Advertisement

ಅಂಚೆಚೀಟಿ ಸಂಗ್ರಹ ಹವ್ಯಾಸದಿಂದ ಜ್ಞಾನ ಸಂಪಾದನೆ

12:29 PM Jan 20, 2017 | |

ದಾವಣಗೆರೆ: ಆರೋಗ್ಯಪೂರ್ಣ ಹವ್ಯಾಸ, ಸಕರಾತ್ಮಕ ಪ್ರವೃತ್ತಿಯಾಗಿರುವ ಅಂಚೆಚೀಟಿ, ಲಕೋಟೆ ಸಂಗ್ರಹ ಜ್ಞಾನ ಸಂಪಾದನೆಯ ಮತ್ತೂಂದು ಹೆಜ್ಜೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ವಿಶ್ಲೇಷಿಸಿದ್ದಾರೆ. ರೇಣುಕ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಂಚೆಚೀಟಿ ಪ್ರದರ್ಶನ ದಾವಣದುರ್ಗಪೆಕ್ಸ್‌- 2017 ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಅಂಚೆಚೀಟಿ, ಲಕೋಟೆ ಸಂಗ್ರಹಿಸುವ ಹವ್ಯಾಸ ಬೆಳೆಸಬೇಕು.ಈಗ ಸಂಗ್ರಹಿಸುವಂಥಹ ಅಂಚೆಚೀಟಿ, ಲಕೋಟೆ ಕೆಲ ವರ್ಷಗಳ ನಂತರ ಲಕ್ಷ, ಕೋಟಿಯಷ್ಟು ಮೌಲ್ಯ ಇರುತ್ತದೆ ಎಂದರು. ಆರೋಗ್ಯಪೂರ್ಣ ಹವ್ಯಾಸ, ಸಕರಾತ್ಮಕ ಪ್ರವೃತ್ತಿಯಾಗಿರುವ ಸಂಗ್ರಹ ಕಲೆ ಜ್ಞಾನ ಹೆಚ್ಚಿಸುತ್ತದೆ. ಸಮಾಜ ಕಟ್ಟುವಲ್ಲಿ ಸಕರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ಪ್ರತಿಯೊಬ್ಬರೂ ಇಂಥಹ ಕ್ರಿಯಾಶೀಲತೆಯ ಹವ್ಯಾಸ  ಬೆಳೆಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು. ಸತತ ಪರಿಶ್ರಮ, ಕಾಯಕದಿಂದ ಎಲ್ಲರೂ ಹಣ ಸಂಪಾದನೆಯಂತೆ ನಿರಂತರ ಪ್ರಯತ್ನದ ಮೂಲಕ ಜ್ಞಾನ ಸಂಪಾದನೆ ಸಾಧ್ಯ. ಕಷ್ಟಪಟ್ಟು ಸಂಪಾದಿಸಿದ ಹಣ ಕ್ರಮೇಣ ಕಳೆದು ಹೋಗಬಹುದು, ಇಲ್ಲವೇ ಯಾರಾದರೂ ದೋಚಿಕೊಂಡು ಹೋಗಬಹುದು. 

ಆದರೆ, ಜ್ಞಾನ ಯಾವುದೇ ಸಂದರ್ಭದಲ್ಲಿ ಕಳೆದುಹೋಗುವಂಥದ್ದು ಅಥವಾ ಯಾರಾದರೂ ದೋಚಿಕೊಂಡು ಹೋಗುವಂಥದ್ದಲ್ಲ. ಪ್ರತಿಯೊಬ್ಬರ ಬದುಕಿನ ಶಾಶ್ವತ ಆಸ್ತಿ, ದಿವ್ಯ ಮತ್ತು ಪ್ರಖರವಾಗಿರುವ ಜ್ಞಾನವನ್ನ ಅರಗಿಸಿಕೊಳ್ಳಬೇಕು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅನ್ವಯಿಸಿಕೊಳ್ಳಬೇಕು ಎಂದು ತಿಳಿಸಿದರು. 

