Advertisement

ಅಂಬರೀಷ್‌: ಬೆಳ್ಳಿತೆರೆಯ ಭಾವಗೀತೆ

12:30 AM Nov 26, 2018 | |

ಮಂಡ್ಯ ಅಂದಾಕ್ಷಣ ನೆನಪಾಗುತ್ತಿದ್ದ ಹೆಸರೇ-ಅಂಬರೀಷ್‌. ಮಂಡ್ಯ-ಮದ್ದೂರು-ಮಳವಳ್ಳಿ ಕಡೆಯ ಜನ, ಹೊಸದಾಗಿ ಬೈಕ್‌ ಅಥವಾ ಕಾರು ಖರೀದಿಸಿದರೆ ವಾಹನದ ಮೇಲೆ “ಹಾಯ್‌ ಅಂಬಿ’,”ಅಂಬರೀಷ್‌’, “ಮಂಡ್ಯದ ಗಂಡು’, “ಜಲೀಲ…’ ಎಂಬ ಸ್ಟಿಕ್ಕರುಗಳನ್ನು ತಪ್ಪದೇ ಅಂಟಿಸುತ್ತಿದ್ದರು. ಆಟೋ ಖರೀದಿಸಿದರಂತೂ ಮುಂಭಾ ಗದಲ್ಲಿಯೇ ಅಂಬರೀಷ್‌ ಅವರ ಚಿತ್ರ ಅಂಟಿಸಿಬಿಡುತ್ತಿದ್ದರು. ಹಿಂಭಾಗದಲ್ಲಿ “ಏ ಬುಲ್‌ ಬುಲ್‌ ಮಾತಾಡಕಿಲ್ವ?”ಮಣ್ಣಿನ ದೋಣಿ’, “ಸೋಲಿಲ್ಲದ ಸರದಾರ’…

Advertisement

ಮುಂತಾದ ಹೆಸರುಗಳು “ಕಡ್ಡಾಯ’ ಎಂಬಂತೆ ಇರುತ್ತವೆ. ಅಷ್ಟರಮಟ್ಟಿಗೆ ಮಂಡ್ಯದ ಜನರನ್ನು, ಅವರ ಮನಸು ಮತ್ತು ಬದುಕನ್ನು ಅಂಬರೀಷ್‌ ಆವರಿಸಿಕೊಂಡಿದ್ದರು. 

