ವಿಸ್ತಾರವಾದ ಭೂಮಿಯಲ್ಲಿ ಹರಡಿಕೊಂಡಿರುವುದು ಬರೀ ಮರಳೆ. ಈ ಮರಳಿನಲ್ಲಿ ಏನು ಮಾಡಲು ಸಾಧ್ಯ ಎಂದು ಅಂದುಕೊಳ್ಳುವವರಿಗೆ ಅಚ್ಚರಿಯಾಗಿ ಕಾಣುವುದು ದುಬೈನ ನಗರಗಳು. ಮರಳು ಭೂಮಿಯಲ್ಲೇ ಗಗನಚುಂಬಿ ಕಟ್ಟಡಗಳು ಇಲ್ಲಿ ತಲೆಯೆತ್ತಿವೆ. ಈ ಕಟ್ಟಡಗಳು ತಮ್ಮ ವಿನ್ಯಾಸಕ್ಕೆ ಹೆಸರುವಾಸಿ. ಎಲ್ಲರೂ ಹುಬ್ಬೇರಿಸಿ ನೋಡುವಂತಹ ವಿಭಿನ್ನ, ವಿಶೇಷ ವಿನ್ಯಾಸಗಳನ್ನು ಹೊಂದಿವೆ. ಅಂತಹದ್ದೇ ಅಚ್ಚರಿಯ ವಿನ್ಯಾಸ ದುಬೈನ ಮಾನವ ನಿರ್ಮಿತ ದ್ವೀಪ ಪಾಮ್ ಜುಮೇರಾ.
ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರ ದುಬೈ ಗಿನ್ನೆಸ್ ದಾಖಲೆಗಳ ಸರಮಾಲೆಯನ್ನೇ ಧರಿಸಿರುವ ನಗರ. ದುಬೈ ಎಂದರೆ ತನ್ನದೇ ವಿಶಿಷ್ಟ ವಾಸ್ತುಶಿಲ್ಪಗಳಿಗೆ ಹೆಸರುವಾಸಿ. ಗಗನ ಚುಂಬಿ ಕಟ್ಟಡ ಸಮೂಹ, ವಿಶಾಲ ಸ್ವತ್ಛ ಕಡಲತೀರ, ಬೃಹತ್ ಬಂದರು, ನಯನ ಮನೋಹರ ಉದ್ಯಾನವನಗಳು. ಸಾಂಪ್ರದಾಯಿಕ ವಾಸ್ತು ಶಿಲ್ಪಗಳ ಶ್ರೀಮಂತಿಕೆಯಿಂದ ಕೂಡಿರುವ ನಗರದಲ್ಲಿ 250 ವಿವಿಧ ದೇಶದ ವಾಸಿಗಳು ಅನಿವಾಸಿ ಪ್ರಜೆಗಳಾಗಿ ನೆಲೆಸಿದ್ದಾರೆ.
ಸಾಹಸಿ ಪ್ರವೃತ್ತಿಯ ದುಬೈ ಹಲವು ದಾಖಲೆಗಳನ್ನು ತನ್ನೊಡಲಿಗೆ ಸೇರಿಸಿಕೊಂಡಿದ್ದು ಇನ್ನಷ್ಟು ದಾಖಲೆಗಳನ್ನು ಮಾಡುವ ತವಕದಲ್ಲಿದೆ. ದುಬೈಗೆ ಹೋಗುವವರಿಗೆ ಇಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ಅದರಲ್ಲೂ ಕೆಲವು ತಾಣಗಳಿಗೆ ಒಮ್ಮೆಯಾದರೂ ಹಾಜರಿ ಹಾಕಲೇಬೇಕು. ಅದರಲ್ಲೂ ಇಲ್ಲಿನ ಆಡಳಿತ ವ್ಯವಸ್ಥೆ ಮಾನವ ನಿರ್ಮಿತ ದ್ವೀಪ ಸಮೂಹವನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿತ್ತು.