ಸತತ ಪ್ರಯತ್ನದಿಂದ ಸಂಪಾದಿಸಿದಂಥಹ ಸುಜ್ಞಾನ ಇರುವಂಥದ್ದೇ ಒಳ್ಳೆಯ ಸಾಧನೆಗಾಗಿ ಎನ್ನುವಂತೆ ಅನೇಕರು ಒಳ್ಳೆಯ ಸಾಧನೆ ಮಾಡಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಪಡಿಸುವಂಥಹ ಶಕ್ತಿ ಸುಜ್ಞಾನಕ್ಕೆ ಇದೆ. ಶಾಲಾ ಬಾಲಕರಿಂದ ಹಿಡಿದು ವಯೋವೃದ್ಧರವರೆಗೆ ಸಾಧನೆ ಮಾಡಬಹುದು.

Advertisement

ಅಂಥಹ ಸಾಮಾಜಿಕ ಕಾಳಜಿ, ಕಳಕಳಿಯೊಂದಿಗೆ ಶ್ರೀ ಮಠ ಮಾಡಿರುವ ಸಾಧನೆಯ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ದಾವಣದುರ್ಗಪೆಕ್ಸ್‌ನಲ್ಲಿ ವಿಶೇಷ ಕೋಟೆ ಬಿಡುಗಡೆ ಮಾಡುವ ಮೂಲಕ ಗೌರವ  ಸಲ್ಲಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುರುಘಾ ಮಠ ಮಹಾನ್‌ ದಾರ್ಶನಿಕ ಬಸವಣ್ಣನವರಂತೆ ಅಸ್ಪೃಶ್ಯತೆ ನಿವಾರಣೆ, ಸಮ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ.

ಹಾದಿಬದಿಯ ಮಕ್ಕಳು, ಅಬಲೆಯರಿಗೆ ಆಶ್ರಯ  ನೀಡಲಾಗುತ್ತಿದೆ. ಸಂಗ್ರಹಾಲಯದ ಮೂಲಕಅನೇಕ ಐತಿಹಾಸಿಕ ಸ್ಮಾರಕ ಪ್ರದರ್ಶನಕ್ಕಿಡಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕರ್ನಾಟಕ ಕ್ಷೇತ್ರ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರಕುಮಾರ್‌, ರಾಷ್ಟ್ರದ ಸಾರ್ವ ಭೌಮತ್ವ ಪ್ರತಿನಿಧಿಸುವಂಥಹ ಅಂಚೆಚೀಟಿ ಸಂಗ್ರಹ ದೇಶ,

ವಿದೇಶ ಮಟ್ಟದ ಉತ್ತಮ ಸಾಧನೆ. ಜ್ಞಾನ ಸಂಪಾದನೆಗೆ ದಾರಿ ಮಾಡಿಕೊಡುವಂಥಹ ಅಂಚೆಚೀಟಿ, ಲಕೋಟೆ ಸಂಗ್ರಹ ಹವ್ಯಾಸ ಬೆಳೆಸುವ ಉದ್ದೇಶದಿಂದ ಇಲಾಖೆ ಈ ರೀತಿಯ ಪ್ರದರ್ಶನ ನಡೆಸುತ್ತಿದೆ ಎಂದರು. ದಕ್ಷಿಣ ಕರ್ನಾಟಕ ಕ್ಷೇತ್ರದ 14 ಜಿಲ್ಲೆಯಲ್ಲಿ ಪ್ರತಿ ವರ್ಷ, 3 ವರ್ಷಕ್ಕೊಮ್ಮೆ ರಾಜ್ಯ ಹಾಗೂ 4 ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಅಂಚೆಚೀಟಿ ಪ್ರದರ್ಶನ ನಡೆಸಲಾಗುತ್ತಿದೆ.

ಅಂಚೆಚೀಟಿ ಸಂಗ್ರಹ ಹವ್ಯಾಸ ಜೀವಂತವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಚಿತ್ರದುರ್ಗ ಜಿಲ್ಲಾ ಅಂಚೆ ಇಲಾಖೆ ಅಧೀಕ್ಷಕ ಓ. ಗೋವಿಂದಪ್ಪ ಇತರರು ಇದ್ದರು. 3 ದಿನ ನಡೆಯುವ ಪ್ರದರ್ಶನದಲ್ಲಿ 20 ಸಾವಿರ ಚೀಟಿ, ಲಕೋಟೆ ಪ್ರದರ್ಶಿಸಲ್ಪಡುತ್ತಿವೆ.  

Advertisement

Udayavani is now on Telegram. Click here to join our channel and stay updated with the latest news.

Next