Advertisement

ಅಳ್ನಾವರ: ಕಾಳಿ ಕುಡಿಯುವ ನೀರು ಯೋಜನೆ ರಾಷ್ಟ್ರ ಪ್ರಶಸ್ತಿಗೆ ಭಾಜನ

01:48 PM Jul 29, 2023 | Team Udayavani |

ಅಳ್ನಾವರ: ಇಲ್ಲಿನ ಕಾಳಿ ನದಿ ನೀರು ಯೋಜನೆಯ ಸುವ್ಯವಸ್ಥಿತ ಹಾಗೂ ಆಧುನಿಕ ಜಾಲಕ್ಕೆ ಕೇಂದ್ರ ನಗರ ವಸತಿ ಬಡತನ
ನಿರ್ಮೂಲನಾ ಸಚಿವಾಲಯ ರಾಷ್ಟ್ರಮಟ್ಟದ ಪ್ರಶಸ್ತಿ ಘೋಷಣೆ ಮಾಡಿದ್ದು, ಪಟ್ಟಣದ ಹಿರಿಮೆ, ಗರಿಮೆ ಹೆಚ್ಚಿಸಿದೆ.

Advertisement

ದೇಶದ 21 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಇಲಾಖೆಗಳು ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯ ಮಾನದಂಡ ಇಟ್ಟುಕೊಂಡು 251 ಪ್ರಶ್ನೆ ಕೇಳಲಾಗಿತ್ತು. ಇಲ್ಲಿನ ಪಪಂ ಎಲ್ಲ ಮಾಹಿತಿಯುಳ್ಳ ಪ್ರಸ್ತಾವನೆಯನ್ನು ಮಾರ್ಚ್‌ನಲ್ಲಿ ಸಲ್ಲಿಸಿತ್ತು. ನಗರ ಸ್ಥಳೀಯ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಗಳಲ್ಲಿ ಅಂತಿಮ 51 ಅರ್ಜಿಗಳಲ್ಲಿ ಅಳ್ನಾವರದ ಪ್ರಸ್ತಾವನೆ ಸ್ವೀಕೃತವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದಾಂಡೇಲಿಯ ಕಾಳಿ ನದಿಯಿಂದ 36 ಕಿಮೀ ಅಂತರದ ಅಳ್ನಾವರ ಪಟ್ಟಣಕ್ಕೆ ನೀರು ಒದಗಿಸುವ ಕಾಮಗಾರಿ ಕಳೆದ ವರ್ಷ 71
ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನಗೊಂಡಿದೆ. ಇಲ್ಲಿನ 4500ಕ್ಕೂ ಅಧಿಕ ಮನೆಗಳಿಗೆ ದಿನದ 24 ಗಂಟೆ ಶುದ್ಧ ನೀರು ಒದಗಿಸಲಾಗುತ್ತಿದ್ದು, ದೇಶದಲ್ಲಿಯೇ ಎರಡನೆ ಮತ್ತು ರಾಜ್ಯದಲ್ಲಿ ಪ್ರಥಮ ಸ್ಥಾನ ದೊರೆತಿದೆ.

