ಸಾಹೋ ಪಾವ್ಲೋ(ಬ್ರೆಜಿಲ್):ಉತ್ತರ ಬ್ರೆಜಿಲ್ ಪ್ರದೇಶದಲ್ಲಿ ಹರಡಿಕೊಂಡಿರುವ ಮಳೆಕಾಡು ಅಮೆಜಾನ್ ನಲ್ಲಿದ್ದ ಅತೀ ಎತ್ತರದ ಮರ ಕಾಡ್ಗಿಚ್ಚಿನಿಂದ ಸುರಕ್ಷಿತವಾಗಿ ಉಳಿದುಕೊಂಡಿದೆ ಎಂದು ಬ್ರೆಜಿಲ್ ಪರಿಸರವಾದಿಗಳು ಮತ್ತು ಬ್ರಿಟಿಷ್ ವಿಜ್ಞಾನಿಗಳು ತಿಳಿಸಿದ್ದಾರೆ.
ಮಳೆಕಾಡು ಅಮೆಜಾನ್ ನಲ್ಲಿ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳು, ಸರಿಸೃಪಗಳು ಹಾಗೂ ದೊಡ್ಡ ಪ್ರಮಾಣದ ಅಪರೂಪದ ಪ್ರಬೇಧದ ಮರಗಳಿವೆ. ಅದರಲ್ಲಿ 288 ಅಡಿ ಎತ್ತರದ ಡಿನಿಝಿಯಾ ಪ್ರಬೇಧದ ಮರ ಬೆಂಕಿಯಿಂದ ಸುಡದೆ ಸುರಕ್ಷಿತವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಪರೂಪದ ತಳಿಯ ಡಿನಿಝಿಯಾ ಜಾತಿಯ ಮರಗಳು ಸಾಮಾನ್ಯವಾಗಿ 60 ಅಡಿ ಎತ್ತರ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಹುಡುಕಾಟದ ಮೂಲಕ ನಾವು ಇದೀಗ ಅಮೆಜಾನ್ ಕಾಡಿನಲ್ಲಿ ಇಂತಹ ಅಪರೂಪದ ತಳಿಯ ಮರಗಳನ್ನು ಪತ್ತೆಹಚ್ಚಿದ್ದೇವೆ. ಅಲ್ಲದೇ ಇದೀಗ ಅಂತಹ ಬೃಹತ್ ಎತ್ತರದ ಮರಗಳನ್ನು ರಕ್ಷಿಸಬೇಕಾಗಿದೆ ಎಂದು ಸಂಶೋಧನಾ ಸಂಚಾಲಕ ಎರಿಕ್ ಬಾಸ್ಟೋಸ್ ತಿಳಿಸಿದ್ದಾರೆ.
ಶೇ.20ರಷ್ಟು ಆಕ್ಸಿಜನ್ ಉತ್ಪತ್ತಿಗೆ ಕಾರಣವಾಗಿರುವ ಮಳೆಕಾಡು ಅಮೆಜಾನ್ ನಲ್ಲಿ ಇತ್ತೀಚೆಗೆ ಕಾಡ್ಗಿಚ್ಚಿಗೆ ತತ್ತರಿಸಿಹೋಗಿತ್ತು. ಪರಿಸರವಾದಿಗಳು, ಹವಾಮಾನ ತಜ್ಞರು ಭಾರೀ ಆತಂಕ ವ್ಯಕ್ತಪಡಿಸಿದ್ದರು.