ಶ್ರೀನಗರ: ಅಮರನಾಥ ಯಾತ್ರೆ ಮೂರು ವರ್ಷಗಳ ಬಳಿಕ ಬುಧವಾರ ಶುರು ವಾಯಿತು. ಶ್ರೀನಗರದಿಂದ 4,890 ಮಂದಿ ಇರುವ ಯಾತ್ರಾರ್ಥಿಗಳ ಮೊದಲ ತಂಡದ ಪ್ರಯಾಣಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹಸುರು ಬಾವುಟ ಬೀಸುವ ಮೂಲಕ ಚಾಲನೆ ನೀಡಿದ್ದಾರೆ.
ಬುಧವಾರ ಬೆಳಗಿನ ಜಾವ 4 ಗಂಟೆಗೆ ದಕ್ಷಿಣ ಕಾಶ್ಮೀರದ ಬೇಸ್‌ಕ್ಯಾಂಪ್ ಭಗವತಿ ನಗರ್‌ನಿಂದ ನೈಸರ್ಗಿಕ ಶಿವಲಿಂಗ ರೂಪುಗೊಳ್ಳುವ ಗುಹಾಂತರ ದೇಗುಲದ ಕಡೆಗೆ ಪ್ರಯಾಣ ಬೆಳೆಸಿದರು.
ಯಾತ್ರಿಕರ ಅನುಕೂಲಕ್ಕಾಗಿ ಮಾರ್ಗದುದ್ದಕ್ಕೂ ಭದ್ರತೆಗಾಗಿ ಅಶ್ವದಳ ಹಾಗೂ ವಾಹನಗಳ ಮೂಲಕ ಯೋಧರ ಭದ್ರತೆಯನ್ನು ಒದಗಿಸಲಾಗಿದೆ. ಯಾತ್ರಾರ್ಥಿಗಳ ಸುಗಮ ಪ್ರಯಾಣಕ್ಕಾಗಿ ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಯಾತ್ರೆಯಲ್ಲಿ ಖುದ್ದಾಗಿ ಭಾಗವಹಿಸಲು ಕಷ್ಟವೆನಿಸುವವರಿಗಾಗಿ ದೇಗುಲದ ಶಿವಲಿಂಗದ ದರ್ಶನವನ್ನು ಆನ್‌ಲೈನ್ ಮೂಲಕ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
ಎಸ್‌ಎಎಸ್‌ಬಿಗೆ ಸಾಥ್ ನೀಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತ ಪಹಲ್‌ಗಾಮ್‌ನಿಂದ ಬಾಲ್ತಾಳ್‌ವರೆಗಿನ ಮಾರ್ಗಕ್ಕೆ ಭಾರೀ ಬಿಗಿಭದ್ರತೆಯನ್ನು ಒದಗಿಸಿದೆ. ಆನ್‌ಲೈನ್ ದರ್ಶನ ಮಾತ್ರವಲ್ಲದೆ ಪೂಜೆ, ಹವನ ಹಾಗೂ ಪ್ರಸಾದ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳ ಸಹಾಯಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಮ್ಮು ಮತ್ತು ಕಾಶ್ಮೀರದೆಲ್ಲೆಡೆ “ಮದದ್‌ಗಾರ್’ ಬೂತ್‌ಗಳನ್ನು (ಸಹಾಯ ಕೇಂದ್ರ) ಆರಂಭಿಸಿದೆ.
ಇಬ್ಬರು ಉಗ್ರರ ಹತ್ಯೆ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಸಾವನ್ನಪ್ಪಿದ್ದಾರೆ.