ಸುಮಾರು 520 ಕಿ.ಮೀ. ಉದ್ದದ ಅರೆಬಿಯನ್ ಗಲ್ಫ್ ಕಡಲ ತೀರದಲ್ಲಿ ಸಮುದ್ರದ ನಡುವಿನಲ್ಲಿ ಪಾಮ್ ಜುಮೇರಾ ಎನ್ನುವ ದ್ವೀಪವನ್ನು ನಿರ್ಮಿಸಿದೆ. 2001ರಲ್ಲಿ ಆರಂಭವಾದ ಇದರ ನಿರ್ಮಾಣ 2006ರಲ್ಲಿ ಪೂರ್ಣಗೊಂಡಿತ್ತು. ಈ ದ್ವೀಪವನ್ನು ಕಂಡರೆ ಇದು ಮಾನವ ನಿರ್ಮಿತವೇ ಎಂದು ಉದ್ಘಾರಿಸಬೇಕಾಗುತ್ತದೆ. ಅಷ್ಟು ನೈಪುಣ್ಯತೆಯಿಂದ ನಿಸರ್ಗ ನಿರ್ಮಿತವಾದಂತೆ ಇದನ್ನು ಕಟ್ಟಲಾಗಿದೆ. ದುಬೈನ ಪ್ರಸಿದ್ಧ ನಕೀಲ್ ಕಂಪೆನಿಯ ವಿನ್ಯಾಸ ಹಾಗೂ ಡಚ್ ಕಂಪೆನಿಗಳಾದ ವ್ಯಾನ್ ಊಡ್‌ರ್ ಮತ್ತು ಬಾಸ್ಕೈಲ್ ಕಂಪೆನಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಈ ದ್ವೀಪದ ವಿನ್ಯಾಸವೇ ವಿಶೇಷವಾದದ್ದು. ಖರ್ಜೂರದ ಆಕೃತಿಯ ಕಲಾಕೃತಿಯನ್ನು ಬೃಹತ್ ಶಿಲಾಬಂಡೆ ಕಲ್ಲುಗಳನ್ನು ಹಾಗೂ ಮರಳುಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.
ಸ್ಟೀಲ್ ಮತ್ತು ಸಿಮೆಂಟ್ ಕಾಂಕ್ರೀಟ್‌ನ್ನು ಇಲ್ಲಿ ಬಳಸಲಾಗಿಲ್ಲ. ಖರ್ಜೂರದ ಆಕೃತಿಯಲ್ಲಿರುವ ಕಾರಣ ಇದಕ್ಕೆ ಪಾಮ್ ದ್ವೀಪ ಎಂದು ಹೆಸರಿಸಲಾಗಿದೆ. ಸುಮಾರು 1380 ಎಕ್ರೆಯಷ್ಟು ಜಾಗದಲ್ಲಿ ಈ ದ್ವೀಪವಿದೆ. ಪಾಮ್ ಮರದ ಆಕೃತಿಯ ವಿನ್ಯಾಸದ ಸುತ್ತಳತೆ ಹದಿನೇಳು ಕಿ.ಮೀ. ಉದ್ದವಿದ್ದು ಐದು ಕಿ.ಮೀ. ವ್ಯಾಸದಲ್ಲಿದೆ. ಅಂದರೆ ಆರುನೂರು ಫುಟ್‌ಬಾಲ್ ಮೈದಾನದಷ್ಟು ಇದೆ. 21ನೇ ಶತಮಾನದಲ್ಲಿ ಅತ್ಯಂತ ಹೆಚ್ಚು ಹಣ ವ್ಯಯಿಸಿರುವ ಯೋಜನೆ ಇದಾಗಿದೆ. ಮಾನವ ನಿರ್ಮಿತ ಪಾಮ್ ಜುಮೇರಾದಲ್ಲಿ 2009ರಲ್ಲಿ ಐನೂರು ಕುಟುಂಬಗಳು ಸ್ವಂತ ವಸತಿ ಬಂಗಲೆಯ ಮಾಲಕತ್ವವನ್ನು ಪಡೆದುಕೊಂಡರು. ಪ್ರಸ್ತುತ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ವಾಸವಾಗಿದ್ದಾರೆ.