ಉಡಾಫೆ, ಒರಟು ಮಾತು ಮತ್ತು ಭಾವುಕತೆ-ಇದು, ಮಂಡ್ಯದ ಜನರ ರಕ್ತದ ಗುಣ. ಈ ಗುಣಗಳ ಸಮಪಾಕದಂತಿದ್ದವರು ಅಂಬರೀಷ್‌. ಅದೆಷ್ಟೇ ಸೀರಿಯಸ್ಸಾದ ಸಂದರ್ಭವಾಗಿದ್ದರೂ  -“ಅದೇನ್‌ ಮಹಾ, ಬಿಟ್ಟಾಕಯ್ನಾ ಅತ್ಲಾಗಿ…’ ಎಂದು ಹೇಳಿಬಿಡುವ ಧೈರ್ಯ ಅಂಬಿಗೆ ಮಾತ್ರ ಇತ್ತು. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಸಚಿವ ಪದವಿಗೆ ರಾಜೀನಾಮೆ ಕೊಟ್ಟು ಅಂಬಿ ಬೆಂಗಳೂರಿಗೆ ಬಂದಾಗ-“ಇದು ಪಲಾಯನವಾದ. ಸೆಂಟ್ರಲ್‌ ಮಿನಿಸ್ಟರ್‌ ಆಗಿದ್ದುಕೊಂಡೇ ನೀವು ಹೋರಾಡಬೇಕಿತ್ತು…’ ಎಂದು ಕೆಲವರು ಹೇಳಿದರು. ತಕ್ಷಣ ಅಂಬರೀಷ್‌- “ಅಲ್ಲ ಕಣಯ್ಯ, ರಾಜ್ಯಕ್ಕೆ ಅನ್ಯಾಯವಾದ್ರೂ ಅಂಬರೀಷ್‌ ಸುಮ್ನಿದಾರೆ ಅಂತ ಒಂದಷ್ಟು ಜನ ಬೊಂಬಾ ಹೊಡೀತಿದಾರೆ. ರಾಜೀನಾಮೆ ಕೊಟ್ಟು ಬಂದ್ರೆ ನೀವು ಹಿಂಗಂತಿದೀರಿ. ಏನ್ಮಾಡುವಾ? ಆ ಮಿನಿಸ್ಟ್ರೆ ಪೋಸ್ಟೇನು ಶಾಶ್ವತವಾ? ಹೋದ್ರೆ ಹೋಯ್ತು, ಬಿಟಾØಕಿ ಅತ್ಲಾಗೆ. ಹಿಟ್‌ಮ್ಯಾಲ್‌ ಅವರೆಕಾಯ್‌..’ ಎಂದು ಅದೇ ಉಡಾಫೆಯಿಂದ ಹೇಳಿದ್ದರು. ವರ್ಷಗಳ ಹಿಂದೆ ಅಂಬಿಗೆ ಅಭಿನಂದಿಸಲು ಕನ್ನಡ ಚಿತ್ರರಂಗದವರೆಲ್ಲ ಸೇರಿ ಅಪರೂಪದ, ಆಪ್ತ ಕಾರ್ಯಕ್ರಮ ಮಾಡಿದರಲ್ಲ; ಅವತ್ತು ಮಾತ್ರ ಈ ಪ್ರೀತಿಗೆ ನಾನೇನ್‌ ಕೊಡಕ್ಕಾಗುತ್ತೆ ಎನ್ನುತ್ತಾ ಅಂಬರೀಷ್‌ ಭಾವುಕರಾಗಿದ್ದರು. 

ಅಂಬರೀಷ್‌ ಅವರ ಹೃದಯ ಶ್ರೀಮಂತಿಕೆಯ ಕುರಿತು ‌ ಕಥೆಗಳೇ ಇವೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಂಬರೀಷ್‌ ಸ್ಪರ್ಧಿಸಿದ್ದರು. ಆಗ ಅಭಿಮಾನಿಯೊಬ್ಬ ಅವರೊಂದಿಗೆ ಹಗಲಿರುಳೂ ಜೊತೆಗಿದ್ದ. ಆ ಹುಡುಗ ತಳಸಮುದಾಯದಿಂದ ಬಂದವನು. ಅವನ ಮಾತು, ನಡವಳಿಕೆ ಅಂಬರೀಷ್‌ಗೆ ಇಷ್ಟವಾಯಿತು. ಆಗೊಮ್ಮೆ, “ಲೋ ಇವೆ°, ಬಾ ಇಲ್ಲಿ…’ ಎಂದು ಕರೆದು, ಇನ್ಮೆàಲೆ ನನ್‌ ಜತೇಲೇ ಇರ್ತೀಯೇನಾ? ಎಲೆಕ್ಷನ್‌ ಮುಗಿಯೋಗಂಟ ಇರಕ್ಕಾತದ್ಲಾ?’ ಎಂದು ಕೇಳಿದರು. ಆ ಹುಡುಗ ಖುಷಿಯಿಂದ ಒಪ್ಪಿಕೊಂಡ. ಆನಂತರದಲ್ಲಿ ಅಂಬರೀಷರ ಜೊತೆಜೊತೆಗೇ ಆ ಹುಡುಗನೂ ಓಡಾಡಿದ. ರಾಜಕಾರಣದ ಸೆಳೆತ, ಪೊಲಿಟೀಷಿಯನ್‌ಗೆ ಸಿಗುವ ಮರ್ಯಾದೆ, ಸಂಪರ್ಕಗಳು, ಗ್ಲಾಮರ್‌…ಇದೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದ ಮೇಲೆ, ಮುಂದೊಂದು ದಿನ ತಾನೂ ರಾಜಕಾರಣಿಯೇ ಆಗಬೇಕು ಎಂಬ ಆಸೆ ಆ ಹುಡುಗನ ಜೊತೆಯಾಯಿತು. ಅದನ್ನು ಆತ ಅಂಬರೀಷ್‌ಅವರಿಗೇ ಹೇಳಿಬಿಟ್ಟ. 

