Advertisement

ದುಬೈ ಪ್ರವಾಸಕ್ಕೂ, ರಾಯಣ್ಣ ಬ್ರಿಗೇಡ್‌ಗೂ ಪರ್ಯಾಯ ಶಕ್ತಿ ಐತಾ?

06:37 AM May 14, 2017 | |

ಸಿದ್ರಾಮಯ್ಯಗ ಪೂರ್ಣ ಅಧಿಕಾರ ಕೊಟ್ರ, ಮುಂದಿನ ಸಾರಿನೂ ಗೆದ್ರ, ಕಾಂಗ್ರೆಸ್‌ ಐ ಹೋಗಿ ಸಿದ್ದು ಕಾಂಗ್ರೆಸ್‌ ಆಗೋ ಹೆದರಿಕಿ ಇದ್ದಂಗ ಐತಿ. ಹಿಂಗಾಗಿ ಖರ್ಗೆಯವರ್ನ ಕಳಿಸಿಕೊಡಬೇಕಂತ ಲೆಕ್ಕಾ ಹಾಕಿದ್ರೂ, ಏನ್‌ ಅಂತ ಕಳಸಬೇಕು ಅನ್ನೋ ಗೊಂದಲ ಸೋನಿಯಾ ಮೇಡಂಗ ಇದ್ದಂಗೈತಿ. 

Advertisement

ಈ ಸಾರಿ, ಶ್ರೀಮತಿ ಭಾಳ ದಿನಾ ಊರಾಗ ಉಳುದ್‌ ಬಂತು.ನನಗೂ ಮತ್ತ ದುಬೈ ಹೋಗುದು ಅವಕಾಶ ಬಂದಿತ್ತು. ಅದನ್ನ ಯಜಮಾನಿ¤ಗೆ ಹೇಳಿದೆ. ಗಂಡಾ ವಿದೇಶಕ್ಕ ಹೊಂಟಾನಂದ್ರ ಖುಷಿ ಪಡುದು ಬಿಟ್ಟು ಪ್ರಶ್ನೆ ಮಾಡಿದು. ಮತ್ಯಾಕ ಹೊಂಟಿ ಅಲ್ಲಿಗೆ ಹೊಳ್ಳಾ ಮಳ್ಳಾ ನಿನ್ನ ಕರೀತಾರನ ಅವರು, ಬ್ಯಾರೇ ಯಾರೂ ಇಲ್ಲನ ಅವರಿಗೆ ಅಂತ ಸೀದಾ ಪ್ರಶ್ನೆ ಕೇಳಾಕ ಶುರು ಮಡಿದು. ಈ ಸಾರಿ ಪಾರಿಜಾತ ಸಣ್ಣಾಟ ತೊಗೊಂಡು ಹೊಂಟೇವಿ ಅಂತ ಹೇಳಿದೆ. ಆದ್ರೂ ಯಜಮಾನಿ ಮನಸಿನ್ಯಾಗ ಏನೋ ಒಂದ್‌ ರೀತಿ ಸಂಶಯ ಇದ್ದಂಗಿತ್ತು. 

