ಬಂಟ್ವಾಳ: ಅಮರನಾಥದಲ್ಲಿ ನಡೆದಿರುವ ಮೇಘಸ್ಪೋಟದಲ್ಲಿ ನಡೆದಿರುವ ಜೀವಹಾನಿಯ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಘಟನೆ ನಡೆದ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿಯವರು ಯಾತ್ರಿಗಳ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ:ಅಮರನಾಥ ಯಾತ್ರೆಗೆ ತೆರಳಿದ ರಾಜ್ಯದ ಎಲ್ಲರೂ ಸುರಕ್ಷಿತವಾಗಿದ್ದಾರೆ: ಸಿಎಂ ಬೊಮ್ಮಾಯಿ
ಇನ್ನು 28 ಕಿ.ಮೀ. ಸಂಚರಿಸಿದರೆ ನಾವು ಯಾತ್ರಾ ಸ್ಥಳಕ್ಕೆ ತಲುಪುತ್ತೇವೆ, ಇಲ್ಲಿ ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ನಾಳೆ ಬೆಳಿಗ್ಗೆ ಅಮರನಾಥದಲ್ಲಿ ದರ್ಶನ ಭಾಗ್ಯ ಸಿಗುವ ನಿರೀಕ್ಷೆಯಿದೆ ಎಂದು ಯಾತ್ರಾ ತಂಡದ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಅಮರನಾಥ ದುರಂತ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳ ಅಮರನಾಥದಲ್ಲಿ ಶುಕ್ರವಾರ ಏಕಾಏಕಿ ಮೇಘಸ್ಫೋಟ ಉಂಟಾಗಿದೆ. ಇದರಿಂದಾಗಿ 16 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೇಘಸ್ಫೋಟ ಉಂಟಾಗಿದೆ. ಅದರಿಂದ ಉಂಟಾದ ಭಾರೀ ಪ್ರಮಾಣದ ಪ್ರವಾಹ ಭಕ್ತರು ವಾಸ್ತವ್ಯ ಹೂಡಿದ್ದ ಟೆಂಟ್‌ಗಳು ಮತ್ತು ಸಮುದಾಯ ಅಡುಗೆ ಮನೆಯತ್ತ ನುಗ್ಗಿ ಬಂದಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೇತೃತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರೆಣೆ ನಡೆಸಲಾಗುತ್ತಿದೆ.