ಅಳ್ನಾವರ: ಇಂದಿನ ದಿನಗಳಲ್ಲಿ ಮಳೆ ಅನಿಶ್ಚಿತವಾಗಿರುವುದರಿಂದ ಕೃಷಿ ಇಲಾಖೆಯು ಕೃಷಿ ಹೊಂಡಗಳ ನಿರ್ಮಾಣಕ್ಕೆ ಮತ್ತು ಉತ್ತಮ ತಳಿಯ ಬೀಜಗಳ ವಿತರಣೆಗೆ ಆದ್ಯತೆ ನೀಡಲಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು. ಪಟ್ಟಣ ಬಳಿಯ ಕಡಬಗಟ್ಟಿಯ ಕೃಷಿಯಂತ್ರಧಾರೆ ಕೇಂದ್ರದಲ್ಲಿ ರೈತರೊಂದಿಗೆ ಜರುಗಿದ ಸಂವಾದದಲ್ಲಿ ಅವರು ಮಾತನಾಡಿದರು. ಕೃಷಿ ಇಲಾಖೆಯಿಂದ ರೈತರ ಅನುಕೂಲಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸಲಾಗಿದ್ದು, ಹನಿ ನೀರಾವರಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ರೈತರಿಗೆ ಕೃಷಿಯಲ್ಲಿ ಬಳಸಲು ಉತ್ತಮ ತಳಿಯ ಬೀಜಗಳನ್ನು ಪೂರೈಸಲಾಗುತ್ತಿದೆ. ಕೃಷಿ ವಿಜ್ಞಾನಿಗಳಿಂದ ಶಿಫಾರಸು ಮಾಡಲಾಗಿರುವ ಹೊಸ ತಳಿಯ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚು ಹೆಚ್ಚು ಮಾರಾಟ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಕೃಷಿ ಹೊಂಡ ಪರಿಶೀಲನೆ: ರೈತ ಸಂವಾದ ಪೂರ್ವದಲ್ಲಿ ಕೃಷಿ ಸಚಿವರು ಅಂಬೊಳ್ಳಿ ಗ್ರಾಮದ ರೈತ ವಿಶ್ವಂಬರ ಬನಸಿ ಅವರ ತೋಟದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ಕೃಷಿ ಹೊಂಡ ಪರಿಶೀಲಿಸಿದರು. 2018-19ನೇ ಸಾಲಿನ ಭೂಸಮೃದ್ಧಿ ಯೋಜನೆಯಡಿ ಭತ್ತದಲ್ಲಿ ನೇರ ಕೂರಿಗೆ ಬಿತ್ತನೆಯ ಪ್ರಾತ್ಯಕ್ಷತೆ ವಿಕ್ಷೀಸಿದರು. ರೈತ ಶಿವಾಜಿ ಬಳಗೆರಿ ನೇರ ಕೂರಿಗೆ ಬಿತ್ತನೆಯ ಲಾಭಗಳನ್ನು ಸಚಿವರಿಗೆ ವಿವರಿಸಿದರು.
ಬೆಳೆ ವೀಕ್ಷಣೆ: ಅಳ್ನಾವರ ಸಮೀಪದ ಕಡಬಗಟ್ಟಿ ಗ್ರಾಮದ ಯಲ್ಲಪ್ಪ ಬೇಕ್ವಾಡಕರ ಅವರ ಜಮೀನಿಗೆ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಭೇಟಿಕೊಟ್ಟು ಯಂತ್ರಗಳ ಮೂಲಕ ನೇರ ಬಿತ್ತನೆ ಮಾಡಿ ಬೆಳೆದ ಭತ್ತದ ಬೆಳೆ ವೀಕ್ಷಿಸಿದರು. ಈ ಒಕ್ಕಲುತನ ಪದ್ಧತಿ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಯಲ್ಲಪ್ಪ ಬೇಕ್ವಾಡಕರ ತಮ್ಮ ಅನುಭವ ಹಂಚಿಕೊಂಡರು.
ಮನವಿ ಸಲ್ಲಿಕೆ: ಗೋವಿನ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ತೆರೆಯುವಂತೆ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು, ಖರೀದಿಗೆ ಕೆಲವೊಂದು ಮಾನದಂಡಗಳು ಇರುವುದರಿಂದ, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು. ಹುಲಿಕೇರಿ ಕೆರೆ ಸುಧಾರಣೆಗೆ ಅನುದಾನ ನೀಡಲು ಗ್ರಾಮದ ಶಿವಾಜಿ ಡೊಳ್ಳಿನ, ಮಲ್ಲಿಕಾರ್ಜುನ ಕಲ್ಲೂರ ಮತ್ತಿತರರು ಸಚಿವರಿಗೆ ಮನವಿ ಮಾಡಿದರು.
ಕೃಷಿಯಂತ್ರಧಾರೆ ಕೇಂದ್ರ ವ್ಯವಸ್ಥಾಪಕಿ ಮಂಜುಳಾ ನುಚ್ಚಂಬಲಿ ಅವರು, ಕೃಷಿ ಉಪಕರಣಗಳ ಬಾಡಿಗೆ ನೀಡುವ ಕುರಿತು ಮತ್ತು ರೈತರ ಅಭಿಪ್ರಾಯಗಳನ್ನು ಸಚಿವರಿಗೆ ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೆಶಕ ಟಿ.ಎಸ್. ರುದ್ರೇಶಪ್ಪ, ಬೆಳಗಾವಿ ವಿಭಾಗದ ಕೃಷಿ ಜಾಗೃತ ದಳದ ಜಂಟಿ ನಿರ್ದೇಶಕ ವೆಂಕಟರಮಣ ರೆಡ್ಡಿ, ಉಪನಿರ್ದೇಶಕಿ ಆರ್.ಸುಷ್ಮಾ, ಸಿ.ಜಿ. ಮೇತ್ರಿ ಇನ್ನಿತರರಿದ್ದರು.
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಅನುಸರಿಸಲು ಸರಕಾರ ಮುಂದಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲಿದೆ. ಕೃಷಿ ಇಲಾಖೆಯಲ್ಲಿ ಕ್ಷೇತ್ರ ಕಾರ್ಯ ಮುಖ್ಯವಾಗಿರುವುದರಿಂದ ಇನ್ನೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
.
ಶಿವಶಂಕರ ರೆಡ್ಡಿ, ರಾಜ್ಯ ಕೃಷಿ ಸಚಿವ