ಹೊಳ್ಳಾ ಮಳ್ಳಾ ದುಬೈಗೆ ಹೊಂಟಾನಂದ್ರ ಏನಿರಬೌದು ಇವನ ಕತಿ ಅನ್ನೋದು ಅಕಿ ಮನಸಿನ್ಯಾಗ ಹುಟ್ಟಿಕೊಂಡಂಗ ಕಾಣತೈತಿ. ಈಗ ಈಶ್ವರಪ್ಪ ಹೊಳ್ಳಾ ಮಳ್ಳಾ ರಾಯಣ್ಣ ಬ್ರಿಗೇಡ್‌ ಸಭೆ ಮಾಡಿಕೋಂತನ ಯಡಿಯೂರಪ್ಪನ ನಮ್‌ ಮುಂದಿನ ಸಿಎಂ ಅಂತ ಹೇಳಕೊಂತ ತಿರುಗ್ಯಾಡಾಕತ್ತಾರು. ಆದ್ರೂ ಯಡಿಯೂರಪ್ಪಗ ಈಶ್ವರಪ್ಪ ಮ್ಯಾಲಿಂದ ಮ್ಯಾಲ ಸಭೆ ಮಾಡುದು ನೋಡಿದ್ರ ಒಂದು ಪರ್ಯಾಯ ಶಕ್ತಿ ಹುಟ್ಟಿ ಹಾಕಾಕತ್ತಾರು ಅನ್ನೋ ಅನುಮಾನ ಯಡಿಯೂರಪ್ಪಗ  ಶುರುವಾದಂಗೈತಿ.ಸಾರ್ವಜನಿಕ ಜೀವನದಾಗ ಏಕ ವ್ಯಕ್ತಿ ಅಧಿಕಪತ್ಯ ಆರಂಭ ಆದ್ರ,ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಂಗ ಆಕ್ಕೇತಿ. ಹಿಂಗಾಗಿ ಪ್ರಜಾಪ್ರಭುತ್ವ ಜೀವಂತ ಇರಬೇಕು ಅಂತ ರಾಜಕಾರಣದಾಗ ಪರ್ಯಾಯ ಶಕ್ತಿಗಳು ಹುಟ್ಟಿಕೊಬೇಕು. ಏಕ ವ್ಯಕ್ತಿ ಅಧಿಕಾರಕ್ಕೆ ಬ್ರೇಕ್‌ ಹಾಕಬೇಕು. ಅದು ಬಿಜೆಪ್ಯಾಗ ವ್ಯವಸ್ಥಿತವಾಗಿ ನಡ್ಯಾಕತ್ತೇತಿ ಅನಸೆôತಿ. ಯಡಿಯೂರಪ್ಪ ಬಿಜೆಪಿ ಬಿಟ್ಟು ಹ್ವಾದ ಮ್ಯಾಲ, ಅವರು ಎಷ್ಟ ಅಂದ್ರೂ ಮನಿ ಬಿಟ್ಟ ಹ್ವಾದ ಮಗಾ. ಅವರು ಮನಿ ಬಿಟ್ಟಾಗ ಕಷ್ಟಾನೋ ಸುಖಾನೋ ಉಳದಾರು ಬಿಜೆಪಿನ ಜೀವಂತ ಇಟ್ಕೊಂಡು ಬಂದಾರು. ಮನಿ ಬಿಟ್ಟು ಹ್ವಾದ ಮಗಾ ಜೀವನಾ ನಡಸೂದು ಕಷ್ಟಾ ಆಗಿ ವಾಪಸ್‌ ಬಂದು ಈಗೂ ನಾ ಹೇಳಿದಂಗ ಎಲ್ಲಾ ನಡಿಬೇಕಂದ್ರ  ಮನ್ಯಾಗ ಇದ್ದ ಅಣ್ತಮಂದ್ರು ಸುಮ್ನ ಇರ್ತಾರಾ ? ಯಡಿಯೂರಪ್ಪ  ರಾಜ್ಯ ಬಿಜೆಪ್ಯಾರಿಗಷ್ಟ ಅಲ್ಲ. 

ಕೇಂದ್ರದ ನಾಯಕರಿಗೂ ಡೇಂಜರ್‌ ಅನಸಾಕ ಶುರುವಾತು ಅನಸೆôತಿ. ಹಿಂಗಾಗೇ ರಾಯಣ್ಣನ ಹೆಸರ ಮ್ಯಾಲ ಈಶ್ವರಪ್ಪನ ಕೈಯಾಗ ಖಡ್ಗ ಕೊಟ್ಟು ರಾಜ್ಯಾ ಸುತ್ತಾಕ ಹಚ್ಯಾರು ಅನಸೆôತಿ. ಮುಂದಿನ ಎಲೆಕ್ಷನ್ಯಾಗ ತಾವು ಏನಕ್ಕೇನಿ ಅಂತ ಈಶ್ವರಪ್ಪ ಅವರಿಗೆ ಗೊತ್ತೈತೊ ಇಲ್ಲೋ. ಆದ್ರ, ಯಡಿಯೂರಪ್ಪಗ ಪರ್ಯಾಯ ನಾನ ಅನ್ನೋ ರೀತಿ ನಡಕೊಳ್ಳಾಕತ್ತಾರು. ಆದ್ರ, ಯಡಿಯೂರಪ್ಪಗ ಕೈಯಾಗ ಖಡ್ಗ ಹಿಡುದು ಯುದ್ದಾ ಮಾಡಾರ್ಕಿಂತ, ಕೈಯಾಗ ಜಪ ಮಾಲಿ ಹಿಡಿಕೊಂಡು ತಿರಗ್ಯಾಡಾರ ಬಗ್ಗೆ ಹೆದರಿಕಿ ಇದ್ದಂಗ ಕಾಣತೈತಿ. ಅವ್ಯಾವು ಯಡಿಯೂರಪ್ಪ  ಕಾಣೋದಿಲ್ಲ ಅಂತೇನಿಲ್ಲಾ. ಕಂಡ್ರೂ  ಮಾಲಿ ಹಿಡಕೊಂಡು ಮಂತ್ರಾ ಹೇಳಾರ ಕೂಡ ನೇರವಾಗಿ ಯುದ್ದಾ ಮಾಡಾಕ ಆಗದನ. ರಾಯಣ್ಣನ ಖಡ್ಗ ಹಿಡಕೊಂಡಿರೋ ಈಶ್ವರಪ್ಪನ ಕೂಡ ಹೊಡದ್ಯಾಡುವಂಗಾಗೇತಿ. 

