Advertisement

ಹರಿಹರದಲ್ಲಿ  ಘಟಕ; ಪರ್ಯಾಯ ಇಂಧನ ಗುರಿ

10:15 AM Oct 22, 2018 | |

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 2ಜಿ ಎಥೆನಾಲ್‌ ಘಟಕ ಸ್ಥಾಪಿಸಲು ಮುಂದಾಗಿದೆ. ಮೂರು ವರ್ಷಗಳಲ್ಲಿ ಇದು ನಿರ್ಮಾಣ ವಾದಾಗ ರಾಜ್ಯದ ಅತಿ ದೊಡ್ಡ 2ಜಿ ಎಥೆನಾಲ್‌ ಘಟಕ ಎನಿಸಿಕೊಳ್ಳಲಿದೆ. ತೈಲ ಬೆಲೆ ಗಗನಕ್ಕೆ ಏರುತ್ತಿರುವ ಈ ಕಾಲದಲ್ಲಿ ಇದೊಂದು ಮುಖ್ಯ ಹೆಜ್ಜೆಯಾಗಿದೆ.

Advertisement

ಎಂಆರ್‌ಪಿಎಲ್‌ ಪ್ರಸ್ತುತ ರಾಜ್ಯದ ಶೇ. 95ರಷ್ಟು ವಾಹನ ಇಂಧನ ಬೇಡಿಕೆ ಪೂರೈಸುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ಗ್ರಾಹಕರಿಗಷ್ಟೇ ಅಲ್ಲ; ತೈಲ ಕಂಪೆನಿಗಳಿಗೂ ತಲೆನೋವು. ಭವಿಷ್ಯದಲ್ಲಿ ಪರ್ಯಾಯ ಇಂಧನ ಮೂಲವನ್ನು ಹುಡುಕಿ ಬಳಕೆಗೆ ಗ್ರಾಹಕರನ್ನು ಉತ್ತೇಜಿಸದೆ ಹೋದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಂಆರ್‌ಪಿಎಲ್‌ ಈಗ ಕಲ್ಲೆಣ್ಣೆ ಉತ್ಪಾದನೆ ಮತ್ತು ಬಳಕೆಯನ್ನು ಕಡಿಮೆಗೊಳಿಸಲು ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ. ಹರಿಹರದಲ್ಲಿ ಸುಮಾರು 40 ಎಕರೆಯಲ್ಲಿ ಸ್ಥಾಪನೆಗೊಳ್ಳಲಿರುವ ಎಥೆನಾಲ್‌ ಘಟಕ ಇದರ ಭಾಗ.

ಸಕ್ಕರೆ ಅಂಶವಿರುವ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಗೋಧಿ, ಜೋಳ ಮತ್ತಿತರ ಬೆಳೆಗಳಿಂದ ಎಥೆನಾಲ್‌ ಉತ್ಪಾದಿಸಬಹುದು. ಇವು ಯಥೇತ್ಛವಾಗಿ ಬೆಳೆಯುವ ಹರಿಹರ ಪ್ರದೇಶ ಸ್ಥಾವರ ಸ್ಥಾಪನೆಗೆ ಸೂಕ್ತ ಎಂದು ಕಂಡುಕೊಳ್ಳಲಾಗಿದೆ. ಕೆಐಎಡಿಬಿ ಯಿಂದ ಈಗಾಗಲೇ ಸುಮಾರು 40 ಎಕರೆ ಜಮೀನು ಪಡೆದುಕೊಂಡಿರುವ ಎಂಆರ್‌ಪಿಎಲ್‌, ಯೋಜನೆಯ ತಾಂತ್ರಿಕ ಅನುಮತಿಯ ಪ್ರಕ್ರಿಯೆ ನಡೆಸುತ್ತಿದೆ. 

ಹಾಲಿ ಎಥೆನಾಲ್‌ ಉತ್ಪಾದನೆ 7.50 ಲಕ್ಷ ಲೀ.
ಯಾವ ಬೆಳೆಯ ಆಧಾರದಲ್ಲಿ, ಎಷ್ಟು ಎಥೆನಾಲ್‌ ಉತ್ಪಾದಿಸಲಾಗುತ್ತದೆ ಎಂಬ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಆದರೆ ರಾಜ್ಯದ ಮೊದಲ ಅತ್ಯಂತ ಸುಸಜ್ಜಿತ ಬೃಹತ್‌ ಎಥೆನಾಲ್‌ ಉತ್ಪಾದಕ ಸ್ಥಾವರ ಇದಾಗಲಿದೆ. ರಾಜ್ಯದ ಒಟ್ಟು 85 ಸಕ್ಕರೆ ಕಾರ್ಖಾನೆಗಳಲ್ಲಿ ಸುಮಾರು 68 ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 15ರಲ್ಲಿ ಮಾತ್ರ ಎಥೆನಾಲ್‌ ಉತ್ಪಾದಿಸ ಲಾಗುತ್ತಿದೆ. ಈಗ ರಾಜ್ಯದಲ್ಲಿ ಉತ್ಪಾದನೆ ಯಾಗುತ್ತಿರುವ ಎಥೆನಾಲ್‌ ಸುಮಾರು 7.50 ಲಕ್ಷ ಲೀ. ಇದನ್ನು ಹೆಚ್ಚಿಸಲು ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಜೋಳ, ಗೋಧಿಯಿಂದಲೂ ಎಥೆನಾಲ್‌ ಉತ್ಪಾದನೆಗೆ ಎಂಆರ್‌ಪಿಎಲ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. 