“ಥೂ ನನ್‌ ಮಗ್ನೆ, ನಿಂಗ್ಯಾಕ್ಲ ಬಂತು ಇಂಥಾ ಕೆಟ್‌ ಬುದ್ಧಿ? ರಾಜಕೀಯ ಮಾಡ್ಕಂಡು ನೆಮಿಯಾಗಿ ಬದುಕೋಕೆ ಆಗಲ್ಲ ಕಣೋ’ ಎಂದು ರೇಗಿದರು ಅಂಬಿ. ಅಷ್ಟಕ್ಕೇ ಸುಮ್ಮನಾಗದೇ, ಚುನಾವಣೆ ಮುಗಿಯುತ್ತಿದ್ದಂತೆಯೇ, ತಮಗಿದ್ದ ಸಂಪರ್ಕಗಳನ್ನು ಬಳಸಿಕೊಂಡು, ಆ ಹುಡುಗನಿಗೆ ಕೇಂದ್ರ ಸರ್ಕಾರದ ಕೆಲಸ ಕೊಡಿಸಿದರು. “ಲೋ ನನ್‌ ಮಗ್ನೆ, ನಿಂಗೆ ಕೆಲ್ಸ ಕೊಡಿದೀನಿ. ಚೆನ್ನಾಗಿ ಕೆಲ್ಸ ಮಾಡು. ಒಳ್ಳೇ ಹೆಸರ್‌ ತಗೋ. ನಾಕ್‌ ಜನಕ್‌ ಉಪಾರ ಮಾಡು. ಇನ್ನೊಂದ್ಸಲ ರಾಜಿRàಯ ಅಂತೇನರಾ ಬಂದ್ರೆ…ಒದೀತೀನಿ’ ಎಂದು ನಕ್ಕರು. 