ನಮ್ಮದೂ ಈಶ್ವರಪ್ಪನಂಗ ಆಗೇತಿ ದುಬೈ ಕರ್ನಾಟಕಾ ಮಾಡಾಕ ಹೋದ್ರೂ, ಶ್ರೀಮತಿಗೆ ಬ್ಯಾರೇನ ಕಾಣತೈತಿ. ಅದರಾಗ ದುಬೈ ಮಟಾ ಹೋಗಿ ದೊಡ್ಡ ದೊಡ್ಡ ಬಿಲ್ಡಿಂಗ್‌ ನೋಡಿ ಸುಮ್ನ ಬರಾಕ್‌ ಅಕ್ಕೇತಿ, ಚಸ್ಮಾ ಹಾಕ್ಕೊಂಡು ಸಿಂಗಲ್‌ ಪೋಜ್‌ ಕೊಟ್ಟು ಫೋಟೊ ತೆಗಿಸಿಕೊಂಡು, ಫೇಸ್‌ ಬುಕ್ಕಿಗೆ ಹಾಕಿದೆ. ಫೋಟೊ ನೋಡಿದಾರು, ಸೂಪರ್‌ ಕಾಣಾತಿರಿ ಹೀರೋ ಥರಾ ಅಂತ ಕಾಮೆಂಟ್‌ ಹಾಕಿದ್ದು ಶ್ರೀಮತಿ ನೋಡಿ, ಮತ್ತಷ್ಟು ರೊಚ್ಚಿಗೇಳುವಂಗಾತು. ರಾಯಣ್ಣ ಬ್ರಿಗೇಡ್‌ ಸಮಾವೇಶದಾಗ ಈಶ್ವರಪ್ಪನ ಅಭಿಮಾನಿ ಮುಂದಿನ ಸಿಎಂ ನೀವ ಅಂದ್ರ ಯಡಿಯೂರಪ್ಪಗ ಹೆಂಗ್‌ ಆಗಬಾರದು? ಹೆಣ್ಮಕ್ಕಳಿಗೆ ಹೆಂಗ ಅಂದ್ರ ಮದುವಿ ಆಗೋ ಮೊದುÉ ತನ್ನ ಗಂಡಾ ಎಲ್ಲಾರಕಿಂತ ಚಂದ ಇರಬೇಕು ಅಂತ ಬಯಸ್ತಾರು. ಮದುವಿ ಆದಮ್ಯಾಲ ಗಂಡ ಚಂದ ಕಂಡ್ರನ ಕಷ್ಟಾ ಅನಕೋತಾರು ಅನಸೆôತಿ. 

