Advertisement

ನಮ್ಮ ಭಾಷೆಗಳು ಬೇರೆ-ಬೇರೆಯಾಗಿದ್ದರೂ ಭಾವ ಒಂದೇ: ಜಗತಾಪ

06:07 PM Apr 05, 2023 | Team Udayavani |

ಸೊಲ್ಲಾಪುರ: ಇದು ಗಡಿನಾಡು ಸಾಹಿತ್ಯ ಸಮ್ಮೇಳನ, ನಮ್ಮ ಗಡಿ ಸಂರಕ್ಷಣೆ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರದೇಶಗಳು ಬರಲೇಬೇಕು. ಅಲ್ಲದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ಪ್ರದೇಶಗಳು ಹೋಗಲೇಬೇಕು. ಆಗ ಮಾತ್ರ ಎರಡು ರಾಜ್ಯಗಳ ಗಡಿ ಸಮಸ್ಯೆ ಬಗೆಹರಿಯುತ್ತದೆ. ಗಡಿನಾಡು ಕನ್ನಡಿಗರಾದ ನಾವೆಲ್ಲ ಬೇಲಿ ಮೇಲಿನ ಹೂಗಳಿದ್ದಂತೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಗಡಿನಾಡು ಘಟಕದ ವತಿಯಿಂದ ಜತ್ತ ತಾಲೂಕಿನ ಸಂಖ ಗ್ರಾಮದ ಗುರುಬಸವ ವಿದ್ಯಾಮಂದಿರದ ಆವರಣದಲ್ಲಿ ಆಯೋಜಿಸಿದ್ದ 3ನೇ ಮಹಾರಾಷ್ಟ್ರ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರು ಶೇ. 20ರಿಂದ 24ರಷ್ಟು ಇದೆ. ಇದು ನಮಗೆಲ್ಲ ನೋವಿನ ಸಂಗತಿ. ನಾನು ಸಚಿವೆಯಾಗಿದ್ದಾಗ ಬೆಂಗಳೂರಿನಲ್ಲಿ ಸುಮಾರು ಒಂದು ನೂರು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆದಿದ್ದೇನೆ. ಆದರೆ ಇಂಗ್ಲಿಷ್‌ ಶಾಲೆಗಳಿಂದ ಕನ್ನಡ ಶಾಲೆಗಳು ಮಾಯವಾಗಿವೆ. ಇಂದು ನಾವೆಲ್ಲ ಮನೆಗಳಲ್ಲಿ ಕನ್ನಡ ಮಾತನಾಡುವುದಿಲ್ಲ. ಹೀಗಾಗಿ ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು.

ಜತ್ತ ಮಾಜಿ ಶಾಸಕ ವಿಲಾಸರಾವ ಜಗತಾಪ ಮಾತನಾಡಿ, ಭಾಷೆಗಳು ಬೇರೆ-ಬೇರೆಯಾಗಿದ್ದರೂ ಭಾವನೆ ಒಂದೆಯಾಗಿದೆ. ಹೀಗಾಗಿ ನಮ್ಮಲ್ಲಿ ಭಾಷಾ ಭೇದ-ಭಾವಗಳಿರಬಾರದು. ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು ಎಂಬ ಮನೋಭಾವದಿಂದ ಬದುಕಬೇಕು. ಅನೇಕ ಜಾತಿ, ಧರ್ಮಗಳಿವೆ, ಬೇರೆ-ಬೇರೆ ಭಾಷೆಗಳಿವೆ. ಆದರೂ ನಾವೇಲ್ಲರೂ ಒಂದಾಗಿದ್ದೇವೆ. ನಾವೆಲ್ಲ ಭಾಷಾ ಶ್ರೀಮಂತರಾಗಬೇಕು. ಧರ್ಮವಾದಿಗಿಂತಲೂ, ವಿಜ್ಞಾನವಾದಿಯಾಗಬೇಕು. ಮನುಷ್ಯನಿಗೆ ಧರ್ಮವಿದೆ. ಧರ್ಮಕ್ಕಾಗಿ ಮನುಷ್ಯನಿಲ್ಲ.

