Advertisement

ಅಂಬರೀಶ್‌ ಮಾತು ಒರಟು, ಗಂಭೀರ ವ್ಯಕ್ತಿತ್ವ

11:14 AM Dec 03, 2018 | |

ಮೈಸೂರು: ನಟ ಅಂಬರೀಶ್‌ ಅಂದರೆ ಒರಟು ಮಾತಿನ, ಉಡಾಫೆ ವ್ಯಕ್ತಿ ಎನಿಸಿದ್ದರು. ಅವರು ಆಂತರ್ಯದಲ್ಲಿ ಅಂತರ್ಮುಖೀಯಾಗಿ ಹಾಗೂ ಗಂಭೀರ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟ ಮಂಡ್ಯ ರಮೇಶ್‌ ಬಣ್ಣಿಸಿದರು.  

Advertisement

ಸ್ಪಂದನ ಸಾಂಸ್ಕೃತಿಕ ಪರಿಷತ್ತು, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ ವತಿಯಿಂದ ಜಯನಗರದ ನೇಗಿಲಯೋಗಿ ಮರಳೇಶ್ವರ ಸೇವಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನಟ, ಮಾಜಿ ಸಚಿವ ಅಂಬರೀಶ್‌ ಅವರಿಗೆ ನುಡಿ ಮತ್ತು ಕಾವ್ಯ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಡುಗಿಯನ್ನು ಚುಡಾಯಿಸುವ ಜಲೀಲನಾಗಿ ಸಿನಿಮಾ ರಂಗ ಪ್ರವೇಶಿದ ಅಂಬರೀಶ್‌,

ತಮ್ಮ ಹಲವು ಚಿತ್ರಗಳನ್ನು ವಿಭಿನ್ನವಾದ ಪಾತ್ರಗಳನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಆದರೆ, ಅಂಬರೀಶ್‌ ಅಂದರೆ ಬಹುತೇಕರು ಒರಟು ಮಾತಿನ, ಉಡಾಫೆ ವ್ಯಕ್ತಿ ಎಂಬ ಭಾವನೆ ಹೊಂದಿದ್ದರು. ಆದರೆ, ಅಂಬರೀಶ್‌ ಅವರು ಆಂತರ್ಯದಲ್ಲಿ ಅಂತರ್ಮುಖೀಯಾಗಿ ಹಾಗೂ ಮೇಲ್ನೋಟಕ್ಕೆ ಉಡಾಫೆ ವ್ಯಕ್ತಿ ಎನಿಸಿದರು. ಗ‌ಂಭೀರ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು.

ರಾಜಕಾರಣದಲ್ಲಿ ಇರುವವರು ಭ್ರಷ್ಟರು ಎಂಬ ಆರೋಪವಿದೆ. ಆದರೆ, ಅಂಬರೀಶ್‌ ಈ ಮಾತಿಗೆ ಅಪವಾದ. ರಾಜಕಾರಣದಲ್ಲಿದ್ದ ದಿನದವರೆಗೆ ಜನರ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಒಮ್ಮೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಲು ಅಂಬರೀಶ್‌ ಅವರು 22 ಪುಟಗಳಷ್ಟು ಬರೆದುಕೊಂಡು ಬಂದಿದ್ದರು.

ಅಂಬರೀಶ್‌ ಸ್ಮಾರಕ ನಿರ್ಮಾಣ ವಿಚಾರವಾಗಿ ಉಂಟಾಗಿರುವ ವಿವಾದ ಕುರಿತು ಮಾತನಾಡಿದ ಅವರು, ಚಿತ್ರ ನಿರ್ಮಾಣದ ಸ್ಟುಡಿಯೋಗಳು ಸೃಷ್ಟಿಶೀಲವಾಗಿರಬೇಕು. ಆದರೆ, ರಾಜಕಾರಣಿಗಳು, ಜವಾಬ್ದಾರಿ ಮರೆತ ಮಠಾಧೀಶರು, ಹುಸಿ ಸಾಹಿತಿಗಳು ಇಂತಹ ಸ್ಟುಡಿಯೋಗಳನ್ನು ಸಮಾಧಿಗಳನ್ನಾಗಿ ಮಾಡುತ್ತಿದ್ದಾರೆ ಎಂದರು. 

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಮಾತನಾಡಿ, ಅಂಬರೀಶ್‌ ಅಪಾರ ಹೃದಯವಂತರು. ರಾಜಕಾರಣಿಗಳ ಭ್ರಷ್ಟತೆಯನ್ನು ವಿರೋಧಿಸುವ ಹಲವು ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ, ತಾವೇ ರಾಜಕಾರಣಕ್ಕೆ ಬಂದಾಗ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ ಎಂದರು. 

ಮೈಸೂರು ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದ್ದ 22 ಮಂದಿ ಕವಿ-ಕವಯತ್ರಿಗಳು ಅಂಬರೀಶ್‌ ಕುರಿತು ಕವನ ವಾಚಿಸಿದರು. ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್‌, ರಂಗಕರ್ಮಿ ರಾಜಶೇಖರ ಕದಂಬ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಅಧ್ಯಕ್ಷ ಡಿ.ರವಿಕುಮಾರ್‌, ಸ್ಪಂದನ ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಟಿ.ಸತೀಶ್‌ ಜವರೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next