Advertisement

ಇಷ್ಟು ದಿನಾ ರಾಯಣ್ಣನ ಶಕ್ತಿ ಯಾರಿಗೂ ಗೊತ್ತಿರಲಿಲ್ಲಾ ಅನಸೆôತಿ. ಸಿದ್ದರಾಮಯ್ಯ ಸಿಎಂ ಆದಮ್ಯಾಲ ರಾಯಣ್ಣಗ ಡಿಮ್ಯಾಂಡ ಜಾಸ್ತಿ ಬಂತು. ಯಡಿಯೂರಪ್ಪ ಬಸವಣ್ಣನ ವಚನಾ ಹೇಳಿ ಹೆಂಗೋ ಜನರ್ನ ಹಿಡಿತದಾಗ ಇಟಕೊಳ್ಳೊ ಕೆಲಸ ಮಾಡಿದ್ದ, ಆದ್ರ, ಈಗ ರಾಯಣ್ಣನ ಹೆಸರಿನ್ಯಾಗ ಈಶ್ವರಪ್ಪ ನೇರ ಯುದ್ದಾ ಶುರು ಮಾಡಿದ್ದು, ಯಡಿಯೂರಪ್ಪನವರ ಶರಣ ತತ್ವ ವಕೌìಟ್‌ ಆದಂಗ ಕಾಣವಾಲು¤. ಆದ್ರೂ, ಯಡಿಯೂರಪ್ಪ ಬಸವಣ್ಣನ ಹೆಸರು ಬಿಟ್ಟು ಏನ ಮಾಡಾಕ ಹೋದ್ರು ಕೆಲಸ ಆಗೋದಿಲ್ಲ  ಅನ್ನೋ ಸತ್ಯಾ ಗೊತ್ತಿದ್ದಂಗ ಐತಿ. ಇದರ ನಡಕ ಸಿದ್ದರಾಮಯ್ಯ ಬ್ಯಾರೆ ಸರ್ಕಾರಿ ಕಚೇರ್ಯಾಗ ಬಸವಣ್ಣನ ಫೋಟೊ  ಹಾಕಿಸಿ, ತಾವೂ ಬಸವಣ್ಣನ ವಾರಸ್ಥಾರು ಅನ್ನೋ ರೀತಿ ಬಿಂಬಸಾಕ ಶುರು ಮಾಡ್ಯಾರು. ಇಷ್ಟ ಅಲ್ಲದ ಪ್ರಧಾನಿ ಮೋದಿನೂ ಬಸವಣ್ಣನ ಜಪ ಮಾಡಿರೋದು, ಯಡಿಯೂರಪ್ಪಗ ಲಾಭಕ್ಕಿಂತ ನಷ್ಟಾನ ಜಾಸ್ತಿ ಅನಸೆôತಿ. ಯಡಿಯೂರಪ್ಪ ಇಲ್ಲದನ ಬಸವಣ್ಣನ ಅನುಭವ ಮಂಟಪಕ್ಕ ಏನ ಬೇಕೋ ಅದನ್ನ ನಾನ ಕೊಡ್ತೀನಿ ಅಂತ ಹೇಳಿ, ಮೋದಿ ಸಾಹೇಬ್ರು ತಾವೂ ಬಸವಣ್ಣನ ಕುಲ ಬಾಂಧವರು ಅಂತ ಹೇಳಿ ಬಿಟ್ರ. ಯಡಿಯೂರಪ್ಪ ಇಲ್ಲದನೂ ಬಿಜೆಪ್ಯಾರು. ಉತ್ತರ ಕರ್ನಾಟಕದಾಗ ಅರಾಮ ಶರಣರ ವಚನ ಹೇಳಿಕೋಂತ ತಿರಗ್ಯಾಡಬಹುದು. 

