Advertisement

ಜೀವನ ವಿಧಾನ ಬದಲಿಸಿಕೊಂಡು ಕೋವಿಡ್‌ ಜತೆ ಬಾಳ್ವೆ

11:46 PM Feb 21, 2022 | Team Udayavani |

ಸರ್ವವ್ಯಾಪಿಯಾದ, ಸಣ್ಣ, ಅಗೋಚರ ಶತ್ರು “ಕೊರೊನಾ ವೈರಸ್‌” ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ, ಆರೋಗ್ಯ ವ್ಯವಸ್ಥೆಗಳು, ಯುವಕರ ಶಿಕ್ಷಣ, ಆರ್ಥಿಕತೆ ಮತ್ತು ಸಮಾಜದ ಸಾಮಾಜಿಕ ವ್ಯವಸ್ಥೆಯ ಮೇಲೆ ಹಾನಿಯನ್ನುಂಟು ಮಾಡಿ ಈಗ ಸುಮಾರು ಎರಡು ವರ್ಷಗಳಾಗಿವೆ. ನನ್ನ ವೈದ್ಯಕೀಯ ಅನುಭವದಲ್ಲಿ ಕಳೆದ 50 ವರ್ಷಗಳಲ್ಲಿ ಬೇರೆ ಯಾವುದೇ ಸಾಂಕ್ರಾಮಿಕ ರೋಗವು ಸಮಾಜಕ್ಕೆ ಈ ರೀತಿಯ ಅಡ್ಡಿಯನ್ನು ಉಂಟುಮಾಡಿಲ್ಲ.

Advertisement

ಕಳೆದ 2 ವರ್ಷಗಳಲ್ಲಿ ವೈರಸ್‌ಗೆ ನಮ್ಮ ಪ್ರತಿಕ್ರಿಯೆಯೂ ಬದಲಾಗಿದೆ. ನಾವು ಮೊದಲ ಅಲೆಯಲ್ಲಿ ಸಂಪೂರ್ಣ ಅಪ ನಂಬಿಕೆ ಮತ್ತು ಗೊಂದಲದಿಂದ, 2ನೇ ಅಲೆಯಲ್ಲಿ ಭೀತಿ ಮತ್ತು ಸಂಕಟದಿಂದ ಮತ್ತು 3ನೇ ಅಲೆಯಲ್ಲಿ ಅದರ ಜತೆ ಬದುಕುವುದನ್ನು ಕಲಿತಿದ್ದೇವೆ.

ಇದು ಸಂಪೂರ್ಣವಾಗಿ ಹೊಸ ವೈರಸ್‌ ಆಗಿರುವುದರಿಂದ ವೈದ್ಯಕೀಯ ಮತ್ತು ವಿಜ್ಞಾನ ವಲಯಕ್ಕೆ ಇದನ್ನು ಹೇಗೆ ಎದುರಿಸಬೇಕು ಎಂಬ ಜ್ಞಾನ ಇರಲಿಲ್ಲ. ಹೀಗಾಗಿ ಮೊದಲ ಅಲೆಯಲ್ಲಿ ಇದು ಸಂಪೂರ್ಣ ಅಪನಂಬಿಕೆ ಮತ್ತು ಗೊಂದಲವಾಗಿತ್ತು. ಇದರಿಂದಾಗಿ ತೀವ್ರ ಲಾಕ್‌ಡೌನ್‌ಗಳು ಮತ್ತು ಪ್ರಯಾಣ ನಿಷೇಧಗಳಿಗೆ ಕಾರಣವಾಯಿತು. ಇದು ಗಮನಾರ್ಹ ನೋವು ಮತ್ತು ಲಕ್ಷಾಂತರ ಜನರು ಜೀವನೋಪಾಯವನ್ನು ಕಳೆದುಕೊಳ್ಳಲು ಕಾರಣವಾಯಿತು.

