Advertisement

ಪ್ರವಾಸಿ ತಾಣವಾಗಿ ಬಾರಕೂರು: ಜಯಮಾಲಾ ಭರವಸೆ

12:30 AM Jan 26, 2019 | |

ಉಡುಪಿ/ಬ್ರಹ್ಮಾವರ: ಬಾರಕೂರನ್ನು ಪ್ರವಾಸಿ ತಾಣವಾಗಿ ಘೋಷಿಸಲು ಪ್ರಯತ್ನಿಸುವುದಾಗಿ ಸಚಿವೆ ಡಾ| ಜಯಮಾಲಾ ಭರವಸೆ ನೀಡಿದರು. 

Advertisement

ಜಿಲ್ಲಾಡಳಿತ, ಜಿ.ಪಂ., ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ತೋಟಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ಬಾರಕೂರು ಕೋಟೆ ಪ್ರದೇಶದಲ್ಲಿ ಆರಂಭಗೊಂಡ 3 ದಿನಗಳ “ಆಳುಪೋತ್ಸವ 2019’ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯ ನೆಲ, ಸಂಸ್ಕೃತಿ ಅದ್ಭುತವಾದುದು. ಅಳುಪರು ಮೊದಲು ಮಂಗಳೂರು, ಬಳಿಕ ಉದ್ಯಾವರ, ಅನಂತರ ಬಾರಕೂರನ್ನು ರಾಜಧಾನಿಯಾ ಗಿರಿಸಿಕೊಂಡು ಆಳಿದ್ದರು. ಆಳುಪೋತ್ಸವದ ಈ ಸಂದರ್ಭ ಬಾರಕೂರನ್ನು ಪ್ರವಾಸಿ ತಾಣವಾಗಿ ಘೋಷಿಸಲು ಪ್ರವಾಸೋದ್ಯಮ ಸಚಿವರಿಗೂ ಆಸಕ್ತಿ ಇದೆ. ಅವರಲ್ಲಿ ಮಾತನಾಡಿ ಇದಕ್ಕಾಗಿ ಪ್ರಯತ್ನಿಸುತ್ತೇನೆ ಎಂದರು.

ರಾಜರ ಸಾಂಸ್ಕೃತಿಕ ಕೊಡುಗೆಗಳಿಂದಾಗಿ ಇಂದಿಗೂ ಕರಾವಳಿಯ ನಾವು ಸುಸಂಸ್ಕೃತರಾಗಿ ಬದುಕುತ್ತಿದ್ದೇವೆ. ನಮ್ಮ ಸರಕಾರ ಮುಂದಿನ ಪೀಳಿಗೆಗೆ ಹಿಂದಿನವರ ಕೊಡುಗೆ ತಿಳಿಯುವಂತಾಗಲು ದಸರ, ಕದಂಬ, ಚಾಲುಕ್ಯ, ಕರಾವಳಿ, ಲಕ್ಕುಂಡಿ ಮೊದಲಾದ ಉತ್ಸವ ಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂತಹ ಉತ್ಸವ ಪ್ರತಿವರ್ಷ ನಡೆಯುವಂತಾಗಬೇಕು. ಹೀಗಾದರೆ ಯುವ ಪೀಳಿಗೆಗೆ ಗತ ವೈಭವದ ಅರಿವು ಉಂಟಾಗುತ್ತದೆ ಎಂದರು.

Advertisement

ಬಾರಕೂರು ಸಂಸ್ಥಾನದ ಡಾ| ವಿಶ್ವ ಸಂತೋಷ ಭಾರತಿ ಗುರೂಜಿ, ಇಗರ್ಜಿಯ ಧರ್ಮಗುರು ವಂ| ಫಿಲಿಪ್‌ ಮೇರಿ ಅರಾನ್ಹ, ಮಸೀದಿಯ ಧರ್ಮಗುರು ಮೌಲಾನ ಮಹಮ್ಮದ್‌ ರಫೀಕ್‌ ಶುಭ ಕೋರಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿ.ಪಂ. ಸಿಇಒ ಸಿಂಧು ರೂಪೇಶ್‌, ಎಡಿಸಿ ವಿದ್ಯಾಕುಮಾರಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರಾದ ಬಾರಕೂರಿನ ಶೈಲಜಾ ಡಿ’ಸೋಜಾ, ಯಡ್ತಾಡಿಯ ಪ್ರಕಾಶ್‌ ಶೆಟ್ಟಿ, ತಾ.ಪಂ. ಸದಸ್ಯ ಅರುಣ್‌, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಬಾರಕೂರಿನ ಮುಂದಾಳು ಶಾಂತಾರಾಮ ಶೆಟ್ಟಿ, ಜಾನಪದ ಜಾತ್ರೆ ನಿರ್ದೇಶಕ ಪಿಚ್ಚಳ್ಳಿ ಶ್ರೀನಿವಾಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಉಪಸ್ಥಿತರಿದ್ದರು. ಅಂಚೆ ಇಲಾಖೆ ಹೊರತಂದ ವಿಶೇಷ ಲಕೋಟೆಯನ್ನು ಸಚಿವರು ಬಿಡುಗಡೆಗೊಳಿಸಿದರು. 

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸ್ವಾಗತಿಸಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಪ್ರಸ್ತಾವನೆಗೈದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ವಂದಿಸಿದರು. ಬೆಂಗಳೂರಿನ ಗಣೇಶ ಪ್ರಸಾದ್‌ ನಿರ್ವಹಿಸಿದರು. ಸಿಂಹಾಸನ ಗುಡ್ಡೆಯಿಂದ ಕೋಟೆವರೆಗೆ ಆಕರ್ಷಕ ಹೆರಿಟೇಜ್‌ ವಾಕ್‌ ಜಾಥಾ ನಡೆಯಿತು.

ಉಲ್ಲೇಖವಿಲ್ಲದ ಪ್ರಾಚೀನತೆ
ಸುಮಾರು ಎಂಟು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಬಾರಕೂರಿನ ಭಂಡಾರಕೇರಿ ಮಠದ ಉಲ್ಲೇಖ ಆಳುಪೋತ್ಸವದಲ್ಲಿ ಎಲ್ಲಿಯೂ ಕಂಡುಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next