ಅದರ ಸಲುವಾಗೇ ಸಿದ್ರಾಮಯ್ಯ ಕನಕದಾಸರ ಪದದ ಜೋಡಿ, ಬಸವಣ್ಣನ ವಚನ ಹೇಳಾಕ ಪಾಟೀಲÅನ್ನ ಕೆಪಿಸಿಸಿಗೆ ಕರಕೊಂಡು ಬಂದು ಕುಂದ್ರಿಸಿದ್ರ, ಈ ಕಡೆ ದಾಸರ ಪದ ಆ ಕಡೆ ಬಸವಣ್ಣನ ವಚನ ಹೇಳಿ ಅರಾಮಾಗಿ ಮತ್ತೂಂದು ಸಾರಿ ಅನುಭವ ಮಂಟಪದಾಗ ಕುಂತು ಉಡುಪಿ ಶ್ರೀಕೃಷ್ಣನ ವಲಿಸಿಕೊಬೌದು ಅನ್ನೋ ಲೆಕ್ಕಾಚಾರ ಹಾಕಿದಂಗ ಕಾಣತೈತಿ. ಸಿದ್ರಾಮಯ್ಯನ ರಾಜಕೀಯ ಲೆಕ್ಕಾಚಾರ ಕೆಂಪೇಗೌಡರ ಕುಲ ಬಾಂಧವರಿಗೆ ನುಂಗಲಾರದ ತುತ್ತಾಗೇತಿ. ಯಾಕಂದ್ರ ಮುಂದಿನ ರಾಜಕೀಯ ಲೆಕ್ಕಾಚಾರ ಹಾಕ್ಕೊಂಡ ದೊಡ್ಡಗೌಡರ ಜೋಡಿ ಹಳೆ ದೋಸ್ತಿ ಮುಂದುವರೆಸಿರೋ ಸಿದ್ರಾಮಯ್ಯ, ಕಾಂಗ್ರೆಸ್‌ನ್ಯಾಗ ಡಿ.ಕೆ.ಶಿ ಅನ್ನೋ ಪರ್ಯಾಯ ಶಕ್ತಿ ಬೆಳಿದಂಗ ನೋಡಕೊಳ್ಳಾಕತ್ತಾರು. ಅಲ್ಲದ ಅಹಿಂದ ಹೆಸರಿನ್ಯಾಗ ಅಂಬೇಡ್ಕರೂ ನಮ್ಮ ಸಂಬಂಧಿಕರ ಅಂತ ಹೇಳಿಕೋಂತನ ಪರಮೇಶ್ವರ್ನ, ಖರ್ಗೆಯವರ್ನ ದೂರ ಇಟ್ಕೊಂಡು ಯುದ್ದಾ ಗೆಲ್ಲೋ ತಂತ್ರಾ ಹೂಡ್ಯಾರು ಅನಸೆôತಿ. ಹಿಂಗಾಗೆ ಹೈ ಕಮಾಂಡ್‌ ಸಿದ್ರಾಮಯ್ಯನ ತಂತ್ರಕ ಬ್ರೇಕ್‌ ಹಾಕಬೇಕು ಅಂತೇಳಿ, ತಾವು ಪಕ್ಷದ ಉಸ್ತುವಾರಿ ಅನ್ನೋದನ್ನ ಮರತು ವಿಜಿಟಿಂಗ್‌ ಪ್ರೊಫೆಸರ ಥರಾ ಬಂದು ಪಾಠ ಮಾಡೋ ಬದುÉ ತಾವ ಪಾಠ ಕೇಳಿ ಹೊಕ್ಕಿದ್ದ ದಿಗ್ವಿಜಯ್‌ ಸಿಂಗರನ್ನ ಬದಲಿಸಿ, ಹೊಸ ಉಸ್ತುವಾರಿ ಕಳಿಸಿಕೊಟ್ಟಾರು. 

ವೇಣುಗೋಪಾಲರು ತಾವು ವಿಜಿಟಿಂಗ್‌ ಪ್ರೊಫೇಸರ್‌ ಥರಾ ಬಂದು ಪಾಠ ಮಾಡಿ, ಪೇಮೆಂಟ್‌ ತೊಗೊಂಡು ಹೋಗೋದಿಲ್ಲ ಅನ್ನೋದನ್ನ ಬಂದು ಯಾಡ ದಿನದಾಗ ತೋರಿಸಿ ಹೋಗ್ಯಾರು. ತಾವು ಕರದ್ರ ಎದ್ದು ಓಡಿ ಬರ್ತಿದ್ದ ದಿಗ್ವಿಜಯ್‌ ಸಿಂಗ್‌ರಂಗ ಇವರೂ ಅಂತೇಳಿ ಸಿದ್ರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡಾಕ್‌ ಟ್ರಾಯ್‌ ಮಾಡಿದ್ರು. ಆದ್ರ, ವೇಣುಗೋಪಾಲರು ಕೊಳಲು ಊದದ ಎಲ್ಲಾರೂ ತಮ್ಮ ಹಂತೇಕನ ಬರುವಂಗ ಮಾಡಿದ್ರು. ಇದು ಸಿದ್ದರಾಮಯ್ಯಗ ಪರ್ಯಾಯ ಶಕ್ತಿ ಹುಟ್ಟಿ ಹಾಕೊ ಮೊದ್ಲನೇ ಹೆಜ್ಜೆ ಅಂತ ಅನಸೆôತಿ. 

