಲಾವಣೆ ಆದ ಮೇಲೆ ಫಾರಂ-6 ಭರ್ತಿ ಮಾಡಿ ಹೆಸರು ಸೇರ್ಪಡೆಗೆ ಮಾ.16ರೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ರಾಹುಲ್‌ ಡ್ರಾವಿಡ್‌ ಅರ್ಜಿ ಕೊಡದೇ ಇದ್ದಿದ್ದರಿಂದ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಲ್ಲ. ಸೇರಿಸಲು ಈಗ ಅವಕಾಶವೂ ಇಲ್ಲ.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೇಳೆ ರಾಹುಲ್‌ ಡ್ರಾವಿಡ್‌ ಅವರ ಸಹೋದರ ಫಾರಂ-7 ಸಲ್ಲಿಸಿದ್ದರಿಂದ ಅವರ ಹೆಸರನ್ನು ಹಳೆಯ ವಿಳಾಸದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಯಿತು. ಆದರೆ, ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಸಂಬಂಧ ಮತಗಟ್ಟೆ ಅಧಿಕಾರಿಗಳು ಮತ್ತು ಬಿಬಿಎಂಪಿ ಸಿಬ್ಬಂದಿ ಮೂರು ಬಾರಿ ರಾಹುಲ್‌ ಡ್ರಾವಿಡ್‌ ಅವರ ಹೊಸ ವಾಸದ ಮನೆಗೆ ಭೇಟಿ ಕೊಟ್ಟಿದ್ದಾರೆ.

Advertisement

ಆದರೆ, ಅವರ ಸಂಪರ್ಕ ಸಾಧ್ಯವಾಗಿಲ್ಲ. ಆಪ್ತ ಸಹಾಯಕರ ಪ್ರಕಾರ ಆಗ ಡ್ರಾವಿಡ್‌ ವಿದೇಶದಲ್ಲಿದ್ದರು. ಹಾಗಾಗಿ, ನಿಗದಿತ ದಿನಾಂಕದೊಳಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಹಾಗಾಗಿ, ಈ ಬಾರಿ ಅವರು ಮತದಾನ ಮಾಡಲು ಅವಕಾಶವಿಲ್ಲ ಎಂದು ಬಿಬಿಎಂಪಿ ಆಯುಕ್ತರೂ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಕಳೆದ ಬಾರಿಯೂ ಗೊಂದಲ ಆಗಿತ್ತು: 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ರಾಹುಲ್‌ ಡ್ರಾವಿಡ್‌ ಅವರನ್ನು ರಾಜ್ಯಮಟ್ಟದ ಚುನಾವಣಾ ಐಕಾನ್‌ ಆಗಿ ನೇಮಕ ಮಾಡಲಾಗಿತ್ತು. ಆದರೆ, ಐಕಾನ್‌ ಘೋಷಣೆ ಕಾರ್ಯಕ್ರಮದಲ್ಲೇ ಅವರು ಗೈರು ಹಾಜರಾಗಿದ್ದರು. ಅದಕ್ಕೆ, ಹೆಚ್ಚಾಗಿ ವಿದೇಶದಲ್ಲಿರುವ ರಾಹುಲ್‌ ಡ್ರಾವಿಡ್‌ ಅವರನ್ನು ಐಕಾನ್‌ ಆಗಿ ನೇಮಕ ಮಾಡಿದರೆ ಉದ್ದೇಶ ಸಫ‌ಲವಾಗುವುದಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು.

ರಾಹುಲ್‌ ಡ್ರಾವಿಡ್‌ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್‌ ಆಗಿರುವುದು ಉದ್ದೇಶಪೂರ್ವಕವಾಗಿ ಅಲ್ಲ. ಈಗ ಅದಕ್ಕೆ ಪರಿಹಾರವೂ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ರಾಹುಲ್‌ ಡ್ರಾವಿಡ್‌ ರಾಜ್ಯಮಟ್ಟದ ಚುನಾವಣಾ ಐಕಾನ್‌ ಆಗಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಂತೂ ಅವರಿಗಿಲ್ಲ. ಆದಾಗ್ಯೂ, ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಆಗಿರುವುದನ್ನು ಮುಂದಿಟ್ಟುಕೊಂಡು ಅವರು ಐಕಾನ್‌ ಆಗಿರುವ ವಿಚಾರದ ಬಗ್ಗೆ ಚರ್ಚೆ ಬೆಳೆಸುವುದು ಬೇಡ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next