ವೈರಸ್‌ನ ಬಗ್ಗೆ ನಮಗೆ ಹೆಚ್ಚು ತಿಳಿದಿದ್ದರೂ ಲಸಿಕೆ ಲಭ್ಯವಿದ್ದರೂ ಮತ್ತು ಎರಡನೇ ಅಲೆಯ ಸಮಯದಲ್ಲಿ ಕೆಲವು ಚಿಕಿತ್ಸಾ ಶಿಷ್ಟಾಚಾರಗಳು ಜಾರಿಯಲ್ಲಿದ್ದರೂ ಈ ಸಂದರ್ಭದಲ್ಲಿ ನಾವು ಹೆಚ್ಚು ನೋವು ತಿಂದೆವು. ವೈರಸ್‌ನ ಡೆಲ್ಟಾ ರೂಪಾಂತರವು ಅತ್ಯಂತ ಕ್ರೂರವಾಗಿತ್ತು ಮತ್ತು ಇಡೀ ಆರೋಗ್ಯ ವ್ಯವಸ್ಥೆಯನ್ನು ಗಮನಾರ್ಹವಾಗಿ ಧ್ವಂಸಗೊಳಿಸಿ ತಲ್ಲದೇ, ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿತು. ಇದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಕಾಲ ಬೇಕಾಯಿತು. 2ನೇ ಅಲೆ ಹೋದರೂ ಭಯದ ಭಾವನೆ ಇತ್ತು,  ಸಮಾಜದಲ್ಲಿ ಭೀತಿ ಮತ್ತು ಅಪಾರ ಸಂಕಟ ಹಾಗೇ ಮನೆ ಮಾಡಿತ್ತು.

2ನೇ ಅಲೆ ಹೋಗಿ ನಾವು ಸಮಾಧಾನವಾಗಿ ಉಸಿರಾಡುತ್ತಿದ್ದಾಗ ಒಮಿಕ್ರಾನ್‌ನೊಂದಿಗೆ 3ನೇ ಅಲೆಯು ಕಾಳ್ಗಿಚ್ಚಿನಂತೆ ದೇಶಾದ್ಯಂತ ಬೀಸಿತು. ಆದರೆ ಭರವಸೆಯ ರೇಖೆ ಏನೆಂದರೆ ಹೆಚ್ಚು ಜನ ಲಸಿಕೆ ಹಾಕಿಸಿಕೊಂಡಿದ್ದರಿಂದ ಮತ್ತು ಬಹುತೇಕ ಮಂದಿ ಕೊರೊನಾಗೆ ತುತ್ತಾಗಿ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದರಿಂದ ಹೆಚ್ಚಾಗಿ ಇದು ಕಾಡಲಿಲ್ಲ. ಮರಣ ಪ್ರಮಾಣವೂ ಜಾಸ್ತಿಯಾಗಿರ‌ಲಿಲ್ಲ.

Advertisement

ಈಗ ನಾವು ಕೊರೊನಾ ಬಗ್ಗೆ ಭಯವಿಲ್ಲದೇ, ಅದಕ್ಕೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು. ಆದರೆ ಯಾವುದೇ ಕಾರಣಕ್ಕೂ ಮುಂಜಾಗ್ರತ ಕ್ರಮಗಳನ್ನು ಕೈಬಿಡ ಬಾರದು. ಈಗಷ್ಟೇ ಅಲ್ಲ, ಹಿಂದಿನಿಂದಲೂ ಮನುಷ್ಯರು ಹೊಂದಿಕೊಂಡು ಬಾಳುವುದನ್ನು ಬೇಗನೇ ಕಲಿಯುತ್ತಾರೆ. ನಮ್ಮದು ಈ ಹಿಂದೆ ಯುದ್ಧಗಳು, ನೈಸರ್ಗಿಕ ವಿಕೋಪಗಳು ಅಥವಾ ಸಾಂಕ್ರಾಮಿಕ ರೋಗಗಳಂಥ ಸಂಕಷ್ಟಗಳನ್ನು ದಾಟಿ ಬಂದಂಥ ಸಮಾಜವಾಗಿದೆ.