ಅಲ್ಲದ ಕೆಪಿಸಿಸಿ ಅಧ್ಯಕ್ಷರೂ° ಅವರ ಹಿಡಿತದಾಗ ಇಡುವಂತಾ ಪರ್ಯಾಯ ಪೀಠ ಸ್ಥಾಪನೆ ಮಾಡಾಕ ಹೈ ಕಮಾಂಡ್‌ ಇಲ್ಲದಿರೋ ಸರ್ಕಸ್‌ ಮಾಡಾಕತ್ತೇತಿ. ಆದ್ರ, ಖರ್ಗೆಯವರ್ನ ರಾಜ್ಯಕ್ಕ ತಂದ್ರ ದಿಲ್ಯಾಗ ಮೋದಿನ ಎದುರ್ಸಾಕ ಯಾರೂ ಇಲ್ಲದಂಗ ಅಕ್ಕೇತಿ, ಐಪಿಎಲ್‌ ನ್ಯಾಗ ಮುಂಬೈ ಟೀಮ್‌ ಜೋಡಿ ಆರ್‌ಸಿಬಿ ಆಟಾ ಆಡಿದಂಗ ಅಕ್ಕೇತಿ. ಕಾಂಗ್ರೆಸ್‌ ಟೀಮ್‌ನ್ಯಾಗ ಘಟಾನುಘಟಿ ನಾಯಕರಿದಾರು.ಆದ್ರ, ಆಲ್‌ ರೌಂಡರ್‌ ಮೋದಿ ಮುಂದ ಯಾರಿಗೂ ಬ್ಯಾಟ್‌ ಬೀಸಾಕ ಬರವಾಲು¤. ಇರೋ ಒಬ್ರು ಖರ್ಗೆ ಸೆಂಚೂರಿ ಹೊಡದ್ರೂ ಮ್ಯಾಚ್‌ ಗೆಲ್ಲಾಕ್‌ ಆಗವಾಲು¤. ಐಪಿಎಲ್‌ ಇತಿಹಾಸದಾಗ ಅತಿ ಕಡಿಮೆ ರನ್‌ ಮಾಡಿ, ಟೂರ್ನಿಯಿಂದ ಹೊರಗ ಬೀಳ್ಳೋ ಪರಿಸ್ಥಿತಿ ನಿರ್ಮಾಣ ಆದಂಗ ಆಗೇತಿ. 

ದೇಶದಾಗ ಇರೋ ಒಂದು ದೊಡ್ಡ ರಾಜ್ಯಾನೂ ಅಧಿಕಾರ ಕಳಕೊಂಡ್ರ ಮುಂದ ಕಾಂಗ್ರೆಸ್‌ ಅನ್ನೋ ಟೀಮ್‌ ಐಪಿಎಲ್‌ನಿಂದ ಹೊರಗ ಹೋದಂಗ ಅಕ್ಕೇತಿ ಅನ್ನೋ ಹೆದರಿಕೆ ಅವರಿಗೆ ಕಾಡಾಕತ್ತೇತಿ ಅನಸೆôತಿ. ಸಿದ್ರಾಮಯ್ಯಗ ಪೂರ್ಣ ಅಧಿಕಾರ ಕೊಟ್ರ, ಮುಂದಿನ ಸಾರಿನೂ ಅವರ ನೇತೃತ್ವದಾಗ ಗೆದ್ರ, ಕಾಂಗ್ರೆಸ್‌ ಐ ಹೋಗಿ ಸಿದ್ದು ಕಾಂಗ್ರೆಸ್‌ ಆಗೋ ಹೆದರಿಕಿ ಹೈ ಕಮಾಂಡಿಗೆ ಇದ್ದಂಗ ಐತಿ. ಹಿಂಗಾಗಿ ಖರ್ಗೆಯವರ್ನ ಕಳಿಸಿಕೊಡಬೇಕಂತ ಲೆಕ್ಕಾ ಹಾಕಿದ್ರೂ, ಏನ್‌ ಅಂತ ಕಳಸಬೇಕು ಅನ್ನೋ ಗೊಂದಲ ಸೋನಿಯಾ ಮೇಡಂಗ ಇದ್ದಂಗೈತಿ. 

