Advertisement

ಶರಣಮೇಳದ ರೂವಾರಿ

06:15 AM Mar 15, 2019 | Team Udayavani |

ಕೂಡಲಸಂಗಮ: ಜಗದ್ಗುರು ಡಾ|ಮಾತೆ ಮಹಾದೇವಿ ಅವರು ಕೂಡಲಸಂಗಮ ಸುಕ್ಷೇತ್ರವನ್ನು ಲಿಂಗಾಯತ ಧರ್ಮಕ್ಷೇತ್ರವೆಂದು
ಸಾರಿ, ಇಲ್ಲಿ 1988ರಿಂದ ಯುಗದ ಅದ್ಭುತವಾದ “ಶರಣ ಮೇಳ’ ಎಂಬ ಬೃಹತ್‌ ಧಾರ್ಮಿಕ ಕಾರ್ಯಕ್ರಮ ಆರಂಭಿಸಿದ್ದರು.

Advertisement

1992ರಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠ ಸ್ಥಾಪಿಸಿ, ತಮ್ಮ ಧಾರ್ಮಿಕ ಗುರುಗಳಾದ ಶ್ರೀ ಲಿಂಗಾನಂದರನ್ನು
ಪ್ರಥಮ ಪೀಠಾಧ್ಯಕ್ಷರನ್ನಾಗಿ ಮಾಡಿ ಗುರು ಋಣ ತೀರಿಸುವ ಪ್ರಯತ್ನ ಮಾಡಿದ್ದರು. ಶ್ರೀ ಲಿಂಗಾನಂದ ಸ್ವಾಮೀಜಿಯವರು 1995ರ
ಜೂನ್‌ 30ರಂದು ಲಿಂಗೈಕ್ಯರಾದ ನಂತರ ಮಾತೆ ಮಹಾದೇವಿಯವರು ಎಲ್ಲ ಶರಣರ ಅಪೇಕ್ಷೆ ಮೇರೆಗೆ ಜನವರಿ 13, 1996ರಂದು 2ನೇ ಮಹಾಜಗದ್ಗುರುವಾಗಿ ಪೀಠ ಅಲಂಕರಿಸಿದ್ದರು.

ಅಂದಿನಿಂದ ಲಕ್ಷಾಂತರ ಬಸವ ಭಕ್ತರನ್ನು ಸುಸಂಸ್ಕಾರದಿಂದ ಮುನ್ನಡೆಸಿದ್ದರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ
ಕುಂಬಳಗೂಡು ಸಮೀಪದ ಬಸವ ಗಂಗೋತ್ರಿ ಆಶ್ರಮದಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿ, ಕೂಡಲಸಂಗಮ ಸುಕ್ಷೇತ್ರದಲ್ಲಿ
ಲಿಂ. ಲಿಂಗಾನಂದರ 63ಅಡಿ ಎತ್ತರದ ಪುತ್ಥಳಿ ನಿರ್ಮಿಸಿದ್ದರು. ನಿರ್ಭೀತ ನಿಲುವು, ತತ್ವನಿಷ್ಠೆ, ಸತ್ಯಪ್ರಿಯತೆ, ಸಮಾಜೋದ್ಧಾರ
ಕಳಕಳಿಗಳಿಂದ ವೈಶಿಷ್ಟ್ಯಪೂರ್ಣ ಧಾರ್ಮಿಕ ಜೀವನ ಸವೆಸಿದ್ದರು. ಧರ್ಮಪ್ರಚಾರದ ಅವಿರತ ಸಾಧನೆ ಮೆಚ್ಚಿ ಚೆನ್ನೈನ
ಡಿವೈನ್‌ ಹ್ಯಾಂಡ್ಸ್‌ ಇಂಟರ್‌ನ್ಯಾಷನಲ್‌ ಯುನಿವರ್ಸಿಟಿಯಿಂದ 12-08-2013ರಲ್ಲಿ ಡಾಕ್ಟರೇಟ್‌ ಪದವಿಪಡೆದಿದ್ದರು.