Advertisement

ನಾಲ್ಕು ವರ್ಷದ ನಂತರ, ಆ ಹುಡುಗ ಮನೆ ಕಟ್ಟಿಸಿದ. “ಅಣ್ಣಾ, ಹೊಸ ಮನೆ ಕಟ್ಟಿಸಿದೀನಿ ಗೃಹಪ್ರವೇಶಕ್ಕೆ ನೀವು ಬರಲೇಬೇಕು…’ ಅಂದ. ಪ್ರೀತಿಯ ಹುಡುಗನಲ್ಲವೇ? ಅಂಬಿ ಸಿದ್ಧರಾಗಿಬಿಟ್ಟರು. ಗೃಹಪ್ರವೇಶಕ್ಕೆ ಬಂದವರು, ಹೊಸ ಮನೆಯನ್ನು ನೋಡಿ-“ಲೋ ಲೋ…ಲೋ..ಇದೇನ ನಿನ್‌ ಕೆಲ್ಸ?’ ಎಂದು ಉದ್ಗರಿಸಿದರು. ಕಾರಣವಿಷ್ಟೆ, ಆ ಹುಡುಗ, ತನ್ನ ಮನೆಗೆ “ಅಂಬಿ ನಿಲಯ’ ಎಂದು ಹೆಸರಿಟ್ಟಿದ್ದ. “ಅಹಹಹಹ, ಅಂಬಿ ನಿಲಯ ಅಂತೆ ಅಂಬಿ ನಿಲಯ…ನನ್ಮಗ್ನೆ, ಮನೇಗೆ ಅಪ್ಪ-ಅಮ್ಮನ ಹೆಸರು ಇಡಬೇಕು ಕನಾ’ ಅಂದರು ಅಂಬರೀಶ್‌. ತಕ್ಷಣವೇ ಆ ಹುಡುಗ “ನೀವು ನಂಗೆ ಅಪ್ಪ ಅಮ್ಮನ ಥರಾನೇ ಅಲ್ವೇನಣ್ಣಾ…’ ಎಂದುಬಿಟ್ಟ. “ಹೂಂ, ಏನೇಳದಪ್ಪಾ ನಿನ್ನ ಪ್ರೀತಿಗೆ? ಚೆನ್ನಾಗಿರ್ಲ ಮಗ…’ ಎಂದು ಹೇಳಿ ಕಣ್ತುಂಬಿಸಿಕೊಂಡಿದ್ದರು ಅಂಬರೀಷ್‌. ಬೆಂಗಳೂರಿನಲ್ಲಿ ಈಗಲೂ ಆ “ಅಂಬಿ ನಿಲಯ’ವಿದೆ, ಅಂಬಿ ಸಲಹೆಯಂತೆ ಅಚ್ಚುಕಟ್ಟಾಗಿ ಕೆಲಸ ನಡೆಸಿಕೊಂಡು ಹೋಗುತ್ತಿರುವ ಆ ಹುಡುಗನಿದ್ದಾನೆ. ಅವನನ್ನು ಹೆಮ್ಮೆ ಮತ್ತು ಮೆಚ್ಚುಗೆಯಿಂದ “ಲೋ ನನ್ಮಗ್ನೆ…’ ಎಂದು ಕರೆಯುತ್ತಿದ್ದ ಅಂಬರೀಷ್‌, ಸಣ್ಣದೊಂದು ಸುಳಿವನ್ನೂ ನೀಡದೆ ಹೋಗಿಬಿಟ್ಟಿದ್ದಾರೆ.

ವಿಚಿತ್ರ ಆದರೂ ಸತ್ಯ ಎಂಬಂಥ ಮಾತೊಂದನ್ನು, ಇಲ್ಲಿ ಹೇಳಿಬಿಡಬೇಕು. ಒರಟು-ಉಡಾಫೆ ಮಾತು ಅಂಬರೀಷ್‌ ಅವರ ಟ್ರಂಪ್‌ ಕಾರ್ಡ್‌. “ಥೂ ನನ್‌ ಮಗ್ನೆ…’ ಎಂದೋ, “ಏನಾÉ ಬಡ್ಡೆತ್ತದ್ದೆ…’ ಎಂದೋ ಮಾತಾಡದಿದ್ದರೆ, ಅಂಬರೀಷ್‌ ಅವರಿಗೆ ಮೂಡ್‌ ಚೆನ್ನಾಗಿಲ್ಲ ಎಂದೇ  ಅಭಿಮಾನಿಗಳು ನಂಬಿದ್ದರು. ಇನ್ನೊಂದು ಕಡೆಯಲ್ಲಿ, ಕೇಂದ್ರ ಸಚಿವ ಅನ್ನಿಸಿಕೊಂಡ ಮೇಲೂ ಒರಟಾಗಿ ಮಾತನಾಡುವುದನ್ನು ಅಂಬರೀಷ್‌ ಬಿಡಲಿಲ್ಲ ಎಂಬ ದೂರುಗಳೂ ಕೇಳಿಬಂದವು. ಈ ದೂರು ಕಡೆಗೆ ಅಂಬರೀಷ್‌ರ ಆಪ್ತಮಿತ್ರ ವಿಷ್ಣುವರ್ಧನ್‌ ಬಳಿಗೂ ಹೋಯಿತು. “ನೀನೀಗ ಜನನಾಯಕ ಕಣಮ್ಮಾ, ಸಾಫ್ಟ್ ಆಗಿ ಮಾತಾಡಲು ಅಭ್ಯಾಸ ಮಾಡ್ಕೊà. ಆಗ ಜನ ಎಷ್ಟು ಚೆನ್ನಾಗಿ ರಿಸೀವ್‌ ಮಾಡ್ತಾರೆ ಅನ್ನೋದನ್ನ ನೀನೇ ನೋಡುವೆಯಂತೆ…’ ಎಂದು ಸಲಹೆ ನೀಡಿದರು ವಿಷ್ಣು. “ಸರಿಬಿಡು. ಹಂಗೇ ಮಾಡ್ತೀನಿ. ನಿನ್ನ ಮಾತಿಗೆ “ನೋ’ ಅನ್ನೋಕ್ಕಾಗುತ್ತಾ?’ ಎಂದರು ಅಂಬಿ. ಇದಾಗಿ ಕೆಲವೇ ದಿನಗಳಿಗೆ, ಅಭಿಮಾನಿಯೊಬ್ಬರಿಂದ ಕರೆಬಂತು. ಆಪ್ತಮಿತ್ರ ವಿಷ್ಣುವಿನ ಸಮ್ಮುಖದಲ್ಲೇ- “ಸಾಫ್ಟ್ ಆಗಿ ಮಾತಾಡ್ತೀನಿ’ ಎಂದು ಪಿಸುಗುಟ್ಟಿ, ಫೋನ್‌ನ ಮೈಕ್‌ ಆನ್‌ ಮಾಡಿದ ಅಂಬರೀಷ್‌: “ನಮಸ್ಕಾರ ಸಾರ್‌, ಹೇಳಿ…’ ಅಂದರು.