2ನೇ ಮಹಾಯುದ್ಧದಲ್ಲಿ ಆದ ಭಾರೀ ಹಾನಿಯ ಅನಂತರವೂ ಜಪಾನ್‌ ಮತ್ತು ಐರೋಪ್ಯ ದೇಶಗಳು ತಮ್ಮ ದೇಶಗಳನ್ನು ಮರು ನಿರ್ಮಾಣ ಮಾಡಿಕೊಂಡು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ.

70ರ ದಶಕದಲ್ಲಿ ಉಗ್ರರು ವಿಮಾನಗಳ ಮೇಲೆ ಕಣ್ಣಿಟ್ಟಿದ್ದರಿಂದ ನಾವು ವಿಮಾನ ನಿಲ್ದಾಣಗಳಲ್ಲಿ ಅದ್ಭುತ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಆದರೆ ಇದು ಜನರಿಗೆ ಕಿರಿಕಿರಿಯಾಗುತ್ತಿತ್ತು. ಆದರೆ ನಾವು ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಹೊಂದಿಕೊಂಡಿದ್ದೇವೆ.

80ರ ದಶಕದಲ್ಲಿ ಏಡ್ಸ್‌ ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗ ಜನರು ಈ ಬಗ್ಗೆ ಹೆದರುತ್ತಿದ್ದರು. ಹಾಗೆಯೇ ರೋಗಿಗಳಿಗೆ ಹೆಚ್ಚಿನ ಕಳಂಕವನ್ನು ಅಂಟಿಸಲಾಯಿತು. ಆದಾಗ್ಯೂ, ರೋಗದ ಹರಡುವಿಕೆಯನ್ನು ತಡೆಗಟ್ಟಲು ಸಾರ್ವತ್ರಿಕ ಮುನ್ನೆಚ್ಚರಿಕೆಗಳನ್ನು ಅಂಗೀಕರಿಸಲಾಯಿತು ಮತ್ತು ಪರಿಣಾಮಕಾರಿ ಚಿಕಿತ್ಸಾ ಶಿಷ್ಟಾಚಾರಗಳನ್ನು ಅಳವಡಿಸಿ ಕೊಂಡಿದ್ದರಿಂದ ಅನಂತರದ ದಿನಗಳಲ್ಲಿ ಎಚ್‌ಐವಿ ಭಯ ಅಥವಾ ಕಳಂಕದ ಪ್ರತಿಕ್ರಿಯೆಯನ್ನು ಉಂಟುಮಾಡಲಿಲ್ಲ.

ಭವಿಷ್ಯದಲ್ಲಿ ಕೋವಿಡ್‌ ಸಾಂಕ್ರಾಮಿಕವನ್ನು ಎದುರಿಸುವ ಸಲುವಾಗಿ ನಮ್ಮ ಜೀವನ ವಿಧಾನದಲ್ಲಿ ಇದೇ ರೀತಿಯ ಬದಲಾವಣೆಯ ಅಗತ್ಯವಿದೆ. ಹಾಗೆಯೇ ಇದು ಸದ್ಯದಲ್ಲೇ ಎಂಡೆಮಿಕ್‌ ಆಗಲಿದೆ ಎಂಬ ಭರವಸೆಯೂ ಇದೆ.

ಗಮನಾರ್ಹ ಲಾಕ್‌ಡೌನ್‌ಗಳು, ಇತರ ನಿರ್ಬಂಧಗಳು ಮತ್ತು ಪ್ರಯಾಣ ನಿಷೇಧಗಳೊಂದಿಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದ ಅನೇಕ ದೇಶಗಳು ಕೋವಿಡ್‌ನೊಂದಿಗೆ ಜೀವಿಸುವ ಕುರಿತಂತೆ ತಮ್ಮ ನೀತಿಗಳ ಬಗ್ಗೆ ಮರು ಚಿಂತನೆ ನಡೆಸುತ್ತಿವೆ.