ಆಶ್ರಮಗಳ ಸ್ಥಾಪನೆ
ದೇಶದ 8 ರಾಜ್ಯಗಳಲ್ಲಿ ರಾಷ್ಟ್ರೀಯ ಬಸವ ದಳಗಳ ಸ್ಥಾಪನೆ. 1200 ಕ್ಕೂ ಹೆಚ್ಚು ಶಾಖೆಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ.
ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸ್ಥಾಪನೆ. ನೀಲಾಂಬಿಕಾ ನಿರ್ಗತಿಕ ಮಕ್ಕಳ ಕುಟೀರದ ಸ್ಥಾಪನೆ. ಲಿಂಗಾಯತ ಧರ್ಮ
ಮಹಾಸಭಾ ಸ್ಥಾಪನೆ. ಲಿಂಗಾಯತ ಸಮಾಜದ ಸ್ಥಾಪನೆ. ಅಕ್ಕನಾಗಲಾಂಬಿಕಾ ಅನಾಥಾಶ್ರಮ ಸ್ಥಾಪನೆ. ಅಕ್ಕಮಹಾದೇವಿ
ವೃದ್ಧಾಶ್ರಮ ಸ್ಥಾಪನೆ ಮಾಡಿ, ಸಾಮಾಜಿಕ ಸೇವೆಯ ಮುಂಚೂಣಿಯಲ್ಲಿದ್ದರು.

ಬಸವ ಧರ್ಮ ಸಮ್ಮೇಳನಗಳು
ಡಾ|ಮಾತೆ ಮಹಾದೇವಿ ಅವರು ಬಸವ ಧರ್ಮದ ಪ್ರಚಾರ ದೇಶದೆಲ್ಲೆಡೆ ಹರಡಲೆಂದು ಹಲವಾರು ಸಮ್ಮೇಳನ ನಡೆಸಿದ್ದರು. ಪ್ರಥಮ ಬಸವ ಧರ್ಮ ಸಮ್ಮೇಳನ 1993ರಲ್ಲಿ ತಮಿಳುನಾಡಿನ ಊಟಿ ಸಂಘಟಿಸಿದ್ದರು. 2ನೇ ಬಸವ ಧರ್ಮ ಸಮ್ಮೇಳನ 1994ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ, 3ನೇ ಬಸವ ಧರ್ಮ ಸಮ್ಮೇಳನ 1995ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನಡೆಸಿದ್ದರು. 4ನೇ ಬಸವ ಧರ್ಮ ಸಮ್ಮೇಳನ 1996ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್‌, 5ನೇ ಬಸವ ಧರ್ಮ ಸಮ್ಮೇಳನ 1997ರಲ್ಲಿ ಭಾರತದ ರಾಜಧಾನಿ ನವದೆಹಲಿಯ ಐತಿಹಾಸಿಕ ಕೆಂಪುಕೋಟೆ ಮೈದಾನದಲ್ಲಿ ಆಯೋಜಿಸಿದ್ದರು. 6ನೇ ಸಮ್ಮೇಳನ 1998ರಲ್ಲಿ ಮಹಾರಾಷ್ಟ್ರದ ರಾಜಧಾನಿ ಮುಂಬಯಿಯ ಆಜಾದ್‌ ಮೈದಾನದಲ್ಲಿ, 7ನೇ ಸಮ್ಮೇಳನ 1999ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯಲ್ಲಿ ನಡೆದಿತ್ತು.

Advertisement

ಲಿಂಗಾಯತ ಧರ್ಮ ಮಹಾ ಸಮ್ಮೇಳನ
ಪ್ರಥಮ ಲಿಂಗಾಯತ ಧರ್ಮ ಮಹಾಸಮ್ಮೇಳನ 2005ರಲ್ಲಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಇರುವ ಪಾಲಮ್‌ ಸಮೀಪದ ಮಹಾವೀರ ವಾಟಿಕಾದಲ್ಲಿ ನಡೆಸಿದ್ದರು. 2ನೇ ಮಹಾಸಮ್ಮೇಳನ 2007ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜರುಗಿತ್ತು. 3ನೇ ಮಹಾಸಮ್ಮೇಳನ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಯಶಸ್ವಿಯಾಗಿತ್ತು. 4ನೇ ಮಹಾಸಮ್ಮೇಳನ 2011ರಲ್ಲಿ ಮಹಾರಾಷ್ಟ್ರದ  ಪುಣೆ ನಗರದಲ್ಲಿ ಆಯೋಜಿಸಿ, ದೇಶದ ವಿವಿಧೆಡೆ ಇರುವ ಲಿಂಗಾಯಿತರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದರು.

ಪ್ರವೀಣ ಗೌಡರ

Advertisement

Udayavani is now on Telegram. Click here to join our channel and stay updated with the latest news.

Next