ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಉತ್ತುಂಗದಲ್ಲಿರುವಾಗಲೇ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುರುವಾರ ರಾತ್ರಿ ಭೇಟಿ ಮಾಡಿದ್ದರು. ಈ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಭೇಟಿಯ ಬಗ್ಗೆ ಸ್ವಾಮೀಜಿ ಮಾತನಾಡಿದ್ದು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ ನಮ್ಮಲ್ಲಿ ಖಂಡಿತವಾಗಿಯೂ ಪರ್ಯಾಯ ನಾಯಕರಿದ್ದಾರೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಪಂಚಮಸಾಲಿಯವರಿಗೆ ಸಿಎಂ ಮಾಡಿ ಎಂದೂ ಹೇಳಿಲ್ಲ. ವರಿಷ್ಠರು ಸಲಹೆ ಕೇಳಿದರೆ ಸಲಹೆ ನೀಡುತ್ತೇವೆ, ಸಿಎಂ ಆಯ್ಕೆ ಮಾಡುವುದು ಶಾಸಕರು. ಸ್ವಾಮೀಜಿಗಳು ರಾಜಕೀಯದಲ್ಲಿ ಮಾತನಾಡಬಾರದು. ಬಿಜೆಪಿ ತೆಗೆದುಕೊಳ್ಳುವ ತೀರ್ಮಾನದಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಕೊಡಿ ಎಂದು ಹೇಳುತ್ತೇವೆ ಆದರೆ ರಾಜಕೀಯ ಒತ್ತಾಯ ಮಾಡುವುದಿಲ್ಲ ಎಂದರು.
ಇದನ್ನೂ ಓದಿ:ಅರುಣ್ ಸಿಂಗ್ ಭೇಟಿಯಾದ ಪಂಚಮಸಾಲಿ ಪೀಠದ ಶ್ರೀ: ಸಿಎಂ ಸ್ಥಾನಕ್ಕೆ ಸಮುದಾಯದ ಪರ ಬ್ಯಾಟಿಂಗ್?
ಯಡಿಯೂರಪ್ಪ ಇಳಿದರೆ ಉತ್ತರ ಕರ್ನಾಟಕದ ನೆಲದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಲಿಂಗಾಯತರಲ್ಲಿ ಪರ್ಯಾಯ ನಾಯಕತ್ವ ಇಲ್ಲ ಎಂಬುದು ಅವಮಾನ ಮಾಡುವ ಸಂಗತಿ, ಲಿಂಗಾಯತರಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಹಿಂದೆಯೂ ನಿಜಲಿಂಗಪ್ಪ ಬಿಟ್ಟರೆ ಯಾರಾಗುತ್ತಾರೆ ಎಂದು ಪ್ರಶ್ನೆ ಬಂದಿತ್ತು, ನಂತರ ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್ ಸಿಎಂ ಆದರು ಎಂದರು.
ಸಿಎಂ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದವರಿಗೆ ಅವಕಾಶ ಕೊಡಿ. ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ನಮ್ಮ ಸಮಯದಾಯದವರು ಸಿಎಂ ಸ್ಥಾನದ ರೇಸ್‌ನಲ್ಲಿದ್ದಾರೆ. ನಮ್ಮ ಸಮುದಾಯದಲ್ಲಿ ಸಮರ್ಥ ನಾಯಕರಿದ್ದಾರೆ. ಕಳಂಕ ರಹಿತರು, ಕಪ್ಪುಚುಕ್ಕೆ ಇಲ್ಲದ, ಭ್ರಷ್ಟಾಚಾರ ಮಾಡಡ, ಆಡಳಿತ ನಡೆಸುವ ಸಮರ್ಥ ನಾಯಕರಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ: ಸ್ವಪಕ್ಷದವರ ವಿರುದ್ಧ ಮತ್ತೆ ಹಳ್ಳಿಹಕ್ಕಿ ಗುಟುರು