ಈಶ್ವರಮಂಗಲ: ಪ್ರಕೃತಿಯ ಮಡಿಲಲ್ಲಿ ತನ್ನದೇ ರೀತಿಯ ವೈಶಿಷ್ಠೆಯನ್ನು ಹೊಂದಿರುವ ಹನುಮಗಿರಿಯ ಪಂಚಮುಖಿ ಆಂಜನೇಯ, ಕೋದಂಡರಾಮ ಕ್ಷೇತ್ರದ ಸನಿಹದಲ್ಲಿ ಇದೀಗ ಭಾರತ ಮಾತೆ, ಯೋಧರನ್ನು ಹಾಗೂ ಅನ್ನದಾತರನ್ನು ನೆನಪಿಸುವ, ಗೌರವಿಸುವ ತಾಣವಾಗಿ ಅಮರಗಿರಿ ರೂಪುಗೊಂಡಿದೆ.
ಆಧ್ಯಾತ್ಮಿಕದ ಜೊತೆ ದೇಶಾಭಿಮಾನವನ್ನು ಗೌರವಿಸಿ, ಪೋತ್ಸಾಹಿಸುವ ನಿಟ್ಟಿನಲ್ಲಿ ಹನುಮಗಿರಿ, ರಾಮಗಿರಿ ಜೊತೆಯಲ್ಲಿ ಅಮರಗಿರಿ ಖ್ಯಾತಿ ಪಡೆದುಕೊಳ್ಳಲಿದೆ.
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಿಂದ ಸುಮಾರು 23 ಕಿ.ಮೀ. ದೂರದಲ್ಲಿ ಹನುಮಗಿರಿ ಕ್ಷೇತ್ರದ ಸನಿಹದಲ್ಲಿ ಅಮರಗಿರಿ ಇದೆ. ಮೊದಲಿಗೆ ಶ್ರೀ ಭಾರತೀ ಅಮರಜ್ಯೋತಿ ವೀಕ್ಷಣೆ. ಯೋಧನ ಪ್ರತಿಮೆ, ಇದರ ಹಿಂದೆ ವಂದೇ ಮಾತರಂ ಶಿಲಾ ಫಲಕ ಗಮನ ಸೆಳೆಯುತ್ತದೆ. ನಂತರ ಸಿಗುವುದೇ ಅಮರಗಿರಿ.
ಸುಮಾರು ಎರಡು ಎಕರೆ ವಿಸ್ತಾರದಲ್ಲಿ ವಿಶಿಷ್ಠ ತಂತ್ರಜ್ಷಾನದ ಮೂಲಕ ಅಷ್ಟಭುಜಾಕಾರದ ಆಲಯ ನಿರ್ಮಾಣಗೊಂಡಿದೆ. ವೀಕ್ಷಣೆ ಮಾಡಲು ಬರುವಾಗ ಯೋಧರ ವಿಜಯ ಸಂಕೇತದ ಹಸ್ತ ಆಕಾರದ ಶಿಲ್ಪ, ವೀರಕಂಭ, ಭೂ, ವಾಯು, ನೌಕ ಸೇನೆಗಳ ಲಾಂಛನ ಹೊತ್ತ ಸ್ತಂಭ, ಗಡಿಯಲ್ಲಿ ಕಾವಲು ಕಾಯುತ್ತಿರುವ ವೀರ ಸೈನಿಕರ ಶಿಲಾಕೃತಿಗಳು ದೇಶದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುತ್ತದೆ.
ಆಲಯದೊಳಗೆ ಪ್ರವೇಶಿಸಿದರೆ ದಕ್ಷಿಣ ಭಾರತದಲ್ಲಿಯೇ ವಿಶಿಷ್ಠ ರೀತಿಯಲ್ಲಿ ರೂಪುಗೊಂಡಿರುವ ವಿಶಿಷ್ಠ ಹಾಗೂ ಅಪೂರ್ವವಾದ ದೇಶಾಭಿಮಾನ, ಗೌರವದ ಆರಡಿ ಎತ್ತರದ ಏಕೈಕ ಶ್ವೇತಾವರ್ಣದ ಅಮೃತಶಿಲೆಯ ಭಾರತ ಮಾತೆಯ ವಿಗ್ರಹ ಮನಸೆಳೆಯುತ್ತದೆ.
ಇದರ ಎಡ ಮತ್ತು ಬಲಭಾಗದಲ್ಲಿ ರೈತ ಮತ್ತು ಯೋಧರ ಪ್ರತಿಮೆಗಳು ಮನಸೆಳೆಯುತ್ತವೆ. ಭಾರತಾಂಬೆಯ ಎದುರಿಗೆ ಅಮರ ಜವಾನ್ ಸ್ಮಾರಕ ಶಿಲೆ ಇದೆ. ಗೋಡೆಗಳಲ್ಲಿ ದಾರ್ಶನಿಕರ, ವೀರ ಸೇನಾನಿಗಳ ತೈಲ ಶಿಲ್ಪಗಳು ಅವರ ಇತಿಹಾಸವನ್ನು ಕಣ್ಣೆದುರಿಗೆ ನಿಲ್ಲಿಸುತ್ತವೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಯುವಜನರನ್ನು ಆಕರ್ಷಿಸುತ್ತಿವೆ. ಕುಳಿತುಕೊಳ್ಳಲು ವಿಶಾಲವಾದ ಸ್ಥಳ ಇಲ್ಲಿದೆ.
