ನವದೆಹಲಿ : ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರ ರಾಜೀನಾಮೆ ಕುರಿತು ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸಂಜೆ ಸಿಧು ರಾಜೀನಾಮೆ ಕುರಿತು ಟ್ವೀಟ್ ಮಾಡಿರುವ ಅವರು, “ಅವನು ಸ್ಥಿರವಾದ ಮನುಷ್ಯನಲ್ಲ ಮತ್ತು ಗಡಿ ರಾಜ್ಯವಾದ ಪಂಜಾಬ್‌ಗೆ ಆತ ಸರಿ ಹೊಂದುವುದಿಲ್ಲ ಎಂದು ನಾನು ನಿಮಗೆ ಮೊದಲೆ ಹೇಳಿದ್ದೆ” ಎಂದಿದ್ದಾರೆ.
ಅಮರೀಂದರ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಯಲು ಸಿಧು ಮೂಲ ಕಾರಣಿಕರ್ತರು. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುಕ್ಷಣವೇ ಕ್ಯಾಪ್ಟನ್ ಅವರು ಸಿಧು ಮೇಲೆ ಹರಿಹಾಯ್ದಿದ್ದರು. ಸಿಧು ದೇಶ ವಿರೋಧಿ. ಅವನಿಂದ ಪಂಜಾಬ್ ರಾಜ್ಯ ಅಷ್ಟೇ ಅಲ್ಲ ದೇಶದ ಭದ್ರತೆಗೆ ಅಪಾಯ ಎಂದು ಗಂಭೀರ ಆರೋಪ ಮಾಡಿದ್ದರು.
ಇನ್ನು ಕಳೆದ ಎರಡು ತಿಂಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕೆ ಏರಿದ್ದ ನವಜ್ಯೋತ್ ಸಿಂಗ್ ಸಿಧು ಅವರು ದಿಢೀರನೆ ರಾಜೀನಾಮೆ ನೀಡಿರುವ ಪಂಜಾಬ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇತ್ತೀಚಿಗೆ ರಚನೆಗೊಂಡ ಹೊಸ ಸಂಪುಟದ ವಿಚಾರವಾಗಿ ಹೊಸ ಮುಖ್ಯಮಂತ್ರಿ ಚರಣ್‍ಸಿಂಗ್ ಸಿಂಗ್ ಛನ್ನಿ ಜತೆಗೂ ಸಿಧು ಮುನಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪಂಜಾಬ್ ನ ಭವಿಷ್ಯದ ವಿಚಾರದಲ್ಲಿ ಹಾಗೂ ಪಂಜಾಬ್ ಜನತೆಯ ಅಭಿವೃದ್ಧಿ ವಿಷಯದಲ್ಲಿ ನಾನು ಎಂದಿಗೂ ರಾಜಿಯಾಗಲಾರೆ. ಈ ನಿಟ್ಟಿನಲ್ಲಿ ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿಯೇ ಮುಂದುವರಿಯುತ್ತೇನೆ ಎಂದು ಸಿಧು ಅವರು ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.