ಜಾತಿ, ಭೇದ-ಭಾವ ತೊರೆದು ಎಲ್ಲರಿಗೂ ಸಮಾನತೆಯನ್ನು ನೀಡಿದವರು ಬಸವಣ್ಣನವರು. ಇಲ್ಲಿ ಕನ್ನಡ-ಮರಾಠಿ ಭಾಷಿಕರಲ್ಲಿ ಅನೋನ್ಯವಾದ ಬಾಂಧವ್ಯಗಳಿವೆ ಎಂದು ಅಭಿಪ್ರಾಯಪಟ್ಟರು. ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಸ್‌. ಸಿಂಧೂರ್‌ ಮಾತನಾಡಿ, 1956ರಲ್ಲಿ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಗಾಳಿ ಆರಂಭವಾಗಿದ್ದು ಇದರಿಂದ ಗಡಹಿಂಗ್ಲಜ, ಜತ್ತ, ದಕ್ಷಿಣ ಸೊಲ್ಲಾಪುರ ಹಾಗೂ ಅಕ್ಕಲಕೋಟ ಸೇರಿದಂತೆ ಒಟ್ಟು 247 (ಹಳ್ಳಿಗಳು) ಕನ್ನಡ ಪ್ರದೇಶಗಳು ನೆರೆ ರಾಜ್ಯಗಳಲ್ಲಿ ಉಳಿದುಕೊಂಡವು.ಇವೆಲ್ಲವೂ ಗಡಿ ಭಾಗವೆಂದೆನಿಸಿಕೊಳ್ಳುತ್ತವೆ. ಇಲ್ಲಿನ ಜನ ಕರ್ನಾಟಕದಲ್ಲಿ ಸೇರ್ಪಡೆಯಾಗಲು ಇಚ್ಛಿಸುತ್ತಾರೆ. ಕಾರಣ ಅಭಿವೃದ್ಧಿ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಅವರು ಚಿಂತಿಸುತ್ತಾರೆ. ಕರ್ನಾಟಕದ ಕೆಲ ಮಹನೀಯರು ಇದನ್ನು ಆರ್ಥಿಕ ದೃಷ್ಟಿಯಿಂದ ತೂಗಿ ನೋಡುತ್ತಾರೆ.

Advertisement

ಹಿರಿಯ ಕನ್ನಡ ಹೋರಾಟಗಾರ ಡಾ| ಆರ್‌. ಕೆ. ಪಾಟೀಲ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆಯಿಂದ ಕರ್ನಾಟಕದ ಅನೇಕ ಪ್ರದೇಶಗಳು ಮಹಾರಾಷ್ಟ್ರದ ಪಾಲಾಗಿವೆ. ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರಿಗೆ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯ ನಿರ್ವಹಿಸುತ್ತದೆ. ನಮ್ಮಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕು. ಕನ್ನಡ ನಮ್ಮ ಮಾತೃ ಭಾಷೆ, ಹೃದಯ ಭಾಷೆ. ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆತಂತೆ, ಅದೇ ಇನ್ನೊಂದು ಭಾಷೆಯಲ್ಲಿ ಸಿಗುವುದಿಲ್ಲ ಎಂದು ಸಾನ್ನಿಧ್ಯ ವಹಿಸಿದ್ದ ನಾಗಣಸೂರಿನ ಶ್ರೀಕಂಠ ಶ್ರೀಗಳು ಮಾತನಾಡಿ, ಸಂಖದಲ್ಲಿ 3ನೇ ಮಹಾರಾಷ್ಟ್ರ ಗಡಿನಾಡು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಲ್ಲಿಯ ಕನ್ನಡಿಗರಿಗೆ ಹರ್ಷ ತಂದಿದೆ. ಇಲ್ಲಿನ ಕನ್ನಡಿಗರ ಸ್ಥಿತಿ-ಗತಿಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆದು ಅವುಗಳನ್ನು ಎರಡೂ ಸರ್ಕಾರದ ಗಮನಕ್ಕೆ ತಂದುಕೊಡುವ ಕಾರ್ಯ ಮಾಡುವಂತಾಗಬೇಕು ಎಂದರು.

ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬೆಳಗ್ಗೆ ತಹಶೀಲ್ದಾರ್‌ ಎಸ್‌.ಆರ್‌. ಮಾಗಡೆ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವ ನಾಯಕ ಕಿರಣ ಪಾಟೀಲ ಮಹಾದ್ವಾರ ಉದ್ಘಾಟಿಸಿದರು. ವಿಜಯಕುಮಾರ ಬಿರಾದಾರ, ಶರಣೆ ದಾನಮ್ಮ ದಾಸೋಹ ಮನೆ ಉದ್ಘಾಟಿಸಿದರು. ಸಂಖ ವಿರಕ್ತಮಠದ ಮಹೇಶ ದೇವರ ಸಾನ್ನಿಧ್ಯದಲ್ಲಿ ಬೆಳಗ್ಗೆ 9ಕ್ಕೆ ಮಹಾತ್ಮ ಬಸವೇಶ್ವರ ವೃತ್ತದಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಿತು. ನಿವೃತ್ತ ಬಿಇಒ ಜಿ.ಡಿ. ರಾಠೊಡ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ಸಮ್ಮೇಳನದಲ್ಲಿ ತಜ್ಞರಿಂದ ಕನ್ನಡ ಮತ್ತು ಮರಾಠಿ ಸಾಹಿತ್ಯ, ಸಂಸ್ಕೃತಿ: ಸಾಮರಸ್ಯ, ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಮಹಾಕನ್ನಡಿಗರ ಸ್ಥಿತಿ-ಗತಿ, ಸಾಹಿತ್ಯದ ಬದುಕಿಗೆ ಮಾಧ್ಯಮದ ಬೆಳಕು, ಮಹಿಳಾ ಸಬಲೀಕರಣ ಕುರಿತಾದ ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಗೌರವ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ| ಶಶಿಕಾಂತ ಪಟ್ಟಣ ರಚಿಸಿದ ಬೇಲಿ ಮೇಲಿನ ಹೂವು ಕವನ ಸಂಕಲನವನ್ನು ಮಾಜಿ ಸಚಿವೆ ಡಾ| ಲೀಲಾದೇವಿ
ಪ್ರಸಾದ್‌ ಲೋಕಾರ್ಪಣೆಗೊಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಮಧುಮಾಲ ಲಿಗಾಡೆ ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

ಗುರುಬಸು ವಗ್ಗೊಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಶರಣು ಕೋಳಿ, ದಿನೇಶ್‌ ಚವ್ಹಾಣ್‌, ಪ್ರಕಾಶ್‌ ಪ್ರಧಾನ, ಹಾಗೂ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ, ಉಪಾಧ್ಯಕ್ಷ ಬಸವರಾಜ ಧನಶೆಟ್ಟಿ, ವಿದ್ಯಾಧರ ಗುರವ, ಉಮೇಶ ಕೋಳಿ, ಪ್ರಶಾಂತ ವಗ್ಗೊಲಿ ಸೇರಿದಂತೆ ಮೊದಲಾದವರು ಇದ್ದರು. ಸಮ್ಮೆಳನದ ಬಹಿರಂಗ ಸಭೆಯಲ್ಲಿ ಪರಿಷತ್‌ ಕಾರ್ಯದರ್ಶಿ ಶರಣಪ್ಪ ಫುಲಾರಿ ಗೊತ್ತುವಳಿಗಳನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next