ಅಮರಗಿರಿಯ ಆವರಣದಲ್ಲಿ ಯುದ್ಧಭೂಮಿಯ ವರ್ಲಿ ಚಿತ್ತಾರಗಳು, ಒಂದೊಂದು ಚಿತ್ರಗಳು ದೇಶ, ಸೈನ್ಯದ ಕುರಿತಾದ ಕುರುಹುಗಳು ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶಗಳನ್ನು ಸಾರುತ್ತಿದೆ. ದೇಶದ ರಕ್ಷಣೆಯಲ್ಲಿ ಅನೇಕ ಸಾಹಸಿಗರ ತ್ಯಾಗ ಬಲಿದಾನಗಳು ಮಹತ್ತರವಾದದು.
ಇವರೆಲ್ಲರ ಜೀವನವನ್ನು ನೆನಪಿಸಿಕೊಳ್ಳುವುದರ ಜೊತೆ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯು ಉದ್ದೀಪನಗೊಳಿಸುವುದೇ ಅಮರ ಗಿರಿಯ ಉದ್ದೇಶ ಮತ್ತು ಸಂದೇಶವಾಗಿದೆ. ಒಳಹೊಕ್ಕು ಹೊರ ಬರುವಾಗ ದೇಶ ಪೂಜನದ ಅನುಭಾವ ಮೂಡಿ ಭವ್ಯ ಭಾರತ ಕಟ್ಟುವ ಪ್ರಕ್ರಿಯೆಗೆ ನೂತನ ಅಮರಗಿರಿ ಮುನ್ನುಡಿಯಾಗಲಿದೆ.
3 ಕೋಟಿ ವೆಚ್ಚದಲ್ಲಿ ನಿರ್ಮಾಣ: ದೇಶಾಭಿಮಾನಿಗಳ ಸಹಕಾರದೊಂದಿಗೆ ಸುಮಾರು 3ಕೋಟಿ ವೆಚ್ಚದಲ್ಲಿ ಆಮರಗಿರಿ ರೂಪುಗೊಂಡಿದೆ. ಶಾಸಕ ಸಂಜೀವ ಮಠಂದೂರು ಅವರು ಇಂಟರ್ ಲಾಕ್‌ಗೆ ರೂ.25 ಲಕ್ಷ ಮತ್ತು ತಡೆಗೋಡೆಗೆ ರಚನೆಗೆ 30 ಲಕ್ಷ ಅನುದಾನ ನೀಡಿದ್ದಾರೆ. ಲೋಕಾರ್ಪಣೆ ಬಳಿಕ ಶನಿವಾರ, ಭಾನುವಾರ ಹಾಗೂ ಸರಕಾರಿ ರಜಾದಿನಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇದ್ದು ಸಂಜೆಯ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.
ಫೆ. 11 ರಂದು ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಅಮರಗಿರಿಯಲ್ಲಿ ಯೋಧನ ಪುತ್ತಳಿಗೆ ರಾಷ್ಟ್ರ ಧ್ವಜ ಇರಿಸಿ, ದೀಪ ಪ್ರಜ್ವಲಿಸಿ ಲೋಕಾರ್ಪಣೆ ಮಾಡಲಿದ್ದಾರೆ.
ಭಾರತಮಾತೆ, ರೈತ, ಯೋಧನ ಪ್ರತಿಮೆಗಳಿಗೆ ಪುಷ್ಪಾರ್ಚನೆಗೈಯಲಿದ್ದಾರೆ. ಸಂದರ್ಶಕ ಪುಸ್ತಕದಲ್ಲಿ ಸಹಿ ಹಾಕಿ ಹೊರಭಾಗದಲ್ಲಿ ಶುಭ ಸಂದೇಶ ನೀಡಲಿದ್ದಾರೆ. ಇವರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ, ರಾಜ್ಯ ಸರಕಾರಗಳ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.
ಆಧ್ಯಾತ್ಮಿಕ ಜತೆಗೆ ರಾಷ್ಟಾಭಿಮಾನ ಉದ್ದೀಪನಗೊಳಿಸುವ ಕೇಂದ್ರ: ಹನುಮಗಿರಿ ಕ್ಷೇತ್ರ ಆಧ್ಯಾತ್ಮಿಕ ಕೇಂದ್ರವಾಗಿ ಗಮನಸೆಳೆದಿದೆ. ಇದೀಗ ಹೊಸದಾಗಿ ಅಮರಗಿರಿ ಸೇರ್ಪಡೆಯಾಗುವ ಮೂಲಕ ಆಧ್ಯಾತ್ಮಿಕ ಜತೆಗೆ ರಾಷ್ಟಾಭಿಮಾನ ಉದ್ದೀಪನಗೊಳಿಸುವ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. –
ಸಂಜೀವ ಮಠಂದೂರು,ಪುತ್ತೂರು ಶಾಸಕ
–
ಮಾಧವ ನಾಯಕ್ ಕೆ.