ಅಭಿಮಾನಿ:”ಸ್ವಲ್ಪ ಅಣ್ಣಂಗೆ ಫೋನ್‌ ಕೊಡಿ, ಒಂದ್‌ ನಿಮ ಮಾತಾಡ್ಬೇಕು…’
ಅಂಬಿ: “ನಾನೇ ಅಂಬರೀಷ್‌ ಮಾತಾಡ್ತಿರೋದು. ಹೇಳಿ…’
ಅಭಿಮಾನಿ: “ಅಣಾ..ಏನಣಾ..ವಾಯ್ಸ ಕೆಟ್ಟೋದಂಗದೆ, ನೀವೇ ಮಾತಾಡದಾ ಅಣ್ಣಾ…’
ಅಂಬಿ: “ಹಾದು ಸಾರ್‌. ನಾನೇ ಹೇಳಿ, ಏನ್ಸಮಾಚಾರ?’
ಅಭಿಮಾನಿ: “ಅಂಬ್ರಿàಷಣ್ಣ ಬೇಕು ಅಂದ್ರೆ ಇನ್ಯಾರೋ ಮಾತಾಡ್ತಾ ಇದಾರೆ. ಅಣ್ಣಂಗೆ ಏನಾದ್ರೂ ಹೆಚ್ಚು ಕಮ್ಮಿ ಆಯ್ತಾ?’
ಅಂಬಿ(ಸಿಟ್ಟಿನಿಂದ): “ಲೋ ನನ್‌ ಮಗ್ನೆ, ನಂಗ್ಯಾಕ್ಲ ಏನಾದ್ರೂ ಆದದು? ಗಟ್ಟಿಯಾಗಿ ಇವ್ನಿ ಕಲಾ. ಫೋನ್‌ ಮಡುಗ್ಲಾ ಬಡ್ಡೆತ್ತದ್ದೆ…’
ಅಭಿಮಾನಿ: “ಹಾ..ಅಂಬ್ರಿàಷಣ್ಣನೇ ಮಾತಾಡ್ತಿರೋದು ಅಂತ ಗ್ಯಾರಂಟಿ ಆಯ್ತು. ಕಡೆಗೂ ಸಿಕ್ಕಿದ್ಯಲ್ಲಣಾ..ಥ್ಯಾಂಕ್ಸು ಅಣಾ…’
ಈ ಪ್ರಸಂಗವನ್ನು, ಸ್ವತಃ ವಿಷ್ಣುವರ್ಧನ್‌ ವಿವರವಾಗಿ ಹೇಳಿ ನಕ್ಕಿದ್ದರು. ಅವತ್ತೇ ಲಾಸ್ಟ್‌. ಆಮೇಲಿಂದ ಅಂಬಿಯನ್ನು ತಿದ್ದುವ ಗೋಜಿಗೆ ನಾವ್ಯಾರೂ ಹೋಗಲಿಲ್ಲ ಎಂದೂ ಸೇರಿಸಿದ್ದರು. 