ಸಮಾಜವು ಮುಂದುವರಿಯಲು ನಾವು ಜೀವನ ಮತ್ತು ಜೀವನೋಪಾಯದ ನಡುವೆ ಸಮತೋಲನವನ್ನು ಸಾಧಿಸ ಬೇಕಾಗಿದೆ. ಯುಕೆ, ಐರೋಪ್ಯ  ರಾಷ್ಟ್ರಗಳು ಮತ್ತು ಅಮೆರಿಕದಂಥ ಕೆಲವು ದೇಶಗಳು ಕೋವಿಡ್‌ ಕುರಿತ ನೀತಿಯನ್ನು ಮರುಯೋಚಿಸುತ್ತಿವೆ. ಲಾಕ್‌ಡೌನ್‌, ಪ್ರಯಾಣ ನಿಷೇಧಗಳು ಮತ್ತು ಇತರ ನಿರ್ಬಂಧಿತ ಕ್ರಮಗಳಿಂದ ದೂರ ಸರಿಯುತ್ತಿವೆ.

ನಾವು ಖಂಡಿತವಾಗಿಯೂ ಇಂದು ಅನೇಕ ಕಾರಣಗಳಿಗಾಗಿ ಎರಡು ವರ್ಷಗಳ ಹಿಂದೆ ಇದ್ದುದಕ್ಕಿಂತ ಉತ್ತಮ ಸ್ಥಾನದಲ್ಲಿದ್ದೇವೆ:

-ರೋಗದ ಬಗ್ಗೆ ನಮಗೆ ಉತ್ತಮ ತಿಳಿವಳಿಕೆ ಇದೆ, ಚಿಕಿತ್ಸಾ ವಿಧಾನಗಳು ಈಗ ಲಭ್ಯವಿವೆ ಮತ್ತು ಇದಕ್ಕಾಗಿಯೇ ಶಿಷ್ಟಾಚಾರ ಮಾಡಲಾಗಿದೆ.

– ಲಸಿಕೆ ಮತ್ತು ಬೂಸ್ಟರ್‌ ಡೋಸ್‌ಗಳೆರಡೂ ಈಗ ಉತ್ತಮ ಮತ್ತು ಆರೋಗ್ಯ ಸೌಲಭ್ಯಗಳೊಂದಿಗೆ ಲಭ್ಯವಿವೆ.

-ಮೊದಲ, 2ನೇ ಮತ್ತು 3ನೇ ಅಲೆಗಳ ಸಮಯದಲ್ಲಿ ವೈರಸ್‌ಗೆ ವ್ಯಾಪಕವಾಗಿ ಒಡ್ಡಿಕೊಂಡಿದ್ದರಿಂದ ಮತ್ತು ಪ್ರಸ್ತುತ ಇರುವ ವೈರಸ್‌ (ಒಮಿಕ್ರಾನ್‌) ಹೆಚ್ಚು ಹರಡಿದರೂ ಕಡಿಮೆ ಅಪಾಯಕಾರಿಯಾಗಿದೆ.

–  ಈ ಎಲ್ಲ ಅಂಶಗಳು ಕೋವಿಡ್‌ನೊಂದಿಗೆ ಸಹಬಾಳ್ವೆಗೆ ಅನುಕೂಲಕರವಾಗಿವೆ. ಆದಾಗ್ಯೂ ಇತಿಹಾಸವು ಪುನ ರಾವರ್ತನೆಯಾಗದಂತೆ ನಾವು ಮುಂಜಾಗ್ರತ ಕ್ರಮ ಗಳನ್ನು ಬಿಡಬಾರದು ಎಂಬುದು ನೆನಪಿನಲ್ಲಿ ಇರಬೇಕು.

