ಬೆಂಗಳೂರು: ಮಾಜಿ ಸಚಿವ, ಹಿರಿಯ ನಟ ಅಂಬರೀಷ್(66ವರ್ಷ) ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವಿಧಿ ವಿಧಾನಗಳು ಶ್ರೀರಂಗಪಟ್ಟಣದ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಆರಂಭಗೊಂಡಿದೆ.
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಪಾರ್ಥಿವ ಶರೀರದ ಅಂತ್ಯಕ್ರಿಯೆಗಾಗಿ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಅಗ್ನಿಸ್ಪರ್ಶಕ್ಕಾಗಿ 500ಕೆಜಿ ಗಂಧದ ತುಂಡುಗಳು, ಕರ್ಪೂರ, ಒಂದು ಚೀಲ ಬೆರಣಿ, ಬೆಣ್ಣೆ, 30ಕೆಜಿ. ತುಪ್ಪ, ಗಂಧದ ಕಡ್ಡಿಯನ್ನು ಬಳಸಲಾಗುತ್ತಿದೆ.
ಒಕ್ಕಲಿಗ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ ಅಂತ್ಯಕ್ರಿಯೆ ನಡೆಯಲಿದೆ.ಅಂಬಿ ಆತ್ಮಕ್ಕೆ ಶಾಂತಿ ಕೋರಲು ಶಾಂತಿ ಮಂತ್ರ ಪಠಣ ನಡೆಸಿದ ಬಳಿಕ ಪಂಚಗವ್ಯ ಪ್ರೋಕ್ಷಣೆ. ನಂತರ ಔರ್ಧ ದೈಹಿಕ ಕ್ರಿಯೆಯನ್ನು ನಡೆಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಪುತ್ರ ಅಭಿಷೇಕ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ.
ಸಾರ್ವಜನಿಕರ ವೀಕ್ಷಣೆಗೆ ಎಲ್ ಇಡಿ ಪರದೆ ಬಳಕೆ:
ಅಂತ್ಯಸಂಸ್ಕಾರದ ವೀಕ್ಷಣೆಗಾಗಿ ವಿಐಪಿ, ಸಾರ್ವಜನಿಕರು ಸೇರಿ 5 ಆಸನ ವ್ಯವಸ್ಥೆ ಮಾಡಲಾಗಿದೆ. ಕುಟುಂಬ ವರ್ಗದವರಿಗೆ ಹಾಗೂ ರಾಜಕೀಯ ನಾಯಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ. ಅಲ್ಲದೇ ಗಣ್ಯರಿಗೆ ಪ್ರತ್ಯೇಕ ಒಂದು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.
ಬಿ.ಸರೋಜಾದೇವಿ, ಜಯಂತಿ, ಶಿವರಾಜ್ ಕುಮಾರ್, ಯಶ್, ದರ್ಶನ್, ರವಿಚಂದ್ರನ್, ಸುಮನ್, ಚಿರಂಜೀವಿ, ರಾಕ್ ಲೈನ್ ವೆಂಕಟೇಶ್, ಪುನೀತ್ ರಾಜ್ ಕುಮಾರ್, ತೆಲುಗು ನಟರಾದ ಮೋಹನ್ ಬಾಬು ಮತ್ತು ಕುಟುಂಬಸ್ಥರು,ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್.ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್, ಸಚಿವರಾದ ಡಿಕೆ ಶಿವಕುಮಾರ್, ಡಿಸಿ ತಮ್ಮಣ್ಣ, ಎಚ್.ಡಿ.ರೇವಣ್ಣ, ಶಾಸಕ ಯತೀಂದ್ರ, ಆರ್.ಅಶೋಕ್, ಕುಮಾರ್ ಬಂಗಾರಪ್ಪ, ಆದಿಚುಂಚನಗಿರಿ ಪೀಠಾಧಿಪತಿ ಶ್ರೀನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯಾತೀಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಂತ್ಯಕ್ರಿಯೆಗೂ ಮುನ್ನ ಕಂಠೀರವ ಕ್ರೀಡಾಂಗಣದಿಂದ ಸುಮಾರು 13 ಕಿಲೋ ಮೀಟರ್ ಮೆರವಣಿಗೆ ಮೂಲಕ ಸಾಗಿ ಕಂಠೀರವ ಸ್ಟುಡಿಯೋಕ್ಕೆ ಅಂಬರೀಷ್ ಅವರ ಪಾರ್ಥಿವ ಶರೀರದ ಬರಲಿದ್ದು, ಈಗಾಗಲೇ ಪುಷ್ಪಾಲಂಕೃತ ಅಂತಿಮಯಾತ್ರೆಯ ವಾಹನ ಯಶವಂತಪುರ, ಗೋರಗುಂಟೆ ಪಾಳ್ಯ ದಾಟಿರುವುದಾಗಿ ವರದಿ ತಿಳಿಸಿದೆ.