ಕಡಲ ಮಧ್ಯಭಾದಲ್ಲಿ ನಿರ್ಮಾಣವಾಗಿರುವ ಖರ್ಜೂರ ಮರದ ಮೇಲ್ಭಾಗದ ಆಕೃತಿಯು ಕಡಲ ತೀರದ ಮುಖ್ಯ ಭೂಭಾಗಕ್ಕೆ ಮರದ ಬುಡ ಸಂಪರ್ಕ ಕಲ್ಪಿಸಿದೆ. ಪಾಮ್ ಜುಮೇರಾಕ್ಕೆ ತಲುಪಲು ಮುಖ್ಯ ರಸ್ಥೆಯಲ್ಲಿ ಚಲಿಸುವ ವಾಹನಗಳು ಮರದ ಬುಡದ ಭೂ ಭಾಗದ ಕೆಳಗಿನ ಸುರಂಗ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ದುಬೈನ ಹೃದಯ ಭಾಗದಿಂದ ಪಾಮ್ ಜುಮೇರಾಕ್ಕೆ ತಲುಪಲು ಮೋನೋ ರೈಲಿನ ವ್ಯವಸ್ಥೆಯಿದೆ. ನಗರದ ಮಧ್ಯಭಾಗದಲ್ಲಿ ಎತ್ತರವಾದ ಸೇತುವೆಯಲ್ಲಿ ಒಂದೇ ಹಳಿಗಳ ಮೇಲೆ ಚಲಿಸುವ ಈ ರೈಲು ಮಧ್ಯಪ್ರಾಚ್ಯಾದ ಪ್ರಥಮ ಮೋನೊ ರೈಲು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಎಪ್ಪತ್ತು ಕಿ.ಮೀ. ಉದ್ದದಲ್ಲಿ ಪ್ರತೀ ಹದಿನೈದು ಇಪ್ಪತ್ತು ನಿಮಿಷದ ಅಂತರದಲ್ಲಿ ಅಟ್ಲಾಂಟಿಸ್ ಹೊಟೇಲ್‌ನ ವರೆಗೆ ಹೋಗಿ ಹಿಂತಿರುಗುತ್ತದೆ. ಪ್ರತಿದಿನ ಈ ರೈಲು ಅಂದಾಜು ಮೂರು ಸಾವಿರದಷ್ಟು ಪ್ರಯಾಣಿಕರನ್ನು ಸಾಗಿಸುತ್ತದೆ.
ಪಾಮ್ ಜುಮೇರಾ ಅತ್ಯಂತ ವೈಭವಪೂರಿತ ಅಟಾಂಟಿಸ್ ಮತ್ತು ರಾಯಲ್ ಅಟ್ಲಾಂಟಿಸ್ ಹೊಟೇಲ್, ವಿಶ್ವದ ಅತೀ ದೊಡ್ಡ ಅಕ್ವೆಂಚರ್ ವಾಟರ್ ಪಾರ್ಕ್, ಜಲಚರಗಳ ಅಕ್ವೇರಿಯಂ, ದಿ ಪಾಯಿಂಟಿ, ಪಾಮ್ ಫೌಂಟೆನ್ ಶೋ, ಪಾಮ್ ಅಬ್ಸರ್ವೇಶನ್ ಡೆಕ್, ಡಾಲ್ಫಿನ್ ಶೋ, ಡಾಲ್ಫಿನ್‌ಗಳ ಜತೆಗೆ ಈಜಾಡುವ ವ್ಯವಸ್ಥೆ, ವಾಕಿಂಗ್ ಟ್ರ್ಯಾಕ್, ಪಾಮ್ ಜುಮೇರಾದ ಬಾನಂಗಳದಲ್ಲಿ ಹೆಲಿಕಾಪ್ಟರ್ ಯಾನ, ಬೋಟ್ ಟ್ರಿಪ್, ಹಲವಾರು ಈಜುಕೊಳಗಳನ್ನು ಒಳಗೊಂಡಿದೆ.
ವಿಶ್ವದ ಲಕ್ಷುರಿ ಬೀಚ್ ರೆಸಾರ್ಟ್‌ಗಳು, ಐಷಾರಾಮಿ ಆಹಾರ ಮತ್ತು ಪಾನೀಯಗಳನ್ನು ಸವಿಯಲು ಖಾಸಗಿ ಬೀಚ್ ವ್ಯವಸ್ಥೆ, ಸೂರ್ಯೋದಯ, ಸೂರ್ಯಾಸ್ಥಮ ಸುಂದರ ದೃಶ್ಯ ಸೊಬಗನ್ನು ಸವಿಯಲು ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ದುಬೈನ ಶ್ರೀಮಂತ ತಾಣಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.
*ಬಿ. ಕೆ. ಗಣೇಶ್ ರೈ, ದುಬೈ