ನಾವು ಸಾಮಾನ್ಯ ಸ್ಥಿತಿಗೆ ಮರಳುವುದು ಹೇಗೆ?
ಕೋವಿಡ್‌ನ‌ ಸುರಕ್ಷತ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ್ಗೆ ಕೈ ತೊಳೆದುಕೊಳ್ಳುವುದು ಮತ್ತು ಹೆಚ್ಚು ಜನ ಗುಂಪು ಸೇರದಂತೆ ನೋಡಿಕೊಳ್ಳುವುದು, ಸಾಮೂಹಿಕ ಲಸಿಕಾ ಕಾರ್ಯಕ್ರಮ ವನ್ನು ಇನ್ನಷ್ಟು ಹೆಚ್ಚಳ ಮಾಡುವುದು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸುವ ಮೂಲಕ ನಮ್ಮ ಜೀವನವನ್ನು ಸಾಮಾನ್ಯ ಸ್ಥಿತಿಗೆ ಮರಳಿಸಬಹುದು.

ಈಗಾಗಲೇ ಐಸಿಎಂಆರ್‌ ಸೂಚಿಸಿದಂತೆ, ಪರೀಕ್ಷಾ ನೀತಿ ಯಲ್ಲಿ ಬದಲಾವಣೆ ತರಬೇಕಾದ ಅಗತ್ಯತೆ ಇದೆ. ರೋಗಲಕ್ಷಣ ಇರುವ ರೋಗಿಗಳಿಗೆ ಮತ್ತು ಹೆಚ್ಚಿನ ಅಪಾಯವಾಗಬಹುದಾದ ಜನರಿಗೆ ಮಾತ್ರ ಪರೀಕ್ಷೆಯನ್ನು ನಿರ್ಬಂಧಿಸಬೇಕು, ಇದರಿಂದ ನಮ್ಮ ಸಂಪನ್ಮೂಲಗಳನ್ನು ಕೋವಿಡ್‌ ನಿರ್ವಹಣೆಯ ಇತರ ಅಂಶಗಳಿಗೆ ಉತ್ತಮವಾಗಿ ಬಳಸಬಹುದಾಗಿದೆ. ರೋಗ ಲಕ್ಷಣವಿಲ್ಲದ ಜನರಿಗೆ ನಮ್ಮ ಕ್ವಾರಂಟೈನ್‌ ಮತ್ತು ಐಸೋಲೇಶನ್‌ ನೀತಿಗಳನ್ನು ನಾವು ಮರುಪರಿಶೀಲಿಸ ಬೇಕಾಗಿದೆ.

ಸರಕಾರವು 160 ಕೋಟಿ ಡೋಸ್‌ಗಳನ್ನು ನೀಡುವ ಅತ್ಯುತ್ತಮ ಕೆಲಸವನ್ನು ಮಾಡಿದೆ. ಹಾಗೆಯೇ ಹೈರಿಸ್ಕ್ ಜನಸಂಖ್ಯೆಗೆ ಮುನ್ನೆಚ್ಚರಿಕೆ ಡೋಸ್‌ ಅನ್ನು ನೀಡುತ್ತಿದೆ. 15-18 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆಯನ್ನು ನೀಡುತ್ತಿದೆ.  ದೇಶದ ನಾಗರಿಕರಿಗೆ ಉಚಿತವಾಗಿ ಲಸಿಕೆಯನ್ನು ನೀಡುವ ಈ ಅಭೂತಪೂರ್ವ ಕಾರ್ಯವನ್ನು ಮಾಡಿದ್ದಕ್ಕಾಗಿ ಸರಕಾರವನ್ನು ಅಭಿನಂದಿಸಬೇಕು. ಈಗ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಿದ್ದರಿಂದ ಕೊರತೆ ಇಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಲಸಿಕೆ ವಿತರಣೆಯ ಆರೋಗ್ಯ ಮೂಲಸೌಕರ್ಯ ಮತ್ತು ಸಾಗಾಣಿಕೆಯನ್ನು ಬಲಪಡಿಸಿದ್ದೇವೆ.

ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಲು ಇದು ಸಕಾಲ ವಾಗಿದೆ. ಅಂದರೆ ಸರಕಾರ ಮತ್ತು ಖಾಸಗಿ ವಲಯದಲ್ಲಿ ಮುನ್ನೆಚ್ಚರಿಕೆ (ಬೂಸ್ಟರ್‌) ಡೋಸ್‌ ಅನ್ನು ಹೆಚ್ಚಳ ಮಾಡಬೇಕು. ವೈದ್ಯರ ಸಲಹೆಯನ್ನು ಆಧರಿಸಿ ಇತರ ಯಾವುದೇ ಲಸಿಕೆಯನ್ನು ನೀಡಲು ಅವಕಾಶ ಮಾಡಿಕೊಡಬೇಕು.

ಪ್ರಯಾಣ ಮತ್ತು ಸಾರ್ವಜನಿಕ ಚಟುವಟಿಕೆಗಳ ವಿಚಾರದಲ್ಲಿ ಲಸಿಕೆ ಪ್ರಮಾಣ ಪತ್ರ ಕಡ್ಡಾಯ ನಿಯಮ ಇನ್ನೂ ಹೆಚ್ಚು ಕಾಲ ಇರುತ್ತದೆ. ಕೊರೊನಾದ ನಿಯಂತ್ರಣಕ್ಕಾಗಿ ಈ ರೀತಿ ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.

ಕೊರೊನಾ ನಿರ್ಬಂಧಗಳಿಂದಾಗಿ ನಮ್ಮಲ್ಲಿ ಹೆಚ್ಚಿನವರು ಸುಸ್ತಾಗಿದ್ದಾರೆ. ಅಲ್ಲದೆ ಇದು ನಮ್ಮಲ್ಲಿ ಹತಾಶೆಯ ಹಂತವನ್ನೂ ತಲುಪಿದೆ. ಹೀಗಾಗಿಯೇ ನಾವು ನಮ್ಮ ಜೀವನ ಸಾಮಾನ್ಯ ಸ್ಥಿತಿಗೆ ಬರಬೇಕು ಎಂದು ಕಾಯುತ್ತಿದ್ದೇವೆ. ಇದಕ್ಕಾಗಿಯೇ ಸರಕಾರ ಮತ್ತು ಜನತೆ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿಯೇ ಯಾವುದೇ ದೇಶವು ನಾಗರಿಕರ ಸಹಾಯವಿಲ್ಲದೇ ಕೊರೊನಾದಂಥ ಸಾಂಕ್ರಾಮಿಕ ರೋಗದ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ.

ಕೋವಿಡ್‌ನೊಂದಿಗೆ ಶಾಂತಿಯುತ ಸಹಬಾಳ್ವೆಗೆ ಮರಳಲು ಈ ದೇಶದ ನಾಗರಿಕರಾದ ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಜತೆಗೆ ಕೋವಿಡ್‌ ಮತ್ತೆ ಮತ್ತೆ ಉಗ್ರ ರೂಪದಲ್ಲಿ ರೂಪಾಂತರವಾಗದಿದ್ದರೆ ಮುಂದಿನ ದಿನಗಳಲ್ಲಿ ಸುಲಭವಾಗಿ ಉಸಿರಾಡಲು ನಮಗೆ ದೊಡ್ಡ ಅವಕಾಶದ ಕಿಟಕಿ ಇದೆ ಎಂದು ನಾನು ನಂಬುತ್ತೇನೆ.

-ಡಾ| ಸುದರ್ಶನ ಬಲ್ಲಾಳ್‌
ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next