ಪೆಟ್ರೋಲ್‌ಗೆ ಶೇ.10ರಷ್ಟು ಎಥೆನಾಲ್‌ ಮಿಶ್ರಣ ಗುರಿ
ಪ್ರಸ್ತುತ ಪೆಟ್ರೋಲ್‌ಗೆ ಶೇ.5ರಷ್ಟು ಎಥೆನಾಲ್‌ ಮಿಶ್ರಣಕ್ಕೆ ಅವಕಾಶವಿದೆ. ಈ ಮಿತಿಯನ್ನು ಶೇ.10ರಷ್ಟು ಏರಿಸಿ ಕಡ್ಡಾಯ ಮಾಡುವ ಬಗ್ಗೆ ಕೇಂದ್ರ ಸರಕಾರ ಉತ್ಸುಕವಾಗಿದೆ. ವಾಹನಗಳ ಕಾರ್ಯಕ್ಷಮತೆಗೆ ಇದರಿಂದ ಸಮಸ್ಯೆ ಇಲ್ಲ ಎಂಬುದು ಕೇಂದ್ರದ ವಾದ. ಎಥೆನಾಲ್‌ ಬಳಕೆ ಅಧಿಕವಾದಂತೆ ಕಚ್ಚಾ ತೈಲ ಆಮದು ಕಡಿಮೆಯಾಗಲಿದ್ದು, ತೈಲ ಬೆಲೆ ನಿಯಂತ್ರಣ ಸರಕಾರದ ಗುರಿ. 

Advertisement

ಪಂಜಾಬ್‌, ಹರಿಯಾಣ ಸಹಿತ ಕೆಲವೆಡೆ ಗೋಧಿ ಮತ್ತು ಇತರ ಬೆಳೆ ಕಟಾವಿನ ಬಳಿಕ ಹುಲ್ಲಿನ ವಿಲೇವಾರಿ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಬೆಂಕಿ ಕೊಡುತ್ತಾರೆ. ಇದು ವಾಯು ಮಾಲಿನ್ಯಕ್ಕೂ ಕಾರಣವಾಗುತ್ತದೆ. 2ಜಿ ಎಥೆನಾಲ್‌ ಸ್ಥಾವರಕ್ಕೆ ಈ ಹುಲ್ಲನ್ನು ಕಚ್ಚಾ ಸಾಮಗ್ರಿಯಾಗಿ ಬಳಸಬಹುದು. ಇತ್ತೀಚೆಗೆ ಐಒಸಿಎಲ್‌ ಒರಿಸ್ಸಾದಲ್ಲಿ 2ಜಿ ಎಥೆನಾಲ್‌ ಸ್ಥಾವರ ನಿರ್ಮಿಸಿದೆ. ಇದೇ ರೀತಿ ದಾವಣಗೆರೆ ಹಾಗೂ ಸುತ್ತಮುತ್ತ ಸಿಗುವ ಬೆಳೆಯ ಉಳಿಕೆಯನ್ನು ಪಡೆದು ಎಥೆನಾಲ್‌ ತಯಾರಿ ಎಂಆರ್‌ಪಿಎಲ್‌ ಗುರಿ.

40 ಎಕರೆ ಭೂಮಿ ನಿಗದಿ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಎಂಆರ್‌ಪಿಎಲ್‌ನ 2ಜಿ ಎಥೆನಾಲ್‌ ಉತ್ಪಾದನ ಸ್ಥಾವರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಸಂಬಂಧ ಸುಮಾರು 40 ಎಕ್ರೆ ಭೂಮಿಯನ್ನು ಕೆಐಎಡಿಬಿ ಒದಗಿಸಿದೆ. ತಂತ್ರಜ್ಞಾನದ ಆಯ್ಕೆ ಪ್ರಸ್ತುತ ಪ್ರಗತಿಯಲ್ಲಿದೆ.
ಎಂ. ವೆಂಕಟೇಶ್‌, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next