ಇನ್ನೂ 500ಕ್ಕೂ ಹೆಚ್ಚು ಸಂಪರ್ಕ ಬೇಡಿಕೆ ಇದೆ ಎಂದು ಮೂಲಗಳು ತಿಳಿಸಿವೆ. ನಿತ್ಯ 32 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ. ಸದಾ ನೀರು ದೊರೆಯುತ್ತಿದ್ದು, ಹಿಂದೆ ಇದ್ದ ಸಂಗ್ರಹ ಮಾಡಿಕೊಳ್ಳುವ ಸಂಪ್ರದಾಯ ದೂರವಾಗಿದೆ. ಗುಡ್ಡ, ಬೆಟ್ಟದಿಂದ ಹರಿದು ಬರುವ ಕಾಳಿ ನದಿ ನೀರು ಸಹಜವಾದ ಲವಣಾವಂಶಗಳಿಂದ ಕೂಡಿದೆ. ಸಮೀಪದ ಹಳಿಯಾಳ ತಾಲೂಕಿನ ಜಾವಳ್ಳಿ ಗ್ರಾಮದಲ್ಲಿ ತೆರೆದ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ತರಲಾಗುತ್ತಿದೆ. ವಿವಿಧೆಡೆ ಮೇಲ್ಮಟ್ಟದ ಜಲಾಗಾರ ಕಟ್ಟಿ ಕಡಿಮೆ ವೆಚ್ಚದಲ್ಲಿ ಉತ್ತಮ ನೀರು ನೀಡಲಾಗುತ್ತಿದೆ. ನೀರಿನ ಗುಣ ಮಟ್ಟ ತಿಳಿಯಲು ಪಟ್ಟಣ ಪಂಚಾಯ್ತಿ ಕಚೇರಿ ಎದುರು ದೊಡ್ಡ ಗಾತ್ರದ ಟಿಜಿಟಲ್‌ ಬೋರ್ಡ್‌ ಹಾಕಲಾಗಿದೆ. ಪ್ರಾಯೋಗಿಕವಾಗಿ ಆರಂಭವಾದ ಯೋಜನೆ ಒಂದು ವರ್ಷ ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಸದ್ಯ ಈ ಜಾಲವನ್ನು ಧಾರವಾಡ ಜಲಮಂಡಳಿ ನಿರ್ವಹಿಸುತ್ತಿದೆ.

ತಪ್ಪಿದ ಬೇಸಿಗೆ ಪರದಾಟ; ತಗ್ಗಿದ ಆರ್ಥಿಕ ಹೊರೆ ಮಲೆನಾಡಿನ ಸೆರಗಿನ ಪಟ್ಟಣದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ನೀರಿನ ಮೂಲ ಡೌಗಿ ನಾಲಾ ಸಂಪೂರ್ಣ ಬತ್ತಿ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೆ ನೀರು ದೊರೆಯುತ್ತಿತ್ತು. ನೀರಿನ ಮೂಲ ಹುಡುಕಿಕೊಂಡು ಜನ ಅಲೆಯುತ್ತಿದ್ದರು. ಸಮೀಪದ ಹೂಲಿಕೇರಿ ಇಂದಿರಮ್ಮನ ಕೆರೆಯ ನೀರು ಬಿಡಿಸಿಕೊಳ್ಳುವ ಅನಿವಾರ್ಯತೆ ಇತ್ತು. ಅದು ಮುಗಿದ ಬಳಿಕ ಬೋರ್‌ವೆಲ್‌ ಅಥವಾ ಕೊಳವೆ ಬಾವಿ ನೀರು ಗತಿ ಆಗಿತ್ತು. ಎಲ್ಲ ಜಲಮೂಲಗಳು ಬತ್ತಿದಾಗ ಟ್ಯಾಂಕರ್‌ ನೀರು ತಂದು ನೀಡಲಾಗುತ್ತಿತ್ತು. ಒಂದು ವರ್ಷ ಒಂದು ಕೋಟಿ ರೂ.ವನ್ನು ಟ್ಯಾಂಕರ್‌ ನೀರಿಗೆ ನೀಡಲಾಗಿತ್ತು. ಈ ಎಲ್ಲ ಆರ್ಥಿಕ ಹೊರೆ ಸದ್ಯ ನೀಗಿದೆ.

Advertisement

ವಿವಿಧ ಮೂಲಗಳ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ನೀರಿನ ತೊಂದರೆಯಿಂದ
ಪಟ್ಟಣದ ಬೆಳವಣಿಗೆ ಕುಂಠಿತವಾಗಿತ್ತು. ನಲ್ಲಿಯಲ್ಲಿನ ನೀರು ಪಡೆಯಲು ಕಡ್ಡಾಯವಾಗಿ ವಿದ್ಯುತ್‌ ಮೋಟಾರ್‌
ಅಳವಡಿಸಬೇಕಾಗಿತ್ತು. ಕಾಳಿ ನದಿ ನೀರು ಬಂದ ನಂತರ 60 ಲಕ್ಷ ಯೂನಿಟ್‌ ವಿದ್ಯುತ್‌ ಉಳಿತಾಯ ಆಗುತ್ತಿದೆ.
ರವಿಕುಮಾರ, ಜಲಮಂಡಳಿ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next