ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಫೆ.13ರಿಂದ 18ರವರೆ ರವೀಂದ್ರ ಕಲಾಕ್ಷೇತ್ರ ಮತ್ತು ಫೆ.12ರಿಂದ 18ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ “ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ’ ವಿಷಯ ಕುರಿತ ಹವ್ಯಾಸಿ ರಂಗಭೂಮಿ ನಾಟಕೋತ್ಸವ ನಡೆಯಲಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ್, ನಾಟಕೋತ್ಸವದಲ್ಲಿ 16 ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ.13ರಂದು ಸಂಜೆ 5.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಇಲಾಖೆ ಸಂಸದೀಯ ಕಾರ್ಯದರ್ಶಿ ಶಕುಂತಲಾಶೆಟ್ಟಿ, ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಪಾಲ್ಗೊಳ್ಳುವರು. ಶಾಸಕ ಆರ್.ವಿ.ದೇವರಾಜ್ ಅಧ್ಯಕ್ಷತೆ ವಹಿಸುವರು ಎಂದರು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ “ಹವ್ಯಾಸಿ ವೃತ್ತಿರಂಗಭೂಮಿ ಪ್ರೋತ್ಸಾಹ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ’ ಕುರಿತು 7 ಸದಸ್ಯರನ್ನೊಳಗೊಂಡ ನಾಟಕ ರಚನೆ ಸಲಹಾ ಸಮಿತಿ ರಚಿಸಲಾಗಿತ್ತು.
ಸದರಿ ಸಮಿತಿ ತೀರ್ಮಾನದಂತೆ ನಾಟಕ ರಚನಾಕಾರರಿಗೆ ಕಮ್ಮಟ ಏರ್ಪಡಿಸಿ ಸಿದ್ಧಪಡಿಸಲಾದ ನಾಟಕಗಳನ್ನು ಆಯ್ಕೆ ಮಾಡಿಕೊಂಡಿದ್ದು, ಹವ್ಯಾಸಿ ತಂಡಗಳು ಸಿದ್ಧಪಡಿಸಿದ 19 ನಾಟಕಗಳ ಪೈಕಿ 16 ನಾಟಕಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಫೆ.12ರಿಂದ 18ರವರೆಗೆ ರವೀಂದ್ರ ಕಲಾಕ್ಷೇತ್ರ ಹಾಗೂ ಕಲಾಗ್ರಾಮದಲ್ಲಿ ನಾಟಕ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ್ ಇದ್ದರು.
ಪ್ರದರ್ಶನಗೊಳ್ಳಲಿರುವ ನಾಟಕಗಳು
ರವೀಂದ್ರ ಕಲಾಕ್ಷೇತ್ರದಲ್ಲಿ ಫೆ.13ರಂದು ಸಂಜೆ 6ಕ್ಕೆ ಅರುಂಧತಿ ಆಲಾಪ, ಸಂಜೆ 7.30- ಗಂಗೇಗೌರಿ ಪ್ರಸಂಗ. ಫೆ.14ರಂದು ಸಂಜೆ 6ಕ್ಕೆ ಬಣ್ಣಕ್ಕೆ ಬೆರಗಾದರೊ, ಸಂಜೆ 7.30- ಹಸಿರು ಭೂಮಿ ಹಾಡು. ಫೆ.15ರಂದು ಸಂಜೆ 7.30ಕ್ಕೆ ಪಂಚಾವರು, ಫೆ.16ರಂದು ಸಂಜೆ 6ಕ್ಕೆ ರಥಯಾತ್ರೆ, ಸಂಜೆ 7.30ಕ್ಕೆ ಗಣಿಗಣಮನ. ಫೆ.17ರಂದು ಸಂಜೆ 7ಕ್ಕೆ ಸ್ಯಾಪೋ ಒಂದು ನೀಲಾಗ್ನಿ ಹಾಗೂ ಫೆ.18ರಂದು ಸಂಜೆ 7ಕ್ಕೆ ರೂಪ ರೂಪಗಳನು ದಾಟಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಕಲಾಗ್ರಾಮದಲ್ಲಿ ಪ್ರತಿದಿನ ಸಂಜೆ 7ಕ್ಕೆ ನಾಟಕಗಳು ನಡೆಯಲಿದ್ದು, ಫೆ.12ರಂದು ಬಾರಿಗಿಡ, ಫೆ.13ಕ್ಕೆ ಪಲ್ಲಟ, ಫೆ.14ಕ್ಕೆ ಮೋದಾಳಿ, 15ಕ್ಕೆ ಕೇಳೇಸಖೀ ಚಂದ್ರಮುಖೀ, 16ಕ್ಕೆ ತೆರೆಯದ ಪುಟ, 17ಕ್ಕೆ ಆರದಿರಲಿ ಬೆಳಕು ಮತ್ತು 18ರಂದು ಬಹುಮಾನ ನಾಟಕಗಳು ಪ್ರದರ್ಶನಗೊಳ್ಳಲಿವೆ.