Advertisement

80 ಎಕರೆ ಭೂಮಿ ಸದ್ಬಳಕೆಗೆ ಪರ್ಯಾಯ ಯೋಜನೆ

11:14 PM Jan 04, 2021 | Team Udayavani |

ಬೈಕಂಪಾ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬಳಿಕ ಇದೀಗ ಮಂಗಳೂರು ಎಪಿಎಂಸಿ ಸ್ವಾವಲಂ ಬನೆಯತ್ತ ಕಣ್ಣು ಹಾಯಿಸಿದ್ದು ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಆದಾಯ ಗಳಿಕೆಗೆ ಮುಂದಾಗಿದೆ.

Advertisement

ಇದುವರೆಗೂ ಎಪಿಎಂಸಿಗಳಲ್ಲಿ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶವಿತ್ತು. ಆದರೆ ಕಾಯ್ದೆ ತಿದ್ದುಪಡಿಯಾದ ಬಳಿಕ ಬದಲಾದ ಪರಿಸ್ಥಿಗೆ ಅನುಗುಣವಾಗಿ ಮಂಗಳೂರು ಎಪಿಎಂಸಿಯಲ್ಲಿ ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ಸಂತೆ ವ್ಯಾಪಾರಕ್ಕೆ ವಿಶೇಷ ಯೋಜನೆ ರೂಪಿಸಲಾಗಿದೆ. ರೈತರು ತಾವು ಬೆಳೆದ ತರಕಾರಿ, ಹಣ್ಣು, ಸೊಪ್ಪು ಮತ್ತಿತರ ಬೆಳೆಗಳ ಮಾರಾಟಕ್ಕೆ ಉತ್ತೇಜನ ಸಹಿತ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ.

ಸ್ಥಳಾವಕಾಶದ ಸದುಪಯೋಗ
ಖಾಲಿ ಸ್ಥಳಾವಕಾಶವನ್ನು ಸದುಪಯೋಗಿಸಿಕೊಂಡು ರೈತರಿಗೆ ಅನುಕೂಲವಾಗುವಂತೆ ಮಾಡಲು ಎಪಿಎಂಸಿ ಚಿಂತಿಸಿದೆ. ಇದರಂತೆ ರೈತರು ತಾವು ಬಯಸಿದ್ದಲ್ಲಿ ವಾರದ ಎಲ್ಲ ದಿನಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಎಪಿಎಂಸಿ ಪ್ರಾಂಗಣದಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ರೈತರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಕೃಷಿಯ ಸಲಕರಣೆಗಳ ಮಾರಾಟ, ರೈತರು ನಿತ್ಯ ಬಳಸುವ ಸಾಮಗ್ರಿಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ಹೊಸ ಯೋಜನೆಯೂ ಇದರಲ್ಲಿ ಸೇರಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿಯ ಜಾಗದಲ್ಲಿ ಪಿಪಿಪಿ ಯೋಜನೆಯಲ್ಲಿ 10 ಸಾವಿರ ಚ.ಅ. ಕಾಂಪ್ಲೆಕ್ಸ್‌ ನಿರ್ಮಾಣ ಮಾಡಿ ಕೃಷಿ ಪೂರಕ ವಹಿವಾಟಿಗೆ ಅವಕಾಶ ನೀಡಿ ಆದಾಯ ಸಂಗ್ರಹದ ಉದ್ದೇಶ ಹೊಂದಿದೆ. ಇದರ ಜತೆಗೆ ದ.ಕ. ಜಿಲ್ಲೆಯೂ ಭಾರತಕ್ಕೆ ಮಾದರಿ ಆಗುವಂತೆ ಸ್ಥಳೀಯ ಕಾಫಿ ಸಂಸ್ಕರಣೆ, ಮೆಣಸು, ಹಳದಿ, ಶುಂಠಿ, ರಾಮಪತ್ರೆ, ಅನಾನಸು, ಹಲಸು ಮತ್ತಿತರ ವಸ್ತುಗಳಿಗೆ ಇಲ್ಲಿ ಸಂಸ್ಕರಣೆಗೆ ಅವಕಾಶಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರಿಸಲಾಗಿದೆ.

ಈಗಿರುವ ಬೈಕಂಪಾಡಿ ಪ್ರಾಂಗಣದಲ್ಲಿ ಆಸಕ್ತ ಹಣ್ಣು, ಹಂಪಲು, ತರಕಾರಿ ವ್ಯಾಪಾರಿಗಳಿಗೆ ಪ್ರತ್ಯೇಕ ಎರಡು ಎಕರೆಯಲ್ಲಿ ಮಾರುಕಟ್ಟೆ ಪ್ರಾಂಗಣ ಮಾಡುವ ನೀಲಿ ನಕಾಶೆ ಸಿದ್ಧಪಡಿಸಲಾಗಿದ್ದು, ಬೆಳಗಾವಿ ಮಾದರಿಯಲ್ಲಿ ತರಕಾರಿ, ಹಣ್ಣು ವ್ಯಾಪಾರಕ್ಕೆ ಅವಕಾಶ ನೀಡುವ ಯೋಜನೆ ಹೊಂದಿದೆ. ಎಪಿಎಂಸಿ ಭೂಮಿ ಇತರ ಬಳಕೆಗೆ ಹೋಗದಂತೆ ತಡೆಯಲು ಭೂಮಿಯ ಪರ್ಯಾಯ ಬಳಕೆಗೆ ಸಹಕಾರ ನೀಡುವುದಾಗಿ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದ್ದಾರೆ ಎಂದು ಮಂಗಳೂರು ಎಪಿಎಂಸಿ ಸಮಿತಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.

ಹಿಂದೆ ತನ್ನ ನಿಯಂತ್ರಣದಿಂದ ಶುಲ್ಕವನ್ನು ಸಂಗ್ರಹಿಸಿ ಸರಕಾರಕ್ಕೆ ನೀಡುತ್ತಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಏಕಸೌಮ್ಯವನ್ನು ಕಳೆದುಕೊಂಡಿದೆ. ಕೃಷಿಕರಿಗೆ ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಹಕ್ಕನ್ನು ನೀಡ ಲಾಗಿದೆ. ಜತೆಗೆ ಸಗಟು ವ್ಯಾಪಾರಸ್ಥರಿಂದ ಶುಲ್ಕದಲ್ಲಿಯೂ ಒಂದೂವರೆ ರೂ.ನಿಂದ 35 ಪೈಸೆಗೆ ರಾಜ್ಯ ಸರಕಾರ ಇಳಿಸಿತ್ತು. ಬಳಿಕ ಇದೀಗ ಶೇ. 1ರಷ್ಟು ಏರಿಕೆ ಮಾಡಿದೆ. ಹೀಗಾಗಿ ಎಪಿಎಂಸಿಯ ಸಮರ್ಪಕ ಬಳಕೆಗೆ ರೂಪರೇಖೆ ಸಿದ್ಧವಾಗಿದೆ.

Advertisement

ಎಪಿಎಂಸಿಯಲ್ಲಿ ಸಗಟು ವ್ಯಾಪಾರಸ್ಥರು ಈಗಲೂ ಸ್ಥಳಾಂತರ ಆಗಿಲ್ಲ. ಹೀಗಾಗಿ ಗೋದಾಮು, ನಿವೇಶನಗಳು ಖಾಲಿ ಬಿದ್ದಿವೆ. ಸಂಪನ್ಮೂಲವನ್ನು ಸಂಗ್ರಹಿ ಸಲು ಸಂಸ್ಕರಣ ಘಟಕ, ಕೋಲ್ಡ್‌ ಸ್ಟೋರೇಜ್‌, ಪ್ಯಾಕೇಜಿಂಗ್‌, ಲಾಜಿಸ್ಟಿಕ್‌ ಸಹಿತ ಪರ್ಯಾಯ ಕೃಷಿ ಪೂರಕ ಚಟುವಟಿಕೆಗಳಿಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಪಿಪಿಪಿ ಮಾದರಿ ಬೃಹತ್‌ ಹವಾನಿಯಂತ್ರಿತ ಗೋದಾಮು ಸಹಿತ ಸಕಲ ವ್ಯವಸ್ಥೆ ಕೈಗೊಳ್ಳಲು ಎಪಿಎಂಸಿ ಉತ್ಸುಕತೆ ತೋರಿದೆ. ಇದಕ್ಕೆ ಉದ್ಯಮಿಗಳು, ಆಸಕ್ತರು ಮುಂದೆ ಬಂದರೆ ಸರಕಾರಿ ನಿಯಮದ ಪ್ರಕಾರ ಒಡಂಬಡಿಕೆಗೂ ಯೋಜನೆ ಸಿದ್ಧಗೊಳ್ಳುತ್ತಿದೆ. ಅಲ್ಲದೆ ಕೃಷಿ ಮೇಳದಂತಹ ರೈತ ವರ್ಗಕ್ಕೆ ಬೇಕಾಗುವ ಚಟುವಟಿಕೆ ಹಮ್ಮಿಕೊಳ್ಳುವ ಬಗ್ಗೆ ಸಮಿತಿ ಉತ್ಸುಕವಾಗಿದೆ.