ಇವರಿಬ್ಬರ ನಡಕ ರಾಜ್ಯಕ್ಕೆ ನಾವ ಪರ್ಯಾಯ ಅಂತ  ಹೇಳಿ ದೊಡ್ಡಗೌಡ್ರು ಹಗಲು ರಾತ್ರಿ ಓಡ್ಯಾಡಾಕತ್ತಾರು. ಮಗನ್ನ ಹುಬ್ಬಳ್ಳಿಗೆ ಬಿಟ್ಟು ಅಲ್ಲಿ ಶಕ್ತಿ ಕೇಂದ್ರ ಸ್ಥಾಪನೆ ಮಾಡಾಕ ಹೊಂಟಾರು. ಕೆಂಪೇಗೌಡರ ಜೋಡಿ ಬಸವಣ್ಣನೂ ಇರಲಿ ಅಂತ ಪ್ಲಾನ್‌ ಹಾಕ್ಯಾರು. ಇದಿಷ್ಟ ಅಲ್ಲದ ಅಂಬೇಡ್ಕರನೂ ಇರಲಿ, ಪೈಗಂಬರನೂ ಬರಲಿ ಅಂತ ಅವರಿಗೂ ಅಧಿಕಾರ ಕೊಡ್ತಿವಿ ಅಂತ ಈಗಿಂದನ ಹೇಳಿಕೋಂತ ಹೊಂಟಾರು.  ತಂದಿ ಮಗಾ ಇಬ್ರು ರಾಜ್ಯದಾಗ ಅಧಿಕಾರ ಹಿಡ್ಯಾಕ ಓಡ್ಯಾಡಾಕತ್ತರ, ರೇವಣ್ಣವರು ಮನ್ಯಾಗ ತಮ್ಮದ ಅಧಿಕಾರ ನಡಿಬೇಕು ಅನ್ನಾರಂಗ ಮಗನ್ನ ಪರ್ಯಾಯ ಶಕ್ತಿಯಾಗಿ ಬೆಳಸಾಕ ಪ್ಲಾನ್‌ ಹಾಕ್ಯಾರು. ಅದು ಕುಮಾರಣ್ಣಗ ಕಂಟಕ ಅಕ್ಕೇತಿ ಅನ್ನೋ ಲೆಕ್ಕಾಚಾರದಾಗ ವಿಧಾನಸಭೆಗೆ ಇಬ್ರ ಚುನಾವಣೆಗೆ ನಿಲ್ಲೋದು ಅಂತ ಹೋದಲೆಲ್ಲಾ  ಮಂಗಳಾರತಿ ಮುಗದ್ರೂ ಮಂತ್ರ ಹೇಳಿ ಪೂಜಾ ಮುಗುಸುದು ಮರಿದಂಗ ಆಗೇತಿ. ಆದ್ರ, ಅವರ ಮಂತ್ರ ಬ್ಯಾರೆ ಯಾರಿಗೆ ಕೇಳಿದ್ರೂ ಪ್ರಯೋಜನ ಇಲ್ಲಾ. ಭವಾನಿ ಮೇಡಂಗೆ ಕೇಳಿದ್ರ ಏನಾದ್ರೂ ಕೆಲಸ ಆಗಬೌದು ಅನಸೆôತಿ. 

ರಾಜ್ಯ ರಾಜಕಾರಣದಾಗ ಪರ್ಯಾಯ ಶಕ್ತಿ ಹುಟ್ಟಿಕೊಳ್ಳೋದು ನಾನ ಎಲ್ಲಾ ಅನ್ನೋ ನಾಯಕರಿಗೆ ಎಷ್ಟು ಕಷ್ಟಾ ಆಗೇತೋ, ನಮ್ಮ ಯಜಮಾನಿ¤ಗೂ ಹಂಗ ಆಗೇತಿ ಅನಸೆôತಿ. ಈಶ್ವರಪ್ಪ ಬ್ರಿಗೇಡ್‌ ಸಮಾವೇಶ ಮಾಡಿದ್ರ, ರೇವಣ್ಣನ ಮಗ ಹುಣಸೂರಿಗೆ ಓಡಾಡಿದ್ರ, ಖರ್ಗೆಯವರು ವಾಪಸ್‌ ಬರ್ತಾರು ಅಂದ್ರ ನಾವ ಅನ್ನೋ ನಾಯಕರಿಗೆ ಒಂದ ರೀತಿ ಉಡ್ಯಾಗ ಕೆಂಡಾ ಕಟಗೊಂಡಂಗ ಅಂದಕೊಂಡಾರು. ದುಬೈಕ ಪಾರಿಜಾತ ಆಟಾ ಆಡಾಕ ಹೋದ್ರೂ, ಯಡಿಯೂರಪ್ಪನಂಗ ಯೋಚನೆ ಮಾಡೋ ಯಜಮಾನಿ¤ಗೆ ಹೆಂಗ್‌  ರಮಸಾಕ್‌ ಅಕ್ಕೇತಿ? ನಾಟಕ ಆಡಕ ಹೋದಾರು ದುಬೈದಾಗ ಸಾಮ್ರಾಜ್ಯ ಕಟ್ಟಾಕ ಆಕೈತ?

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next