ಅಡ್ಮಿಷನ್‌ ಫೀ ಪಾವತಿಸಿಲ್ಲ ಎಂಬ ಕಾರಣಕ್ಕೆ, ವಿದ್ಯಾರ್ಥಿನಿಯೊಬ್ಬಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಬಡವರ ಮನೆಯ ಆ ಹುಡುಗಿ, ದಿಕ್ಕು ತೋಚದೆ ಜೆ.ಪಿ. ನಗರದ, ಅಂಬರೀಷ್‌ ಮನೆಗೆ ಹೋದಳು. ಆ ಕ್ಷಣಕ್ಕೆ ಶುದ್ಧ ಮಂಡ್ಯದ ಗೌಡರ ಭಾಷೆಯಲ್ಲಿ ಅಂಬರೀಷ್‌ “ಬಾವ್ವ ಇಲ್ಲಿ, ಏನಾಗ್ಬೇಕು’ ಎಂದು ಕೇಳಿದರು. ಎಲ್ಲ ವಿಷಯ ತಿಳಿದು, ನೇರವಾಗಿ ಆ ಕಾಲೇಜಿನ ಮುಖ್ಯಸ್ಥರಿಗೇ ಫೋನ್‌ ಮಾಡಿ-“ನಮ್‌ ಕಡೆ ಹುಡ್ಗಿ ಕಣಯ್ನಾ ಇವ್ಳು, ದುಸ್ರಾ ಮಾತಾಡೆª ನಾಳೆ ಅಡ್ಮಿಷನ್‌ ಮಾಡ್ಕೊ. ಫೀಸ್‌ ಅಂತ ಏನ್‌ ಕೊಡ್ಬೇಕೋ ಅದನ್ನ ನಾನು ಕೊಡ್ತೀನಿ.. ‘ ಎಂದಿದ್ದರು. ಮತ್ತೆ ಆ ಹುಡುಗಿಯತ್ತ ತಿರುಗಿ- “ಫೀಸೆಲ್ಲ ನಾನು ಕೊಡ್ತೀನಿ. ಚೆನ್ನಾಗಿ ಓದಿ ಕೆಲಸಕ್‌ ಸೇರ್ಕೋ…’ ಎಂದಿದ್ದರು. 

ಅನುಮಾನವೇ ಬೇಡ. “ಹೃದಯವಂತ’ ಎಂಬ ಮಾತಿಗೆ ತಕ್ಕಂತೆಯೇ ಬಾಳಿದವರು ಅಂಬರೀಷ್‌. ಉಡಾಫೆಯ ಮಾತಿನಿಂದ ಅಸಹನೆಯನ್ನೂ, ಗಡಸು ಮಾತಿನಿಂದ ಒಂದಿಷ್ಟು ಭಯವನ್ನೂ, ಪರಿಶುದ್ಧ ನಗುವಿನಿಂದ ಆತ್ಮೀಯತೆಯನ್ನೂ, ಭಾವುಕ ಮಾತುಗಳಿಂದ ಅಂತಃಕರಣವನ್ನೂ ಉಂಟುಮಾಡುತ್ತಿದ್ದ ಈತ ಎಲ್ಲ ಅರ್ಥದಲ್ಲೂ ಬೆಳ್ಳಿತೆರೆಯ ಭಾವಗೀತೆ…

– ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next