80 ಎಕರೆ ಭೂಮಿ ಬಳಕೆಗೆ ಮನವಿ
ಸುಮಾರು 80 ಎಕರೆ ಭೂಮಿಯನ್ನು ಮಂಗಳೂರು ಎಪಿಎಂಸಿಯ ಪರ್ಯಾಯ ವಹಿವಾಟಿಗೆ ಬಳಸಿಕೊಳ್ಳಲು ಆಡಳಿತ ಸಮಿತಿ ಸರಕಾರಕ್ಕೆ ಮನವಿ ಸಲ್ಲಿಸಿದೆ. ತಜ್ಞರಿಂದ ಬೇಡಿಕೆ ಮತ್ತು ಮಾರ್ಕೆಟ್‌ ಸರ್ವೇಯ ವರದಿ ಬಂದ ಅನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸ್ಥಳೀಯವಾಗಿ ರೈಲ್ವೇ, ಹೆದ್ದಾರಿ, ವಿಮಾನ ನಿಲ್ದಾಣ ಸಹಿತ ಪ್ರಮುಖ ಸಂಪರ್ಕ ಸೌಲಭ್ಯಗಳನ್ನು ಬಳಸಿಕೊಂಡು ಎಪಿಎಂಸಿ ಸಶಕ್ತೀಕರಣಕ್ಕಾಗಿ ನೂತನ ಯೋಜನೆಗಳಿಗೆ ಸರಕಾರ ಅನುಮೋದಿಸುವ ಭರವಸೆಯನ್ನು ಸಮಿತಿ ಹೊಂದಿದೆ.

ಮಾದರಿ ಪ್ರಾಂಗಣ ನಿರ್ಮಾಣ
ಕೃಷಿಕರಿಗಾಗಿ ಸರಕಾರ ಭೂಮಿಯನ್ನು ರೈತರಿಂದ ಪಡೆದು ಎಪಿಎಂಸಿ ನಿರ್ಮಿ ಸಿದೆ. ಯಾವುದೇ ಕಾರಣಕ್ಕೂ ಇತರ ಚಟುವಟಿಕೆಗೆ ನೀಡುವುದಿಲ್ಲ. 80 ಎಕರೆ ಈ ಪ್ರಾಂಗಣ ಸುಸಜ್ಜಿತ ಸಂಪರ್ಕ ಸೌಲಭ್ಯ ಹೊಂದಿದ್ದು, ರಾಜ್ಯದಲ್ಲೇ ಮಾದರಿ ಪ್ರಾಂಗಣವಾಗಿ ರೂಪಿಸುತ್ತೇವೆ. ಜತೆಗೆ ಕೃಷಿ, ಉಪ ಉತ್ಪನ್ನ ಹಾಗೂ ಹಣ್ಣು ತರಕಾರಿ ಕೆಡದಂತೆ ದಾಸ್ತಾನು ಇಡುವ ಸ್ಟೋರೇಜ್‌ ನಿರ್ಮಾಣ ಮಾಡಲಾಗುವುದು.
-ಡಾ| ಭರತ್‌ ಶೆಟ್ಟಿ ವೈ., ಶಾಸಕರು

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next