ಬೆಂಗಳೂರು: ಭಾಷೆ ವಿಚಾರದಲ್ಲಿ ಕನ್ನಡವನ್ನು “ಗೂಗಲ್’ ಅವಮಾನಿಸಿದ ಬೆನ್ನಲ್ಲೇ ಅಮೆಜಾನ್ ಕೂಡ ಅಂಥದ್ದೇ ಒಂದು ಹೆಜ್ಜೆಯಿಟ್ಟಿದೆ. ಅದು ಒಳ ಉಡುಪುಗಳ ಮೇಲೆ ಕನ್ನಡದ ಧ್ವಜದ ಬಣ್ಣ ಮತ್ತು ರಾಜ್ಯ ಸರಕಾರದ ಲಾಂಛನವನ್ನು ಬಳಸಿ ಕನ್ನಡಿಗರ ಭಾವನೆ, ಅಸ್ಮಿತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಅವರು, ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಒಳ ಉಡುಪುಗಳ ಮೇಲೆ ಅಖಂಡ ಕನ್ನಡ ಮನಸ್ಸುಗಳು ಗೌರವಿಸುವ ರಾಜ್ಯದ ಧ್ವಜ ಮತ್ತು ಲಾಂಛನವನ್ನು ಬಳಸಿ ಕನ್ನಡಿಗರಿಗೆ ನೋವುಂಟು ಮಾಡಲಾಗಿದೆ. ಹಾಗಾಗಿ ಕೆನಡಾ ಮೂಲದ ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ಜಾಗೃತಿ ವಿಡಿಯೋದಲ್ಲಿ ಸ್ಯಾಂಡಲ್ ವುಡ್ ನಟ ಪುನೀತ್
ಅಮೆಜಾನ್ ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ಒಳಉಡುಪುಗಳ ಮೇಲೆ ರಾಜ್ಯದ ಲಾಂಛನವನ್ನು ಬಳಸಲು ಆದೇಶಿಸಿದ ಆಡಳಿತ ಮಂಡಳಿ, ಅಧಿಕಾರಿ ಮತ್ತು ನೌಕರರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಮೆಜಾನ್ ವಿರುದ್ಧ ಟ್ವಿಟ್ಟರ್ ಅಭಿಯಾನವನ್ನು ಕೈಗೊಳ್ಳಲಾಗುವುದು. ಕ್ಷಮೆ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕನ್ನಡಿಗರು ಅಮೆಜಾನ್‌ನೊಂದಿಗೆ ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.