Advertisement

ಪಕೋಡ ರಾಜಕೀಯ ಬದಲಿಗೆ ಪರ್ಯಾಯ ಶಕ್ತಿ ಅಗತ್ಯ

05:05 PM Feb 10, 2018 | Team Udayavani |

ರಾಯಚೂರು: ದೇಶದಲ್ಲಿ ಪಕೋಡ ರಾಜಕೀಯ ಹೆಚ್ಚುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಜನಪರ ಸಂಘಟನೆಗಳನ್ನೊಂಡ ಶಕ್ತಿಯ ಅಗತ್ಯವಿದೆ ಎಂದು ಬೆಂಗಳೂರಿನ ಪ್ರಗತಿಪರ ಚಿಂತಕ ಶಿವಸುಂದರ ಟೀಕಿಸಿದರು. ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜನಾಂದೋಲನ ಮಹಾಮೈತ್ರಿಯಿಂದ ಶುಕ್ರವಾರ ಆಯೋಜಿಸಿದ್ದ ಜಾಗೃತ ಮತದಾರರ ಸಮಾವೇಶದಲ್ಲಿ ಪರ್ಯಾಯ ರಾಜಕಾರಣದ ಮುನ್ನೋಟ ಕುರಿತು ಮಾತನಾಡಿದರು.

Advertisement

ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ, ಮೂರು ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ಈಗ ಪಕೋಡ ಮಾಡುವುದು ಒಂದು ಕೆಲಸ ಎಂದು ಲೇವಡಿಯಾಗಿ ಮಾತನಾಡುತ್ತಿದ್ದಾರೆ. ಹೈ-ಕ ಭಾಗದ ಕೂಲಿ ಕಾರ್ಮಿಕರು ದುಡಿಯಲು ವಲಸೆ ಹೋಗುವ ಪರಿಸ್ಥಿತಿ ತಪ್ಪುತ್ತಿಲ್ಲ. ಜನರ ಹೆಸರಿನಲ್ಲಿ ಪ್ರಮಾಣ ಮಾಡುವ ಅಧಿ ಕಾರಕ್ಕೆ ಬರುವ ಪಕ್ಷಗಳು ಜನ ಹಿತಾಸಕ್ತಿಯನ್ನೇ ಕಡೆಗಣಿಸುತ್ತೇವೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂಥ ಪರ್ಯಾಯ ಶಕ್ತಿ ರೂಪಿಸಿರುವ ಅಗತ್ಯವಿದೆ.

ಜನಪರ ಕಾಳಜಿ ಹೊಂದಿ ಜನ್ಮತಾಳಿರುವ ಜನಶಕ್ತಿಯಿಂದ ಅನ್ಯಾಯ ತಡೆಗಟ್ಟಲು ಸಾಧ್ಯ ಎಂಬ ವಿಶ್ವಾಸವಿದೆ. ಜನ ಕೂಡ ಪರ್ಯಾಯ ಶಕ್ತಿಗೆ ಅಧಿಕಾರ ಕೊಡುವ ಮೂಲಕ ಹೋರಾಟಗಳಿಗೆ ಧ್ವನಿಯಾಗಬೇಕು ಎಂದು ವಿನಂತಿಸಿದರು. ಜಿಲ್ಲೆಯ ಅಭಿವೃದ್ಧಿ ಅವಲೋಕನ ಕುರಿತು ಟಿಯುಸಿಐ ರಾಜ್ಯಾಧ್ಯಕ್ಷ ಆರ್‌. ಮಾನಸಯ್ಯ ಮಾತನಾಡಿ, ಜನಾಂದೋಲನ ಮಹಾಮೈತ್ರಿ ಹುಟ್ಟಿಕೊಂಡಿರುವುದು ಕೃಷಿಕರ, ಕೂಲಿ ಕಾರ್ಮಿಕರ, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು. ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಕಾರ್ಪೋರೇಟ್‌ರ್‌ಗಳ ಬಾಲ ಬಡಿಯುತ್ತಿದ್ದು, ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸುತ್ತಿವೆ ಎಂದು ಟೀಕಿಸಿದರು.

ರಾಜ್ಯವನ್ನು ಆಳುತ್ತಿರುವ ಹಿಂದೆ ಆಳಿರುವ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮನಸ್ಥಿತಿ ಒಂದೇ. ಜಿಲ್ಲೆಯಲ್ಲಿ ಹೆಚ್ಚುವರಿ ಭೂಮಿ ಇದ್ದರೂ ಭೂ ಹೀನರಿಗೆ ನೀಡಲಾಗುತ್ತಿಲ್ಲ. ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲೆಯ ಒಬ್ಬ ಶಾಸಕರು ಕೂಡ ಧ್ವನಿ ಎತ್ತದಿರುವುದು ದುರಂತ ಎಂದರು. 

ಜನಸಂಗ್ರಾಮ ಪರಿಷತ್‌ನ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಮಾತನಾಡಿ, ಇಡೀ ಜೀವನವನ್ನೇ ಹೋರಾಟದಲ್ಲಿ ಕಳೆದಿದ್ದೇವೆ. ಆದರೆ, ಬದಲಾವಣೆ ತರಲು ಆಗಿಲ್ಲ. ಹೀಗಾಗಿ ನಾವೇ ಶಕ್ತಿ ಪಡೆಯಲು ರಾಜಕಾರಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು. ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ ಮಾತನಾಡಿ, ಲಿಂಗಸುಗೂರು ಕ್ಷೇತ್ರದಿಂದ ಆರ್‌. ಮಾನಸಯ್ಯ, ರಾಯಚೂರು ನಗರ ಕ್ಷೇತ್ರದಿಂದ ಡಾ| ವಿ.ಎ ಮಾಲಿಪಾಟೀಲ್‌ ನಮ್ಮ ಜನಶಕ್ತಿ ಅಭ್ಯರ್ಥಿಗಳಾಗಿದ್ದಾರೆ. ಉಳಿದ ಕ್ಷೇತ್ರಗಳಿಗೆ
ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. 

Advertisement

ಸಿಪಿಐ(ಎಂ) ಬಿ.ರುದ್ರಯ್ಯ, ವಿವಿಧ ಸಂಘಟನೆಗಳ ಮುಖಂಡ ಮಹ್ಮದ್‌ ತಮೀಜುದ್ದೀನ್‌, ಕೆ.ರಾಮಕೃಷ್ಣ, ಮೋಕ್ಷಮ್ಮ, ವಿದ್ಯಾಪಾಟೀಲ್‌, ಕೆ.ನಾಗಲಿಂಗಸ್ವಾಮಿ, ಜೆ.ಬಿ.ರಾಜು, ಲಕ್ಷ್ಮಣಗೌಡ ಕಡಗಂದೊಡ್ಡಿ, ಖಾಜಾ ಅಸ್ಲಾಂ ಮಹ್ಮದ್‌, ರವೀಂದ್ರನಾಥ ಪಟ್ಟಿ, ಅಜೀಜ್‌ ಜಾಹಗೀರದಾರ, ಬಿ.ಬಸವರಾಜ, ಜಿ.ಅಮರೇಶ ಇತರರಿದ್ದರು. ಎಂ.ಆರ್‌.ಬೇರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next